ಈಗಲಾದರೂ ಜಿಲ್ಲಾಡಳಿತ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಿ
ಮೈಸೂರು: ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ ಮೈಸೂರಿಗೆ ಕೆಟ್ಟ ಹೆಸರು ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡಿದ್ದು, ಘಟನಾ ಸ್ಥಳದಲ್ಲೇ ಸಿಸಿ ಕ್ಯಾಮರಾ ಇತ್ತು. ಅದರ ಕೆಳ ಭಾಗದಲ್ಲೇ ಬ್ಲಾಸ್ಟ್ ಆಗಿದೆ. ಆದರೆ, ಅದರಲ್ಲಿ ಸ್ಫೋಟದ ವಿಡಿಯೋ ಇಲ್ಲ. ಅಲ್ಲಿಗೆ ಅರಮನೆಯಲ್ಲಿರುವ ಸಿಸಿ ಕ್ಯಾಮರಾಗಳು ಕಳಪೆಯಾಗಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಮೈಸೂರು ಬದುಕಿರುವುದೇ ಪ್ರವಾಸೋದ್ಯಮದಿಂದ. ಈ ಕ್ಷೇತ್ರದಿಂದ ಅನೇಕರ ಹೊಟ್ಟೆ ತುಂಬುತ್ತಿದೆ. ಇಂತಹ ಘಟನೆ ನಡೆದರೂ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಒಂದು ಮಾತನಾಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ಬೀದಿ ಬದಿ ವ್ಯಾಪಾರಸ್ಥರು ಕೂಡ ಬದುಕಬೇಕು. ಆದರೆ, ಇಂತಹ ಅಪಾಯಕಾರಿ ಹೀಲಿಯಂ ಬಳಕೆ ಮಾಡೋದು ಸರಿಯೇ? ಬೀದಿ ಬದಿ ವ್ಯಾಪಾರಸ್ಥರಿಗೆ ನಿಗದಿತ ಸ್ಥಳ ನಿಯೋಜನೆ ಮಾಡಿ.
ವಿಮೆ ಮಾಡಿಸಿ ಅವರಿಗೆ ಗುರುತಿನ ಚೀಟಿ ಕೊಡಿ. ಆದರೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಈಗಲಾದರೂ ಜಿಲ್ಲಾಡಳಿತ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಿ ಎಂದು ಆಗ್ರಹಿಸಿದರು.
ಮೈಸೂರಿನಲ್ಲಿ ಆಯೋಜನೆಗೆ ಉದ್ದೇಶಿಸಿರುವ ಅಹಿಂದ ಸಮಾವೇಶದ ಕುರಿತು ಎಚ್.ವಿಶ್ವನಾಥ್ ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವೇ ಒಂದು ಅಹಿಂದ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೋ ಅಥವಾ ಬೇರೆ ಕಡೆ ಇದ್ದಾರೋ. ಮೂಲ ಕಾಂಗ್ರೆಸ್ಸಿಗರು ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ ಏಕೆ? ಕಾಂಗ್ರೆಸ್ ಮುಗಿಸೋಕೆ ಸಿದ್ದರಾಮಯ್ಯ ಬಂದಿರೋದು ಎಂದು ಗುಡುಗಿದರು.
ಡಿ.ಕೆ.ಶಿವಕುಮಾರ್ ಪಾರ್ಟಿಗೆ ದುಡಿದಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಈ ಹಿಂದೆ ನಾನು ಪತ್ರ ಬರೆದಿದ್ದೆ. ಈಗ ಆ ಪತ್ರ ಓದೋರು ಯಾರಿದ್ದಾರೆ. ರಾಹುಲ್ ಗಾಂಧಿಗೆ ಪುರುಸೊತ್ತು ಎಲ್ಲಿದೆ. ಸಿದ್ದರಾಮಯ್ಯ ಪತ್ರ ಓದೋದೇ ಇಲ್ಲ.
ಖರ್ಗೆ ಅವರು ನಮ್ಮ ರಾಜ್ಯದವರೇ ಅಂತ ಕೇಳಿದರೆ ಅವರು ಹೈಕಮಾಂಡ್ ಕೇಳಿ ಅಂತಾರೆ. ಇದೆಲ್ಲ ನೋಡಿದರೆ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಅನ್ನೋ ಹಾಗೆ ಆಗಿದೆ ಎಂದು ಲೇವಡಿ ಮಾಡಿದರು.