ಜೈಲಿಗೆ ಹೋಗಿ ಬಂದವರಿಗೆ ಜೈಕಾರ ಹಾಕಿದರೆ ದೇಶದ ಭವಿಷ್ಯ ಏನು?

ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ನ್ಯಾಯಮೂರ್ತಿ ಸಂತೋಷ್ ಹೆಗಡೆ, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಡಾ.ನರೇಂದ್ರ ಕುಮಾರ್, ಕಾನೂನು ಶಾಲೆ ಮುಖ್ಯಸ್ಥ ಪ್ರೊ.ಆರ್.ಟಿ.ಮೂರ್ತಿ ಇತರರಿದ್ದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ನ್ಯಾಯಮೂರ್ತಿ ಸಂತೋಷ್ ಹೆಗಡೆ, ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಡಾ.ನರೇಂದ್ರ ಕುಮಾರ್, ಕಾನೂನು ಶಾಲೆ ಮುಖ್ಯಸ್ಥ ಪ್ರೊ.ಆರ್.ಟಿ.ಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 76ನೇ ವರ್ಷದ ಸಂವಿಧಾನ ದಿನಾಚರಣೆ ಕಾರ್ಯಕ್ರಮ
  • ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಳವಳ
  • ದಶಕದಿಂದ ದಶಕಕ್ಕೆ ದೇಶ ಹಗರಣಮಯ
ಮೈಸೂರು: ದಶಕದಿಂದ ದಶಕಕ್ಕೆ ದೇಶ ಲಕ್ಷಾಂತರ ಕೋಟಿ ರೂ.ಗಳ ಹಗರಣಗಳನ್ನು ಕಾಣುತ್ತಿದೆ. ಗುತ್ತಿಗೆದಾರರು ಹಿಂದಿನ ಸರ್ಕಾರದಲ್ಲಿ ಶೇ.40 ಕಮಿಷನ್ ಇರುವುದಾಗಿ ಹೇಳುತ್ತಿದ್ದರು. ಈಗ ಅದೇ ಗುತ್ತಿಗೆದಾರರು ಶೇ.60 ಕಮಿಷನ್ ಇರುವುದಾಗಿ ಆರೋಪಿಸಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿಷಾದಿಸಿದರು.
ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಕಾನೂನು ಶಾಲೆ ಸಹಯೋಗದಲ್ಲಿ ಸ್ಕೂಲ್ ಆಫ್ ಪ್ಲ್ಯಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 76ನೇ ವರ್ಷದ ಸಂವಿಧಾನ ದಿನಾಚರಣೆಯಲ್ಲಿ ಭಾರತ ಮತ್ತು ಸಮಕಾಲೀನ ಸಮಾಜ ವಿಷಯ ಕುರಿತು ಮಾತನಾಡಿದರು.
ರಾಷ್ಟ್ರದಲ್ಲಿ ಲಕ್ಷಾಂತರ ಕೋಟಿ ರೂ. ಹಗರಣಗಳು ನಡೆಯುತ್ತಿವೆ. ಜೀಪ್ ಹಗರಣ, ಬೋಫೋರ್ಸ್‌, ಕಾಮನ್‌ವೆಲ್ತ್ ಗೇಮ್ಸ್, 2ಜಿ ಹಗರಣ ಸೇರಿದಂತೆ ಹಲವು ಭಾರಿ ಹಗರಣಗಳು ನಡೆದಿವೆ. ಸರ್ಕಾರ ಮಂಜೂರು ಮಾಡುವ 1 ರೂ.ನಲ್ಲಿ ಕೇವಲ 15 ಪೈಸೆ ಖರ್ಚು ಮಾಡಲಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ಹಿಂದೆ ಜೈಲಿಗೆ ಹೋಗಿ ಬಂದವರ ಮನೆಯ ಹತ್ತಿರ ಹೋಗಬೇಡ ಎನ್ನುತ್ತಿದ್ದರು. ತಪ್ಪು ಮಾಡಲು ಹೆದರುತ್ತಿದ್ದರು. ಈಗ ಜೈಲಿಗೆ ಹೋಗಿ ಬಂದವರಿಗೆ ಜೈಕಾರ ಜತೆಗೆ ಸೇಬಿನ ಹಾರ ಹಾಕಿ ಸ್ವಾಗತಿಸುತ್ತಿದ್ದಾರೆ. ಹೀಗಾದರೆ ದೇಶದ ಭವಿಷ್ಯ ಏನು ಎಂದು ಕಳವಳ ವ್ಯಕ್ತಪಡಿಸಿದರು.
ಯಾರನ್ನೂ ಸನ್ಯಾಸಿಯಾಗುವಂತೆ ನಾನು ಹೇಳುವುದಿಲ್ಲ. ಚೆನ್ನಾಗಿ ಓದಿ ಕೆಲಸ ಪಡೆಯಬೇಕು. ರಾಜಕಾರಣಿ ಕೂಡ ಆಗಬಹುದು. ಆದರೆ, ಯಾವುದೇ ಹುದ್ದೆ ಪಡೆದ ಮೇಲೆ ಅಲ್ಲಿ ನನಗೆ ಏನಿದೆ ಅನ್ನದೆ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತೀಚೆಗೆ ಅಧಿಕಾರಿಗಳು, ರಾಜಕಾರಣಿ ಮನೆ ಮೇಲೆ ದಾಳಿ ಮಾಡಿದಾಗ ಕೋಟ್ಯಂತರ ರೂ. ಸಿಕ್ಕಿತು. ಲೋಕಾಯುಕ್ತನಾಗಿ ಮೂವರು ಮುಖ್ಯಮಂತ್ರಿಗಳ ವಿರುದ್ಧ ವರದಿ ಕೊಟ್ಟಿದ್ದೇನೆ. ಲೋಕಾಯುಕ್ತನಾಗಿ ತುಂಬ ಅನ್ಯಾಯವನ್ನು ಕಂಡೆ. ಅಧಿಕಾರಿಗಳು ಸಂಬಳ ಸಹಿತ ಎಲ್ಲ ಸೌಲಭ್ಯ ಪಡೆದು ದುರಾಸೆ ಬಿಟ್ಟಿಲ್ಲ. ಇದ್ದುದರಲ್ಲಿ ತೃಪ್ತಿಪಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ವಿಳಂಬವಾಗುತ್ತಿದೆ. ಒಂದು ಕೇಸ್ 15ರಿಂದ 20 ವರ್ಷಗಳು ನಡೆಯುತ್ತಿದೆ. ಹೀಗಾದರೆ ಜನರಲ್ಲಿ ಕಾನೂನಿನ ಮೇಲೆ ನಂಬಿಕೆ ಹೋಗುತ್ತದೆ ಎಂದರು.
ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ನಮ್ಮದಾಗಿದೆ. ಇದನ್ನು ವಿದ್ಯಾರ್ಥಿಗಳು ಓದಿ ಅರ್ಥ ಮಾಡಿಕೊಳ್ಳಬೇಕು. ಸಮಾಜ ಬದಲಾವಣೆಗೆ ಕೊಡುಗೆ ನೀಡಬೇಕು. ನೇಪಾಳದಲ್ಲಿ ಆದದ್ದು ಭಾರತದಲ್ಲಿ ನಡೆಯಬಾರದು. ಕಾಂತ್ರಿಯಿಂದ ಯಾರು ಗೆದ್ದವರಿಲ್ಲ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಡಾ.ನರೇಂದ್ರಕುಮಾರ್, ಕಾನೂನು ಶಾಲೆಯ ಮುಖ್ಯಸ್ಥ ಪ್ರೊ.ಆರ್.ಟಿ. ಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net