ನೀರಿನ ಬಿಲ್ ಶುಲ್ಕ, ಬಡ್ಡಿ ಮನ್ನಾ ಮಾಡಿ : ಸದನದಲ್ಲಿ ಶಾಸಕ ಕೆ.ಹರೀಶ್‌ಗೌಡ ಒತ್ತಾಯ

 ಕೆ.ಹರೀಶ್‌ಗೌಡ
ಕೆ.ಹರೀಶ್‌ಗೌಡ
Published on
ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಜಸ್ಕೋ ಸಂಸ್ಥೆಯು ಕುಡಿಯುವ ನೀರಿನ ಸಂಪರ್ಕದ ಮೀಟರ್‌ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದರಿಂದ ಬಳಕೆದಾರರು ಬಿಲ್ ಪಾವತಿಸಿಲ್ಲ. ಹೀಗಾಗಿ ಕುಡಿಯುವ ನೀರಿನ ಹಳೆಯ ಬಿಲ್‌ನ ಶುಲ್ಕ ಹಾಗೂ ಬಡ್ಡಿಯನ್ನು ಒಂದು ಬಾರಿಗೆ ಮನ್ನಾ ಮಾಡುವಂತೆ ಶಾಸಕ ಕೆ.ಹರೀಶ್‌ಗೌಡ ಒತ್ತಾಯಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದ ಅವರು, ಹೊಸ ಮತ್ತು ಹಳೇ ಸಂಪರ್ಕಗಳ ಬೈಪಾಸ್ ಸಂಪರ್ಕ, ಮೀಟರ್ ಅನ್ನು ಎತ್ತರದ ಮಟ್ಟದಲ್ಲಿ ಅಳವಡಿಸಿದ್ದರಿಂದ ಗಾಳಿಯಿಂದಾಗಿ ಮೀಟರ್ ಚಾಲನೆಯಾಗಿದೆ. ಹೀಗಾಗಿ ಅವೈಜ್ಞಾನಿಕವಾಗಿ ನೀಡಿರುವ ಈ ಬಿಲ್ಲು ಸಾರ್ವಜನಿಕರಿಗೆ ಹೊರೆಯಾಗಿದೆ. ಇದನ್ನು ಸರಿಪಡಿಸದ ಕಾರಣ ಸಾರ್ವಜನಿಕರು ಬಿಲ್ ಪಾವತಿಸಿಲ್ಲ. ಈ ದೋಷವನ್ನು ಸರಿಪಡಿಸುವುದಲ್ಲದೆ
ಒಂದು ಬಾರಿ ಬಿಲ್‌ನ ಶುಲ್ಕ ಹಾಗೂ ಬಡ್ಡಿ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಜಸ್ಕೋ ವತಿಯಿಂದ ಕುಡಿಯುವ ನೀರಿನ ಮೀಟರ್ ಅಳವಡಿಸಿ, ಹೊಸ ಸಂಪರ್ಕಗಳನ್ನು ನೀಡಲಾಗಿದ್ದು, ಹೊಸ ಸಂಪರ್ಕ ಹಾಗೂ ಹಳೇ ಸಂಪರ್ಕ ಎರಡೂ ಸಂಪರ್ಕಗಳಿಂದ ನೀರನ್ನು ಪಡೆಯುವ ಉದ್ದೇಶದಿಂದ ಬೈಪಾಸ್ ಮಾಡಿಕೊಳ್ಳಲಾಗಿರುತ್ತದೆ. ಹೊಸ ಸಂಪರ್ಕ ಮತ್ತು ಹಳೇ ಸಂಪರ್ಕದ ಬೈಪಾಸ್‌ನಿಂದಾಗಿ ಬಿಲ್ಲಿನ ಮೊತ್ತವು ಹೆಚ್ಚಾಗಿರುವ ಸಾಧ್ಯತೆಗಳಿರುತ್ತದೆ. ಹೊಸ ಸಂಪರ್ಕ ಮತ್ತು ಹಳೇ ಸಂಪರ್ಕದ ಬೈಪಾಸ್‌ನಿಂದಾಗಿ ಹೆಚ್ಚುವರಿ ಮಾಪನ ದಾಖಲಾಗಿರುವ ಪ್ರಕರಣಗಳಲ್ಲಿ ಬೈಪಾಸ್ ಕಡಿತಗೊಳಿಸಿದ ನಂತರದ ಮೂರು ತಿಂಗಳ ಸರಾಸರಿ ದಾಖಲಾತಿಯನ್ನು ಲೆಕ್ಕಾಚಾರ ಮಾಡಿ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಅದಾಲತ್ ಮುಖಾಂತರ ಅರ್ಜಿಗಳನ್ನು ಸ್ವೀಕರಿಸಿ, ಇತ್ಯರ್ಥಪಡಿಸಲು ಪಾಲಿಕೆ ವತಿಯಿಂದ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಗಾಳಿಯಿಂದ ಚಲಿಸಿರುವ ನೀರಿನ ಮಾಪಕ ಪ್ರಕರಣದಲ್ಲಿಯೂ ಯು ಶೇಪ್‌ನಲ್ಲಿ ಮೀಟರ್ ಅಳವಡಿಸಿದ ನಂತರದ ಮೂರು ತಿಂಗಳ ಸರಾಸರಿ ದಾಖಲಾತಿಯನ್ನು ಪೂರ್ವಾನ್ವಯವಾಗಿ ಲೆಕ್ಕಾಚಾರ ಮಾಡಿ ಅದಾಲತ್ ಮುಖಾಂತರ ಅರ್ಜಿಗಳನ್ನು ಸ್ವೀಕರಿಸಿ, ಪಾಲಿಕೆಯ ಹಂತದಲ್ಲಿ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net