ವಿವೇಕಾನಂದರು, ಸನಾತನ ಧರ್ಮದ ಪಥದಲ್ಲಿ ಮುನ್ನಡೆಯೋಣ: ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಕರೆ

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿದರು. ಸ್ವಾಮಿ ನಿತ್ಯಸ್ಥಾನಂದ, ಸ್ವಾಮಿ ಮುಕ್ತದಾನಂದ, ಸ್ವಾಮಿ ಆತ್ಮಜ್ಞಾನಂದ, ಡಾ.ಸಿ.ಪಿ.ಕೃಷ್ಣಕುಮಾರ್, ಪ್ರತಾಪ್ ಸಿಂಹ, ಟಿ.ಎಸ್.ಶ್ರೀವತ್ಸ, ಡಾ.ಲೀಲಾ ಪ್ರಕಾಶ್, ಡಾ.ಚಿದಾನಂದ ಗೌಡ ಇತರರಿದ್ದರು.
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿದರು. ಸ್ವಾಮಿ ನಿತ್ಯಸ್ಥಾನಂದ, ಸ್ವಾಮಿ ಮುಕ್ತದಾನಂದ, ಸ್ವಾಮಿ ಆತ್ಮಜ್ಞಾನಂದ, ಡಾ.ಸಿ.ಪಿ.ಕೃಷ್ಣಕುಮಾರ್, ಪ್ರತಾಪ್ ಸಿಂಹ, ಟಿ.ಎಸ್.ಶ್ರೀವತ್ಸ, ಡಾ.ಲೀಲಾ ಪ್ರಕಾಶ್, ಡಾ.ಚಿದಾನಂದ ಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ
  • ‘ಸಾಹಿತ್ಯ ಸೇವೆ’ ಶ್ರೀ ರಾಮಕೃಷ್ಣ ಆಶ್ರಮದ ಕನ್ನಡ ಪ್ರಕಟಣೆಗಳು ಮತ್ತು ವಿವೇಕಪ್ರಭ ಮಾಸಪತ್ರಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮ
  • ಸಾಹಿತಿ ಎಚ್.ಲಕ್ಷ್ಮೀನರಸಿಂಹ ಶಾಸ್ತ್ರಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ಎಲ್.ಪ್ರಸನ್ನಾಕ್ಷಿ, ಡಾ.ಕೆ.ಅನಂತರಾಮು, ಡಾ.ಎಚ್.ಎನ್.ಮುರಳೀಧರ ಹಾಗೂ ಮಯೂರ್ ಗ್ರಾಫಿಕ್ಸ್‌ನ ಪಾರ್ಥ ಸಾರಥಿ ಅವರನ್ನು ಅಭಿನಂದಿಸಲಾಯಿತು
ಮೈಸೂರು: ಜಾತಿ, ಕುಲ, ಪಂಗಡಗಳ ಎಲ್ಲೆಯನ್ನು ಮೀರಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಕ್ತಿದಾಯಕ ವಿಚಾರ ಧಾರೆಗಳನ್ನು ರಾಮಕೃಷ್ಣ ಆಶ್ರಮ ತುಂಬುತ್ತಿದೆ. ಸಾಮಾಜಿಕ ಬದ್ಧತೆ ಮತ್ತು ಆಧ್ಯಾತ್ಮಿಕತೆಯು ಶ್ರೀರಾಮಕೃಷ್ಣ ಆಶ್ರಮದ ಸೇವಾ ಕಾರ್ಯದ ಗುರುತಾಗಿದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಅಂಗವಾಗಿ ವಿವೇಕಾನಂದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಸಾಹಿತ್ಯ ಸೇವೆ’ ಶ್ರೀ ರಾಮಕೃಷ್ಣ ಆಶ್ರಮದ ಕನ್ನಡ ಪ್ರಕಟಣೆಗಳು ಮತ್ತು ವಿವೇಕಪ್ರಭ ಮಾಸಪತ್ರಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾನ್ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಮೌಲ್ಯಗಳು, ಶ್ರೀ ಶಾರದಾಮಾತೆಯವರ ಮಹೋನ್ನತ ಸಂದೇಶಗಳು ಮತ್ತು ಸ್ವಾಮಿ ವಿವೇಕಾನಂದರ ಆದರ್ಶಗಳು ನಮ್ಮ ಯುವ ಜನಾಂಗವನ್ನು ಸತ್ಪ್ರಜೆಗಳನ್ನಾಗಿ ರೂಪಿಸಿವೆ. ಪ್ರಬುದ್ಧ ಮತ್ತು ಸದೃಢ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಪ್ರೇರಣೆ ನೀಡಿದ ಸ್ವಾಮಿ ವಿವೇಕಾನಂದರ ಆದರ್ಶವೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ ಆಗಿದೆ ಎಂದರು.
ಸ್ವಾಮಿ ವಿವೇಕಾನಂದರು ಹಾಗೂ ಸನಾತನ ಧರ್ಮವು ಆದೇಶಿಸಿದ ಪಥದಲ್ಲಿ ಮುನ್ನಡೆದು ರಾಷ್ಟ್ರವನ್ನು ಸಮರ್ಥವಾಗಿ ಕಟ್ಟುವ ವಿಷಯದಲ್ಲಿ ನಾವೆಲ್ಲರೂ ಬದ್ಧರಾಗೋಣ ಎಂದರು.
ರಾಮಕೃಷ್ಣ ಆಶ್ರಮದಲ್ಲಿ ನಡೆಯುತ್ತಿದ್ದ ಶಿಕ್ಷಣ, ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವಾರು ಸಾಮಾಜಿಕ ಕೈಂಕರ್ಯಗಳು ನಮ್ಮ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಸಂಗತಿಗಳಾಗಿವೆ. ನೂರು ವರ್ಷಗಳಲ್ಲಿ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಮಾಡಿರುವ ಸಾಧನೆ ಜಗತ್ತಿನ ಹತ್ತಾರು ಸಂಸ್ಥೆಗಳಿಗೆ ಮಾರ್ಗದರ್ಶಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಮೈಸೂರು ರಾಮಕೃಷ್ಣ ಆಶ್ರಮದ ಶತಮಾನ ಸಂಭ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಪ್ರಸ್ತುತ ರಾಮಕೃಷ್ಣ ಮಠ ಮತ್ತು ಮಿಷನಿನ ಪರಮಾಧ್ಯಕ್ಷರಾಗಿರುವ ಪರಮಪೂಜ್ಯ ಗೌತಮಾನಂದಜೀಯವರು ನಮ್ಮ ರಾಜ್ಯದ ಮೂಲದವರೇ ಆಗಿರುವುದು ಕನ್ನಡಿಗರಾದ ನಮ್ಮೆಲ್ಲರ ಸೌಭಾಗ್ಯ ಆಗಿದೆ ಎಂದರು.
ರಾಷ್ಟ್ರಕವಿ ಕುವೆಂಪು ಅವರು 14 ವರ್ಷಗಳ ಕಾಲ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದಲ್ಲಿ ನೆಲೆಸಿ ವಿದ್ಯೆ ಕಲಿತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸರ್ಕಾರದ ಮಂತ್ರಿಗಳಾಗಿ ಉತ್ತಮ ಕೆಲಸ ಮಾಡಿದ್ದ ದಿ.ಎಸ್.ಎಂ.ಕೃಷ್ಣ ಕೂಡ ಇಲ್ಲಿನ ವಿದ್ಯಾರ್ಥಿಯಾಗಿದ್ದರು. ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ, ಸುಪ್ರಸಿದ್ಧ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ, ಸಾಹಿತ್ಯ ದಿಗ್ಗಜ ಪ್ರೊ.ಪ್ರಭುಶಂಕರ, ಪ್ರೊ.ಪ್ರಭುಪ್ರಸಾದ ಮೊದಲಾದವರು ಈ ಆಶ್ರಮದ ರತ್ನಗಳು ಎಂದರು.
ಸ್ವಾಮಿ ಸಿದ್ದೇಶ್ವರಾನಂದರ ಪ್ರಯತ್ನದ ಫಲವಾಗಿ 1925ರಲ್ಲಿ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಸ್ಥಾಪನೆ ಆಯಿತು. ಮೈಸೂರಿನ ಅರಸರು ಸಹ ಶ್ರೀರಾಮಕೃಷ್ಣ ಆಶ್ರಮ ಬೆಳೆಯಲು ಸಹಕಾರ ನೀಡಿದ್ದು, ಸದಾ ಸ್ಮರಿಸಬೇಕು. ಇಲ್ಲಿ ಓದಿದ ಮಕ್ಕಳು ಶಿಸ್ತಿನ ಸಿಪಾಯಿಗಳಾಗಿದ್ದಾರೆ. ಪ್ರಜ್ಞಾವಂತ ನಾಗರಿಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಈ ಶತಮಾನೋತ್ಸವದ ಆಚರಣೆ ಮೈಸೂರಿನ ಇತಿಹಾಸದಲ್ಲಿ ಬಹಳ ಮಹತ್ವದಾಗಿದೆ. ಸತತ 4 ದಿನಗಳ ಕಾಲ ನಡೆಯುತ್ತಿರುವ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮಗಳು ಮೈಸೂರಿನ ಕೀರ್ತಿಪತಾಕೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ವಿವೇಕ ಸ್ಮಾರಕ ಉದ್ಘಾಟನೆಗೆ ಬರಲಿದ್ದಾರೆ ಮೋದಿ

ಮೈಸೂರಿನ ರಾಮಕೃಷ್ಣ ಆಶ್ರಮವನ್ನು ಮುನ್ನೆಡೆಸುತ್ತಿರುವ ಸ್ವಾಮಿ ಮುಕ್ತಿದಾನಂದರು ಆಶ್ರಮಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಸ್ವಾಮಿ ಮುಕ್ತಿದಾನಂದ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ಆಶ್ರಮ ಇನ್ನಷ್ಟು ಕೀರ್ತಿಯನ್ನು ಗಳಿಸಬೇಕೆಂಬುದು ನಮ್ಮ ಆಶಯ. ಇದೀಗ ನೂತನವಾಗಿ ನಿರ್ಮಾಣಗೊಂಡಿರುವ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಗೊಳ್ಳಲು ಬಂದೇ ಬರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶ್ರೀ ರಾಮಕೃಷ್ಣ ಆಶ್ರಮದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಆಶ್ರಮದ ಹತ್ತಾರು ಸಮಾಜಮುಖಿ ಆದರ್ಶಗಳನ್ನು ಮೈಗೊಡಿಸಿಕೊಂಡಿಸಿಕೊಂಡು ದೇಶಕಟ್ಟುವ ಕೆಲಸ ಮಾಡುತ್ತಿದ್ದಾರೆ. ಭಾರತವನ್ನು ಇಡೀ ಜಗತ್ತು ‘ವಿಶ್ವಗುರು’ ಎಂದು ಗುರುತಿಸಿ ಗೌರವಿಸಲು ಕಾರಣೀಭೂತರಾಗಿದ್ದಾರೆ ಎಂದು ಸೋಮಣ್ಣ ತಿಳಿಸಿದರು.

ವಿವೇಕಾನಂದರ ಚಿಂತನೆ ಇದೆ

ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಆಶ್ರಮದ ವಾತಾವರಣದಲ್ಲೇ ವಿವೇಕಾನಂದರ ಚಿಂತನೆ ಇದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿದಿನ ವಿವೇಕಾನಂದರ ಹಾಗೂ ರಾಮಕೃಷ್ಣ ಆದರ್ಶಗಳನ್ನು ಮೈಗೂಡಿಸಿಕೊಂಡು ಪಾಠ ಕೇಳುತ್ತಾರೆ ಎಂದರು.
ನಾವು ಅಲ್ಪ ಕಾಲ ಬದುಕಿದರೂ ಪ್ರಜ್ವಲಿಸಿ ಮರೆಯಾಗಬೇಕು. ಬೌದ್ಧ ಧರ್ಮ ಭಾರತದಲ್ಲಿ ವ್ಯಾಪಿಸುತ್ತಿದ್ದ ಕಾಲಮಾನದಲ್ಲಿ ಶಂಕರಾಚಾರ್ಯರು ಹಿಂದು ಧರ್ಮದ ಉಳಿವಿಗೆ ಕಾರಣರಾದರು. ರಾಮತೀರ್ಥರು, ಶ್ರೀನಿವಾಸರು, ರಾಮಾನುಜರು, ವಿವೇಕಾನಂದರು ಸೇರಿ ಅನೇಕರು ಹಿಂದು ಧರ್ಮದ ಹಿರಿಮೆಯನ್ನು ವಿಶ್ವಕ್ಕೆ ಸಾರಿದರು ಎಂದರು.
ಎಲ್ಲರೂ ಒಂದೇ ಎನ್ನುವ ‘ವಸುದೈವ ಕುಟುಂಬಕಂ’ ಸಂದೇಶವನ್ನು ವಿವೇಕಾನಂದರು ಇಡೀ ಪ್ರಪಂಚಕ್ಕೆ ಸಾರಿದರು. ಇವರುಗಳ ರೀತಿ ನಾವು ಮಾಡಿದ ಕೆಲಸಗಳು ಸಮಾಜದಲ್ಲಿ ಹೆಗ್ಗುರುತಾಗಿ ಉಳಿಯಬೇಕು ಎಂದರು.
ಹಿಂದು ಧರ್ಮದಲ್ಲಿ ವಿಜ್ಞಾನವಿದೆ. ಎಲ್ಲರನ್ನೂ ಒಳಗೊಳ್ಳುವ ಅಂಶವಿದೆ. ಇದೆಲ್ಲವನ್ನೂ ಅರಿತಿದ್ದ ವಿವೇಕಾನಂದರು ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ದೊಡ್ಡದು ಎಂದು ಹೇಳಿದರು. ರವಿಂದ್ರನಾಥ ಠಾಕೂರ್ ಅವರು ಹಿಂದು ಧರ್ಮವನ್ನು ತಿಳಿಯಲು ವಿವೇಕಾನಂದರ ಪುಸ್ತಕ ಓದಿ ಎಂದು ಹೇಳಿದರು ಎಂದು ಸ್ಮರಿಸಿದರು.
ಇದೇ ವೇಳೆ ಸಾಹಿತಿ ಎಚ್.ಲಕ್ಷ್ಮೀನರಸಿಂಹ ಶಾಸ್ತ್ರಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ಎಲ್.ಪ್ರಸನ್ನಾಕ್ಷಿ, ಡಾ.ಕೆ.ಅನಂತರಾಮು, ಡಾ.ಎಚ್.ಎನ್.ಮುರಳೀಧರ ಹಾಗೂ ಮಯೂರ್ ಗ್ರಾಫಿಕ್ಸ್‌ನ ಪಾರ್ಥ ಸಾರಥಿ ಅವರನ್ನು ಅಭಿನಂದಿಸಲಾಯಿತು.
ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ರಾಮಕೃಷ್ಣ ವೇದಾಂತ ಕೇಂದ್ರ ಮುಖ್ಯಸ್ಥ ಸ್ವಾಮಿ ಆತ್ಮಜ್ಞಾನಂದ, ಶಾಸಕ ಟಿ.ಎಸ್.ಶ್ರೀವತ್ಸ, ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಲೀಲಾ ಪ್ರಕಾಶ್, ವಿಶ್ರಾಂತ ಕುಲಪತಿ ಡಾ.ಚಿದಾನಂದ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net