ವಿವೇಕ ಸ್ಮಾರಕ ಉದ್ಘಾಟನೆ: ಮೈಸೂರಿನಲ್ಲಿ ಮೋದಿ ರೋಡ್ ಶೋ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೈಸೂರು ನಗರದಲ್ಲಿ ರೋಡ್ ಶೋ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೈಸೂರು ನಗರದಲ್ಲಿ ರೋಡ್ ಶೋ ನಡೆಸಿದರು.
Published on

ವಿವೇಕ ಸ್ಮಾರಕ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಶನಿವಾರ ನಗರದ ಜನರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ರಸ್ತೆ ಉದ್ದಕ್ಕೂ ನೆರೆದಿದ್ದ ಸಾವಿರಾರು ಜನರ ಹರ್ಷೋದ್ಘಾರ, ಮೋದಿ ಅವರತ್ತ ಬೀಸಿದ ಕೈಗಳು ಮತ್ತು ಪ್ರತಿಯಾಗಿ ಅವರು ಸಲ್ಲಿಸಿದ ನಮಸ್ಕಾರಗಳು ಇಡೀ ನಗರವನ್ನು ಸಂಭ್ರಮದ ಅಲೆಯಲ್ಲಿ ತೇಲಿಸಿದವು.

ಆಂಧ್ರಪ್ರದೇಶದಿಂದ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ, ಅಲ್ಲಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಓವಲ್ ಮೈದಾನಕ್ಕೆ ಆಗಮಿಸಿದರು. ಹಳೆಯ ಜಿಲ್ಲಾಧಿಕಾರಿ ಕಚೇರಿ ರಸ್ತೆ, ವಿನೋಬಾ ರಸ್ತೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತ, ಜೆಎಲ್‌ಬಿ ರಸ್ತೆ, ಸೀತಾವಿಲಾಸ ರಸ್ತೆ ಹಾಗೂ ಕೃಷ್ಣ ವಿಲಾಸ ರಸ್ತೆಯ ಮೂಲಕ ಸಂಚರಿಸಿ, ಶ್ರೀರಾಮಕೃಷ್ಣ ಆಶ್ರಮ ಎನ್.ಎಸ್.ರಸ್ತೆಯಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು.
ಬಳಿಕ ಕೃಷ್ಣವಿಲಾಸ, ಜೆಎಲ್‌ಬಿ ರಸ್ತೆ, ದಾಸಪ್ಪ ವೃತ್ತ ಹಾಗೂ ಪ್ರಿನ್ಸೆಸ್ ರಸ್ತೆ (ಕೆಆರ್‌ಎಸ್ ರಸ್ತೆ) ಮೂಲಕ ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದರು. ರಾಮಕೃಷ್ಣ ಆಶ್ರಮದಲ್ಲಿ ಶ್ರೀ ರಾಮಕೃಷ್ಣರಿಗೆ ಆರತಿ ಬೆಳಗಿದರು. ನಂತರ ರಾಮಕೃಷ್ಣ ವಿದ್ಯಾಶಾಲಾ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ವಿವೇಕ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.
ಓವಲ್ ಮೈದಾನದಲ್ಲಿ ಪ್ರಧಾನಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಹಬ್ಬದ ವಾತಾವರಣ: ಪ್ರಧಾನಿ ಸಂಚರಿಸಿದ ಮಾರ್ಗದ ಎರಡೂ ಬದಿಗಳಲ್ಲಿ ಸಾಕಷ್ಟು ಹೊತ್ತಿನಿಂದ ಜನರು ತಮ್ಮ ನೆಚ್ಚಿನ ನಾಯಕನನ್ನು ನೋಡಲು ಜಮಾಯಿಸಿದ್ದರು. ಭದ್ರತೆಯ ದೃಷ್ಟಿಯಿಂದ ಅಳವಡಿಸಿದ್ದ ಬ್ಯಾರಿಕೇಡ್‌ಗಳ ಹಿಂದೆ ಆಬಾಲವೃದ್ಧರಾದಿಯಾಗಿ ಹಲವರು ಹಲವು ಗಂಟೆಗಳ ಕಾಲ ಕಾದು ನಿಂತಿದ್ದರು. ಪ್ರಧಾನಿ ಅವರ ವಾಹನ ಕಾಣಿಸುತ್ತಿದ್ದಂತೆಯೇ ಮೋದಿ... ಮೋದಿ... ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಅನೇಕರು ಮೊಬೈಲ್‌ಗಳಲ್ಲಿ ಆ ಕ್ಷಣಗಳನ್ನು ಸೆರೆಹಿಡಿಯಲು ಮುಗಿಬಿದ್ದರು. ಮಕ್ಕಳು ಕೈ ಬೀಸುತ್ತ ಸಂಭ್ರಮಿಸಿದರೆ, ಹಿರಿಯರು ಕೈಮುಗಿದು ಪ್ರಧಾನಿ ಅವರಿಗೆ ಸ್ವಾಗತ ಕೋರಿದರು.
ವಾಹನದಲ್ಲೇ ಕುಳಿತು ಸಾಗಿದ ಪ್ರಧಾನಿ ಮೋದಿ ಮಾರ್ಗದುದ್ದಕ್ಕೂ ಎರಡೂ ಬದಿಗಳಲ್ಲಿದ್ದ ಜನರತ್ತ ಕೈಮುಗಿದು ನಮಸ್ಕರಿಸುತ್ತಾ, ಕೈಬೀಸಿ ಅಭಿನಂದನೆ ಸ್ವೀಕರಿಸಿದರು. ಅವರ ಪ್ರತಿಯೊಂದು ನಮಸ್ಕಾರಕ್ಕೂ ಜನರು ಮತ್ತಷ್ಟು ಜೋರಾಗಿ ಹರ್ಷೋದ್ಘಾರ ಮೊಳಗಿಸಿದರು. ಕೆಲವೇ ಕ್ಷಣಗಳ ಈ ರೋಡ್ ಶೋ ಮೈಸೂರಿನ ಜನತೆಗೆ ಸ್ಮರಣೀಯ ಅನುಭವವಾಗಿ ಉಳಿಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net