ಮೈಸೂರು: ನಗರದ ಹೊರವಲಯದ ವಿಷ್ಣುಸ್ಮಾರಕದಲ್ಲಿ ಅರುಣರಾಗ ಕ್ರಿಯೇಷನ್ಸ್ ವತಿಯಿಂದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 16ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಸಂಗೀತ ಸಮನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.
ಅರುಣರಾಗ ಕ್ರಿಯೇಷನ್ಸ್ ಸಂಸ್ಥಾಪಕಿ ಡಾ. ರೇಖಾ ಅರುಣ್ ಸಾರಥ್ಯದಲ್ಲಿ 50ಕ್ಕೂ ಹೆಚ್ಚು ಕಲಾವಿದರು ವಿಷ್ಣು ರವರ ಜನಪ್ರಿಯ ಚಿತ್ರಗೀತೆಗಳನ್ನ ಹಾಡುವ ಮೂಲಕ ಸಂಗೀತ ನಮನ ಅರ್ಪಿಸಿದರು. ಜ್ಯೂನಿಯರ್ ವಿಷ್ಣುವರ್ಧನ್ ಪಾತ್ರದಲ್ಲಿ ಕಲಾವಿದರು ಮನರಂಜಿಸಿದರು
ನಟಿ ಭಾರತಿ ವಿಷ್ಣುವರ್ಧನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಮ್ಮ ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನ ಅಗಲಿ 16 ವರ್ಷಗಳು ಆಯಿತಾ?! ಸಾಧ್ಯವೇ ಇಲ್ಲ. ನಿಮ್ಮ ಇಷ್ಟೊಂದು ಪ್ರೀತಿಯ ಅಭಿಮಾನ ವಾತ್ಸಲ್ಯ ನೋಡುತ್ತಿದ್ದರೇ ಅವರು ಸ್ಮಾರಕದಲ್ಲಿಯೇ ಇಲ್ಲೇ ನೋಡುತ್ತಾ ನಿಮ್ಮನ್ನ ಆಶೀರ್ವಾದ ಮಾಡುತ್ತಿರುತ್ತಾರೆ, ವಿಷ್ಣು ಅವರು ಯಾವಾಗಲೂ ಒಂದು ಮಾತು ಹೆಮ್ಮೆಯಿಂದ ಹೇಳುತ್ತಿದ್ದರು ‘ನನ್ನ ಅಭಿಮಾನಿಗಳು ಮಾನವೀಯತೆ ಉಳ್ಳವರು’ ಎಂದು. ವಿಷ್ಣು ಅಭಿಮಾನಿಗಳು ಪ್ರತಿವಾರವೂ ಸಂಗೀತಗಾಯನ, ರಕ್ತದಾನ, ಅನ್ನದಾನ ಕಾರ್ಯಕ್ರಮ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ನಟ ಅನಿರುದ್ ಮಾತನಾಡಿ, ವಿಷ್ಣು ಸ್ಮಾರಕ ಮೈಸೂರಿನಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿಯೂ ಬಿಂಬಿತವಾಗಿ ರಾಜ್ಯದ ವಿವಿಧೆಡೆಯಿಂದ ಪ್ರತಿ ದಿನ ಸಾವಿರಾರು ಮಂದಿ ಭೇಟಿ ಕೊಟ್ಟು ಪೋಟೋ ಗ್ಯಾಲೆರಿ ವೀಕ್ಷಣೆ ಮತ್ತು ವಿಷ್ಣು ಪ್ರತಿಮೆಯ ಬಳಿ ಕುಡುಂಬ ಸ್ನೇಹಿತರ ಪೋಟೋ ತೆಗೆದುಕೊಂಡು ಅಭಿಮಾನದಿಂದ ನಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಡಾ. ರೇಖಾ ಅರುಣ್, ಗುರುರಾಜ್, ಮನಮೋಹನ್‌ರಾಜ್, ಜಾರ್ಜ್ ಪ್ರಭಾಕರ್, ಜಗದೀಶ್, ನರಸಿಂಹಮೂರ್ತಿ, ಸೋಮಶೇಖರ್ ಹಾಗೂ ಇತರರು ಇದ್ದರು.