ಸರಗೂರು ತಾಲೂಕಿನ ಬಿದರಹಳ್ಳಿ ಸರ್ಕಲ್ ಬಳಿ ಎನ್.ಬೇಗೂರು ಹಾಗೂ ಬಿದರಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶ್ರೀನಿವಾಸ ಹಾಗೂ ಲೋಕೋಪಯೋಗಿ ಇಲಾಖೆ ಎಇಇ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
Published on:
Copied
Follow Us
ಸರಗೂರು: ತಾಲೂಕಿನ ಎನ್.ಬೇಗೂರು ಮತ್ತು ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ರಸ್ತೆ ಅಭಿವೃದ್ಧಿಪಡಿಸುವಂತೆ ಮಂಗಳವಾರ ಆಗ್ರಹಿಸಿ ಬಿದರಹಳ್ಳಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಅಕ್ರಮ-ಸಕ್ರಮ ಸಮಿತಿ ಮಾಜಿ ಸದಸ್ಯ ಬಿ.ಟಿ.ನರಸಿಂಹಮೂರ್ತಿ ಮಾತನಾಡಿ, ಬಿದರಹಳ್ಳಿ, ಬೀರಂಬಳ್ಳಿ ಗ್ರಾಮದವರೆಗೆ ಸುಮಾರು ಇಪ್ಪತ್ತು ಕಿಲೋಮೀಟರ್ ರಸ್ತೆ ತುಂಬಾ ಹದಗೆಟ್ಟಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಈ ಭಾಗದ ಜನರು ಸಂಚರಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ಶಾಲಾ-ಕಾಲೇಜು ಮಕ್ಕಳು, ರೋಗಿಗಳು, ವೃದ್ಧರು ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಇಷ್ಟು ದುಸ್ಥಿತಿಗೆ ಬರಲು ಶಾಸಕರ ನಿರ್ಲಕ್ಷೃ ಮತ್ತು ಅಧಿಕಾರಿಗಳ ವಿಳಂಬ ನೀತಿಯೇ ಕಾರಣ ಎಂದು ಆರೋಪಿಸಿದರು.
ರೈತ ಮುಖಂಡ ಬೀರಂಬಳ್ಳಿ ಪ್ರಭಾಕರ್ ಮಾತನಾಡಿ, ನಮ್ಮ ಭಾಗದ ರಸ್ತೆ ಹದಗೆಟ್ಟ ಕಾರಣ ರೈತರ ಸಮಸ್ಯೆಯನ್ನು ಆಲಿಸಲು ಯಾವ ಅಧಿಕಾರಿಗಳು ನಮ್ಮ ಹಳ್ಳಿಗಳಿಗೆ ಬರುತ್ತಿಲ್ಲ. ಇದರಿಂದ ರೈತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಮುಖಂಡ ಸುರೇಂದ್ರ ಮಾತನಾಡಿ, ಕಳೆದ 20 ವರ್ಷದಿಂದ ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ. ನಮ್ಮ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಹಾಗೂ ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳು ಈ ಕಡೆ ತಲೆಯನ್ನೇ ಕೆಡಿಸಿಕೊಳ್ಳದೆ ಸಂಪೂರ್ಣ ಕಡೆಗಣಿಸಿದ್ದಾರೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಪ್ರವಾಸಿಗರು ಬರುತ್ತಿದ್ದಾರೆ, ಸಾಕಷ್ಟು ರೆಸಾರ್ಟ್‌ಗಳಿವೆ, ಹೋಮ್ ಸ್ಟೇಗಳಿವೆ. ಆದರೂ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ಕಿಡಿಕಾರಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಂಜಿನಿಯರ್ ರಮೇಶ್, ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸಿ ಸಾಗರೆಯಿಂದ ಬಿದರಹಳ್ಳಿ ಸರ್ಕಲ್ ಮತ್ತು ಬಿದರಹಳ್ಳಿ ಸರ್ಕಲ್‌ನಿಂದ ಬಸಾಪುರ ಕೆರೆ ತನಕ ಸುಮಾರು 4.35 ಲಕ್ಷ ರೂ. ಅನುದಾನ ಬಿಡುಗಡೆಯಾಗಿ 4.70 ಕಿಲೋಮೀಟರ್ ಕಾಮಗಾರಿ ಪ್ರಾರಂಭವಾಗಿದೆ. ಇನ್ನೂ ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ. ಉಳಿದ ರಸ್ತೆಯನ್ನು ಶಾಸಕರು ಮತ್ತು ಸಂಸದರ ಜತೆಗೆ ಚರ್ಚಿಸಿ ಸರ್ಕಾರದಿಂದ ತುರ್ತಾಗಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಕಾಮಗಾರಿ ಪ್ರಾರಂಭಿಸುತ್ತೇವೆ ಎಂದರು.
ನಂತರ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎರಡು ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸಿ ಉಳಿದ ರಸ್ತೆಯನ್ನು ಆರಂಭಿಸದಿದ್ದರೆ ತಾಲೂಕು ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.