ಆರ್ಟ್ ಗ್ಯಾಲರಿ ಗಮನ ಸೆಳೆದ ವಚನ ಚಿತ್ರಗಳು

ಮೈಸೂರು ಆರ್ಟ್ ಗ್ಯಾಲರಿಯಲ್ಲಿ ವಚನ ಚಿತ್ರಗಳನ್ನು ಗಣ್ಯರು ವೀಕ್ಷಿಸಿದರು. ಮಂಗಳಾ ಮುದ್ದಮಾದಪ್ಪ, ಅಂಶಿ ಪ್ರಸನ್ನಕುಮಾರ್, ಎಲ್. ಶಿವಲಿಂಗಪ್ಪ, ಎಂ.ಚಂದ್ರಶೇಖರ್ ಇದ್ದರು.
ಮೈಸೂರು ಆರ್ಟ್ ಗ್ಯಾಲರಿಯಲ್ಲಿ ವಚನ ಚಿತ್ರಗಳನ್ನು ಗಣ್ಯರು ವೀಕ್ಷಿಸಿದರು. ಮಂಗಳಾ ಮುದ್ದಮಾದಪ್ಪ, ಅಂಶಿ ಪ್ರಸನ್ನಕುಮಾರ್, ಎಲ್. ಶಿವಲಿಂಗಪ್ಪ, ಎಂ.ಚಂದ್ರಶೇಖರ್ ಇದ್ದರು.
Published on
ವಚನ ಚಿತ್ರಗಳಲ್ಲಿ ಕಾವ್ಯ ಮತ್ತು ದೃಶ್ಯಗಳ ಸಮ್ಮಿಲನ ಕಾಣಿಸುತ್ತದೆ ಎಂದು ಕವಯಿತ್ರಿ ಮಂಗಳಾ ಮುದ್ದಮಾದಪ್ಪ ಬಣ್ಣಿಸಿದರು.
ಶಿಕ್ಷಕರ ದಿನದ ಅಂಗವಾಗಿ ಕೃತ, ತ್ರೇತಾ, ದ್ವಾಪರ ಹಾಗೂ ಕಲಿ ಯುಗದಲ್ಲಿ ವಿದ್ಯಾ ಕಲಿಕೆಯ ಲಕ್ಷಣ ಕುರಿತು ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅವರು ರಚಿಸಿರುವ ವಚನ ಚಿತ್ರಗಳನ್ನು ನಗರದ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯೆಯನ್ನು ಕಲಿಸುವಿಕೆ ಹಾಗೂ ಕಲಿಯುವಿಕೆಯಲ್ಲಿ ಗುರು- ಶಿಷ್ಯರ ಸಂಬಂಧ ಹೇಗೆ ಕಾಲಕಾಲಕ್ಕೆ ಬದಲಾವಣೆ ಆಗಿದೆ, ಆಗುತ್ತದೆ ಎಂಬುದನ್ನು ಈ ಚಿತ್ರಗಳು ತಿಳಿಸುತ್ತವೆ ಎಂದರು.
ಹಿಂದೆ ಗುರುಗಳು ಶಿಷ್ಯರಿಗೆ ಬಡಿದು, ಬೈದು, ಬುದ್ಧಿ ಹೇಳಿ ಕಲಿಸುತ್ತಿದ್ದರು. ಆದರೆ ಈಗ ಗುರುಗಳೇ ಶಿಷ್ಯರಿಗೆ ವಂದಿಸಿ, ಕಲಿಸುವ ಪರಿಸ್ಥಿತಿ ಎದುರಾಗಿದೆ. ಇದರಲ್ಲಿ ಕೇವಲ ವಿದ್ಯಾರ್ಥಿಗಳದು ಮಾತ್ರ ತಪ್ಪಿಲ್ಲ. ಕೆಲವು ಶಿಕ್ಷಕರದು ತಪ್ಪಿದೆ. ನೈತಿಕವಾಗಿ ಶಿಕ್ಷಕರು ಸರಿ ಇದ್ದಾಗ ಮಾತ್ರ ವಿದ್ಯಾರ್ಥಿಗಳಿಗೆ ಸರಿಯಾದ ಪಾಠ ಹೇಳಬಹುದು ಎಂದು ಅಭಿಪ್ರಾಯಪಟ್ಟರು.

ಬಸವಣ್ಣ, ಅಕ್ಕ ಮಹಾದೇವಿ ಮೊದಲಾದ ಬಸವಾದಿ ಶರಣರ ವಚನಗಳನ್ನು ಸುಲಭವಾಗಿ ಗ್ರಹಿಸಬಹುದು. ಆದರೆ ಬೆಡಗಿನ ವಚನಗಳನ್ನು ರಚಿಸಿರುವ ಅಲ್ಲಮಪ್ರಭು ಅವರ ವಚನಗಳನ್ನು ಅರ್ಥೈಸಿಕೊಳ್ಳಬೇಕಾದರೆ ಕಷ್ಟ. ಹೆಚ್ಚಿನ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ಆರ್ಟ್ ಗ್ಯಾಲರಿ ಸಂಸ್ಥಾಪಕ ಕಲಾವಿದ ಎಲ್. ಶಿವಲಿಂಗಪ್ಪ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಆರ್ಟ್ ಗ್ಯಾಲರಿ ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ ಇದ್ದರು.
ಇದಕ್ಕೂ ಮುನ್ನ, ಇತ್ತೀಚೆಗೆ ನಿಧನರಾದ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರಿಗೆ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net