ಕನ್ನಡದ ಅಸ್ಮಿತೆ ಜಾಗೃತಗೊಳಿಸಿದ ಬಸವಣ್ಣ

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಬಣ್ಣನೆ
Vachana Kumaraswamy spoke at the Kannada Rajyotsava event organized at the Sri Gurumalleshwara Dasoha Matha in Devalapura. Sri Jadeswamiji, Roopa Kumaraswamy, Shivapura Umapathi, and Hemanta Swamiji were present.
ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ ಮಾತನಾಡಿದರು. ಶ್ರೀ ಜಡೆಸ್ವಾಮೀಜಿ, ರೂಪಾ ಕುಮಾರಸ್ವಾಮಿ, ಶಿವಪುರ ಉಮಾಪತಿ, ಹೇಮಂತ ಸ್ವಾಮೀಜಿ ಇದ್ದರು.
Published on: 

ವಿಶ್ವಗುರು ಬಸವಣ್ಣನವರ ಕನ್ನಡಾಭಿಮಾನ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಕನ್ನಡವನ್ನು ಪ್ರೀತಿಸುವುದರ ಜತೆಗೆ ಅದರ ಬಳಕೆಯನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಸಮೀಪದ ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು ನಾಡು, ನುಡಿ ಹಾಗೂ ಭಾಷೆಯ ಅಭಿಮಾನವನ್ನು ಸಾರಿದ ಮಹಾನ್ ಚೇತನರಾಗಿದ್ದರು. ಆಫ್ಘಾನಿಸ್ತಾನದಿಂದ ಬಂದ ಮರುಳ ಶಂಕರದೇವರು, ತಮಿಳುನಾಡಿನಿಂದ ಬಂದ ಮಾದಾರ ಚೆನ್ನಯ್ಯ, ಮಧ್ಯಪ್ರದೇಶದಿಂದ ಬಂದ ಡೋಹರ ಕಕ್ಕಯ್ಯ, ಕೇರಳದಿಂದ ಬಂದ ಧೂಪದ ಗೊಗ್ಗವ್ವೆ, ಆಂಧ್ರಪ್ರದೇಶದಿಂದ ಬಂದ ಉರಿಲಿಂಗದೇವ, ಗುಜರಾತಿನಿಂದ ಬಂದ ಆದಯ್ಯ ಹಾಗೂ ಮಹಾರಾಷ್ಟ್ರದಿಂದ ಬಂದ ಸಿದ್ಧರಾಮೇಶ್ವರರು ಸೇರಿದಂತೆ ವಿವಿಧ ಪ್ರದೇಶಗಳಿಂದ ಬಂದ ಶರಣರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಿ, ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿದವರು ಬಸವಣ್ಣನವರು ಎಂದು ಬಣ್ಣಿಸಿದರು.

ನಾಡಿನ ಗಡಿಗಳನ್ನು ಮೀರಿ ಬಂದ ಶರಣರನ್ನು ಕನ್ನಡದ ನೆಲದಲ್ಲಿ ಒಂದಾಗಿಸಿ, ಕನ್ನಡದ ಮೂಲಕ ಅನುಭವ ಮಂಟಪದ ಚಿಂತನೆಗಳನ್ನು ವಿಶ್ವಕ್ಕೆ ಪರಿಚಯಿಸಿದ ಬಸವಣ್ಣನವರ ಭಾಷಾಭಿಮಾನ ನಮಗೆಲ್ಲರಿಗೂ ಮಾದರಿಯಾಗಬೇಕು. ಅನ್ಯಭಾಷೆಗಳನ್ನು ಕಲಿಯುವುದರ ಜತೆಗೆ ಮಾತೃಭಾಷೆಯ ಬಗ್ಗೆ ಗೌರವ ಮತ್ತು ಅಭಿಮಾನ ಬೆಳೆಸಿಕೊಂಡು ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದಾಗ ಮಾತ್ರ ಕನ್ನಡದ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.

ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೆಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡ ನಾಡು ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪ್ರದೇಶಗಳಿಂದ ಬಂದ ಎಲ್ಲರಿಗೂ ಆಶ್ರಯ ನೀಡಿದೆ. ಇಂತಹ ವಿಶಾಲ ಹೃದಯದ ಕನ್ನಡ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿತು, ಗೌರವಿಸಿ, ಬಳಸುವ ಮೂಲಕ ಕನ್ನಡತನವನ್ನು ತಮ್ಮ ಬದುಕಿನಲ್ಲಿ ಉಳಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಶರಣು ವಿಶ್ವವಚನ ಫೌಂಡೇಷನ್ ಉಪಾಧ್ಯಕ್ಷ ಶಿವಪುರ ಉಮಾಪತಿ, ಹೇಮಂತ ಸ್ವಾಮೀಜಿ ಇದ್ದರು.