ವೈದ್ಯಕೀಯ ರಂಗಕ್ಕೆ ಆಯುರ್ವೇದ ಜ್ಞಾನ ಬಳಸಿ: ಶರತ್ ಚಂದ್ರಶ್ರೀಗಳು

ನಗರದಲ್ಲಿ ಆಯೋಜಿಸಿದ್ದ ‘ಸಂಹಿತಾ ಅವಬೋಧಿನಿ-2026’ ರಾಷ್ಟ್ರೀಯ ಸಮ್ಮೇಳನವನ್ನು ಕುಂದೂರು ಮಠದ ಶ್ರೀ ಶರತ್ ಚಂದ್ರ ಸ್ವಾಮೀಜಿ ಉದ್ಘಾಟಿಸಿದರು. ಡಾ. ಎನ್.ಆಂಜನೇಯ ಮೂರ್ತಿ,ಆರ್.ಮಹೇಶ್, ಡಾ.ಜೆ.ಆರ್.ಜೋಶಿ ಇನ್ನಿತರರಿದ್ದರು.
ನಗರದಲ್ಲಿ ಆಯೋಜಿಸಿದ್ದ ‘ಸಂಹಿತಾ ಅವಬೋಧಿನಿ-2026’ ರಾಷ್ಟ್ರೀಯ ಸಮ್ಮೇಳನವನ್ನು ಕುಂದೂರು ಮಠದ ಶ್ರೀ ಶರತ್ ಚಂದ್ರ ಸ್ವಾಮೀಜಿ ಉದ್ಘಾಟಿಸಿದರು. ಡಾ. ಎನ್.ಆಂಜನೇಯ ಮೂರ್ತಿ,ಆರ್.ಮಹೇಶ್, ಡಾ.ಜೆ.ಆರ್.ಜೋಶಿ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುರ್ವೇದ, ಯೋಗ, ರಸಶಾಸ್ತ್ರ ಮತ್ತು ವಿಶ್ವವಿದ್ಯಾಲಯ ಕಲ್ಪನೆಯ ಮೂಲಕ ಜಗತ್ತಿಗೆ ಅಪಾರ ಕೊಡುಗೆ
  • ಮೂಲ ಆಯುರ್ವೇದ ಸಂಹಿತೆಗಳ ಅಧ್ಯಯನ, ತತ್ವಗಳ ರಕ್ಷಣೆಗೆ ಸಂಸ್ಕೃತ ಭಾಷೆಯ ಕಲಿಕೆ ಅಗತ್ಯ
ಮೈಸೂರು: ಆಧುನಿಕ ಸವಾಲುಗಳಿಂದ ಕಂಗಾಲಾಗಿರುವ ವೈದ್ಯಕೀಯ ರಂಗಕ್ಕೆ ಆಯುರ್ವೇದ ಗ್ರಂಥಗಳಲ್ಲಿ ಅಡಕವಾಗಿರುವ ಪ್ರಾಚೀನ ಜ್ಞಾನ ಸೂತ್ರಗಳನ್ನು ಸೂಕ್ತವಾಗಿ ಗ್ರಹಿಸಿ, ಸಂರಕ್ಷಿಸಿ, ಅಳವಡಿಸಿಕೊಳ್ಳುವುದೇ ಶಾಶ್ವತ ಪರಿಹಾರ ಎಂದು ಕುಂದೂರು ಮಠದ ಶ್ರೀ ಶರತ್ ಚಂದ್ರ ಸ್ವಾಮೀಜಿ ಹೇಳಿದರು.
ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಅಂಗವಾಗಿ ನಗರದ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ  ಆಯೋಜಿಸಿದ್ದ ‘ಸಂಹಿತಾ ಅವಬೋಧಿನಿ-2026’ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಭಾರತವು ಶ್ರೇಷ್ಠ ನಾಗರಿಕತೆಗಳ ತವರೂರಾಗಿದೆ. ಆಯುರ್ವೇದ, ಯೋಗ, ರಸಶಾಸ್ತ್ರ ಮತ್ತು ವಿಶ್ವವಿದ್ಯಾಲಯ ಕಲ್ಪನೆಯ ಮೂಲಕ ಜಗತ್ತಿಗೆ ಅಪಾರ ಕೊಡುಗೆ ನೀಡಿದೆ. ಮೂಲ ಆಯುರ್ವೇದ ಸಂಹಿತೆಗಳ ಅಧ್ಯಯನ, ತತ್ವಗಳ ರಕ್ಷಣೆಗೆ ಸಂಸ್ಕೃತ ಭಾಷೆಯ ಕಲಿಕೆ ಅಗತ್ಯ ಎಂದರು. ಸುತ್ತೂರು ಶ್ರೀ  ಡಾ.ರಾಜೇಂದ್ರ ಶ್ರೀಗಳ ದಿವ್ಯ ಆಶಯದಿಂದಾಗಿ ಲಕ್ಷಕ್ಕೂ ಹೆಚ್ಚು ಮಕ್ಕಳು ಅಕ್ಷರ ದಾಸೋಹ ಪಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು. 
ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ಆಯುರ್ವೇದ ಸಂಹಿತೆಗಳು ಮತ್ತು ಸಿದ್ಧಾಂತ ಕೇವಲ ಇತಿಹಾಸದ ಗ್ರಂಥಗಳಾಗಿ ನೋಡದೆ, ಜಾಗೃತ ವೈದ್ಯಕೀಯ ಪ್ರಯೋಗಾಲಯಗಳಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

 ತಾಯ ಬೇರಿನಂತಿವೆ: 

ಹುಬ್ಬಳ್ಳಿಯ ಎಎಂವಿ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ.ಜೆ.ಆರ್.ಜೋಶಿ ಮಾತನಾಡಿ, ಸಂಹಿತೆಗಳು ಆಯುರ್ವೇದದ ಎಲ್ಲ ವಿಭಾಗಗಳಿಗೂ ತಾಯ ಬೇರಿನಂತಿವೆ. ಸಾಕ್ಷ್ಯಾಧಾರಿತ ವಿಧಾನಗಳೊಂದಿಗೆ ಈ ಮೂಲ ತತ್ವ ಸಂಯೋಜಿಸಿ ಚಿಕಿತ್ಸೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
 ಪ್ರಾಂಶುಪಾಲ, ವೈದ್ಯಕೀಯ ಅಧೀಕ್ಷಕ ಡಾ.ಸರ್ಬೇಶ್ವರ್ ಕರ್ ಮಾತನಾಡಿ, ಸಮಕಾಲೀನ ಆಯುರ್ವೇದ ಪದ್ಧತಿಯಲ್ಲಿ ಸಂಹಿತೆ ಮತ್ತು ಸಿದ್ಧಾಂತ, ತತ್ವಗಳನ್ನು ಸಂರಕ್ಷಿಸುವ, ಅರ್ಥೈಸಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದರು.
ಆಯುಷ್ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಎನ್.ಆಂಜನೇಯ ಮೂರ್ತಿ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಸಂತೋಷ್‌ಕುಮಾರ್ ಬಿ. ಉಟ್ಲಾಸಕರ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net