ಭೂಮಿ ಲವತ್ತತೆಗೆ ನ್ಯಾನೋ ಕ್ಯಾಪ್ಸೂಲ್ ಬಳಸಿ

ಹುಣಸೂರು ತಾಲೂಕು ಜಡಗನಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿಭೂಮಿ ಉಳಿಸಿ ಅಭಿಯಾನ ಕಾರ್ಯಕ್ರಮವನ್ನು ಎನ್‌ಐಆರ್‌ಸಿಎ ಸಂಸ್ಥೆಯ ಡಾ.ರಾಮಕೃಷ್ಣನ್ ಉದ್ಘಾಟಿಸಿದರು. ಡಿಎಟಿಸಿ ಸಂಸ್ಥೆಯ ನಾಗರಾಜು, ಡಾ.ರಾಘವೇಂದ್ರ, ಡಾ.ಸಿ.ನಂದ ಇತರರಿದ್ದಾರೆ.
ಹುಣಸೂರು ತಾಲೂಕು ಜಡಗನಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿಭೂಮಿ ಉಳಿಸಿ ಅಭಿಯಾನ ಕಾರ್ಯಕ್ರಮವನ್ನು ಎನ್‌ಐಆರ್‌ಸಿಎ ಸಂಸ್ಥೆಯ ಡಾ.ರಾಮಕೃಷ್ಣನ್ ಉದ್ಘಾಟಿಸಿದರು. ಡಿಎಟಿಸಿ ಸಂಸ್ಥೆಯ ನಾಗರಾಜು, ಡಾ.ರಾಘವೇಂದ್ರ, ಡಾ.ಸಿ.ನಂದ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಅಭಿಮತ
ಹುಣಸೂರು: ರೈತರು ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಲು ಹುಣಸೂರಿನ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾಲಯ(ಎನ್‌ಐಆರ್‌ಸಿಎ) ಅಭಿವೃದ್ಧಿಪಡಿಸಿರುವ ನ್ಯಾನೋ ಕ್ಯಾಪ್ಸೂಲ್ ಬಳಕೆ ಮಾಡಬೇಕೆಂದು ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ತಿಳಿಸಿದರು.
ನಗರದ ಕಸಬ ಹೋಬಳಿ ವ್ಯಾಪ್ತಿಯ ಜಡಗನಕೊಪ್ಪಲು ಗ್ರಾಮದಲ್ಲಿ ಶನಿವಾರ ಸಂಸ್ಥೆ ಆಯೋಜಿಸಿದ್ದ ಕೃಷಿ ಭೂಮಿ ಉಳಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚೆಗೆ ಸಂಸ್ಥೆಯು ರೈತರ ಅನುಕೂಲಕ್ಕಾಗಿ ಐಸಿಎಆರ್ ಮತ್ತು ಐಐಎಸ್‌ಆರ್ ಸಂಸ್ಥೆಗಳ ಸಹಯೋಗದಲ್ಲಿ ನ್ಯಾನೋ ಕ್ಯಾಪ್ಸೂಲ್ ಅಭಿವೃದ್ಧಿಪಡಿಸಿದ್ದು, ಒಂದು ನ್ಯಾನೋ ಕ್ಯಾಪ್ಸೂಲ್ ಒಳಗೆ ನಾಲ್ಕಕ್ಕೂ ಹೆಚ್ಚು ವಿವಿಧ ಸೂಕ್ಷ್ಮಜೀವಿಗಳನ್ನು ಸೇರಿಸಲಾಗಿದೆ. ಈ ಕ್ಯಾಪ್ಸೂಲ್ ಬಳಕೆಯಿಂದ ಭೂಮಿ ಫಲವತ್ತತೆ ಹೆಚ್ಚಲಿದೆ. ಗುಣಮಟ್ಟದ ಮತ್ತು ಹೆಚ್ಚು ಇಳುವರಿಯ ತಂಬಾಕು ಪಡೆಯಬಹುದಾಗಿದೆ. ರೈತರು ತಂಬಾಕು ಕಟಾವಿನ ನಂತರ ಜಮೀನಿನಲ್ಲಿ ಸೆಣಬು ಕೃಷಿ ಮಾಡಿದಲ್ಲಿ ಫಲವತ್ತೆತೆ ಕಾಯ್ದುಕೊಳ್ಳಬಹುದಾಗಿದೆ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಹೆಚ್ಚಾಗಿ ಬಳಸಿ ಎಂದರು.
ಮೈಸೂರಿನ ಡಿಎಟಿಸಿ ಸಂಸ್ಥೆಯ ಕೃಷಿ ಉಪನಿರ್ದೇಶಕ ನಾಗರಾಜು ಮಾತನಾಡಿ, ತಂಬಾಕು ಬೆಳೆವ ಈ ಭಾಗದಲ್ಲಿ ಎನ್‌ಐಆರ್‌ಸಿಎ ಸಂಸ್ಥೆ ರೈತರಿಗೆ ಉಪಯೋಗವಾಗುವಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ನೀವು ನಂಬಿಕೊಂಡು ಬಂದಿರುವ ಈ ಭೂಮಿತಾಯಿಯನ್ನು ಬಂಜರು ಭೂಮಿಯನ್ನಾಗಿಸದೇ ಕಲ್ಪವೃಕ್ಷ, ಕಾಮಧೇನುವನ್ನಾಗಿ ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಭೂಮಿಯ ಮಣ್ಣುಪರೀಕ್ಷೆ ಮಾಡಿಸುವ ಮೂಲಕ ನಿಮ್ಮ ಭೂಮಿಗೆ ಅಗತ್ಯ ರಸಗೊಬ್ಬರಗಳ ಬಳಕೆ ವಿಜ್ಞಾನಿಗಳ ಸಲಹೆ ಸೂಚನೆಯಂತೆ ಮಾಡಿರಿ. ಸಾಧ್ಯವಾದಷ್ಟು ಸಾವಯವ ಗೊಬ್ಬರ ಬಳಕೆ ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್‌ಐಆರ್‌ಸಿಎ ಸಂಸ್ಥೆಯ ವಿಜ್ಞಾನಿಗಳಾದ ಡಾ.ರಾಘವೇಂದ್ರ, ಡಾ.ಸಿ.ನಂದಾ, ಡಾ.ಗುರು ಸೇರಿದಂತೆ ಗ್ರಾಮಸ್ಥರು, ತಂಬಾಕು ಬೆಳೆಗಾರರು ಭಾಗವಹಿಸಿದ್ದರು.
6ಊಓ1:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net