ಮಾನವೀಯ ಮೌಲ್ಯದೊಂದಿಗೆ ಎಐ ತಂತ್ರಜ್ಞಾನ ಬಳಸಿ

 ನಗರದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ನವದೆಹಲಿ ಸಿಇಸಿ ನಿರ್ದೇಶಕ ಪರೀಕ್ಷತ್ ಸಿಂಗ್ ಮನ್ಹಾಸ್ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಡಾ.ನಾಗರಾಜ್ ಇದ್ದರು.
ನಗರದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ನವದೆಹಲಿ ಸಿಇಸಿ ನಿರ್ದೇಶಕ ಪರೀಕ್ಷತ್ ಸಿಂಗ್ ಮನ್ಹಾಸ್ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಡಾ.ನಾಗರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನವದೆಹಲಿ ಶೈಕ್ಷಣಿಕ ಸಂವಹನ ಒಕ್ಕೂಟದ ನಿರ್ದೇಶಕ ಪರೀಕ್ಷತ್ ಸಿಂಗ್ ಮನ್ಹಾಸ್ ಸಲಹೆ
  • ಮೈಸೂರು ವಿಶ್ವವಿದ್ಯಾಲಯದ 110ನೇ ಸಂಸ್ಥಾಪನಾ ದಿನಾಚರಣೆ
 ಮೈಸೂರು: ನೈತಿಕ ಮತ್ತು ಮಾನವೀಯತೆ ನೆಲೆಗಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ ಮಾಡುವಂತಹ ವಿವೇಚನೆ ಮೂಡಬೇಕಿದೆ ಎಂದು ನವದೆಹಲಿ ಶೈಕ್ಷಣಿಕ ಸಂವಹನ ಒಕ್ಕೂಟದ (ಸಿಇಸಿ) ನಿರ್ದೇಶಕ ಪರೀಕ್ಷತ್ ಸಿಂಗ್ ಮನ್ಹಾಸ್ ಹೇಳಿದರು.
ನಗರದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ 110ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಎಐ ಯುಗದಲ್ಲಿ ಮೈಸೂರು ವಿಶ್ವವಿದ್ಯಾಲಯ: ಮಾನವ ವಿವೇಕದೊಂದಿಗೆ ಭವಿಷ್ಯ ನಿರ್ಮಾಣ’ ಕುರಿತು ಉಪನ್ಯಾಸ ನೀಡಿದರು.
ಎಐ ಎಲ್ಲವನ್ನೂ ಮಾಡಬಹುದು ಎಂಬ ಭ್ರಮೆಗೆ ಒಳಗಾಗದೆ, ಮಾನವೀಯ ಮೌಲ್ಯ ಉಳಿಸಿಕೊಂಡು ತಂತ್ರಜ್ಞಾನ ಬಳಸಬೇಕು. ವಿದ್ಯಾರ್ಥಿಗಳಲ್ಲಿ ನೈತಿಕತೆ, ಸರಿ-ತಪ್ಪಿನ ಅರಿವು, ವಿಶ್ಲೇಷಣಾತ್ಮಕ ಚಿಂತನೆ, ಉತ್ತಮ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆಯನ್ನು ಶಿಕ್ಷಕರು ಹೊಂದಿದ್ದಾರೆ. ಇದನ್ನು ಮರೆಯಬಾರದು ಎಂದರು.
ಎಐ ಉದ್ಯೋಗ ಕಸಿದುಕೊಳ್ಳಲ್ಲ. ಬದಲಾಗಿ ಇದನ್ನು ಸಮರ್ಥವಾಗಿ ಬಳಸುವ ಜ್ಞಾನ, ವಿವೇಕ ಮತ್ತು ಸರಿಯಾದ ಪ್ರಶ್ನೆ ಕೇಳುವ ಸಾಮರ್ಥ್ಯ ಹೊಂದಿದವರೇ ಭವಿಷ್ಯವನ್ನು ಮುನ್ನಡೆಸಲಿದ್ದಾರೆ ಎಂದರು.
ಈ ಹಿಂದೆ ಕಂಪ್ಯೂಟರ್ ಆಗಮನದ ಸಂದರ್ಭದಲ್ಲಿ ಉದ್ಯೋಗಗಳು ನಾಶವಾಗುತ್ತವೆ ಎಂಬ ಭೀತಿ ಇತ್ತು. ಅಂತೆಯೇ 1999ರಿಂದ 2000ನೇ ವರ್ಷಕ್ಕೆ (ವೈ2ಕೆ) ಬದಲಾಗುವ ಸಂದರ್ಭದಲ್ಲಿ ಜಗತ್ತಿನ ತಂತ್ರಜ್ಞಾನ ವ್ಯವಸ್ಥೆ ಕುಸಿಯಲಿದೆ ಎಂಬ ಭಯವೂ ಇತ್ತು. ಆದರೆ, ಎರಡೂ ಆತಂಕಗಳು ಹುಸಿಯಾದವು. ಅದೇ ರೀತಿ ಎಐನಿಂದಲೂ ಇಂತಹವೊಂದು ಭೀತಿ ಸೃಷ್ಟಿಯಾಗಿದೆ. ಆದರೆ, ಅದು ಸಹ ಮಾನವನಿಗೆ ಪರ್ಯಾಯವಲ್ಲ. ಅದು ಸಹಾಯಕ ಸಾಧನ ಮಾತ್ರ ಎಂದು ಹೇಳಿದರು.
ಮಾಹಿತಿಯ ಪ್ರವಾಹ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮಾಹಿತಿಯನ್ನು ವಿಶ್ಲೇಷಿಸಿ, ಸತ್ಯಾಸತ್ಯತೆ ಪರಿಶೀಲಿಸಿ, ಜ್ಞಾನವಾಗಿ ಪರಿವರ್ತಿಸುವ ಸಾಮರ್ಥ್ಯವೇ ಮುಖ್ಯವಾಗಿದೆ. ಚಾಟ್ ಜಿಪಿಟಿ ಸೇರಿದಂತೆ ಎಐ ಸಾಧನಗಳಿಂದ ದೊರೆಯುವ ಉತ್ತರಗಳು ನಾವು ಕೇಳುವ ಪ್ರಶ್ನೆಗಳ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತವೆ. ಆದ್ದರಿಂದ ಸರಿಯಾದ ಪ್ರಶ್ನೆ ಕೇಳುವ ವಿವೇಕವನ್ನೂ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.
 ವಿದ್ಯಾರ್ಥಿಗಳಿಗೆ ಸಹಾನುಭೂತಿ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ, ಬಹುಶಾಖಾ ಶಿಕ್ಷಣ ಅತ್ಯಗತ್ಯವಾಗಿದೆ. ಎಐ ಪುನರಾವರ್ತಿತ ಕೆಲಸ ಮಾಡಬಹುದು. ಆದರೆ, ಹೊಸ ದೃಷ್ಟಿಕೋನ, ಧೈರ್ಯ, ಕಾಳಜಿ, ನೈತಿಕ ನಿರ್ಧಾರ, ನಾಯಕತ್ವ ನೀಡಲ್ಲ. ಇದನ್ನು  ಮನುಷ್ಯರೇ ಸ್ವಯಂ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯಗಳು ಕೇವಲ ಜ್ಞಾನ ಹಂಚುವ ಕೇಂದ್ರಗಳಾಗಿರದೆ, ವಿದ್ಯಾರ್ಥಿಗಳಲ್ಲಿ ವಿವೇಕ, ನೈತಿಕತೆ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸೂಕ್ತ ನಿರ್ಧಾರ ಕೈಗೊಳ್ಳುವ ಗುಣವನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯವು ದೇಶದ 6ನೇ ಹಳೆಯ ವಿಶ್ವವಿದ್ಯಾಲಯ. ಬ್ರಿಟಿಷರ ಆಡಳಿತದ ಹೊರತಾಗಿ ಭಾರತೀಯ ಆಡಳಿತದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಸೂರಿನ ಮಹಾರಾಜರು ಶಿಕ್ಷಣಕ್ಕೆ ನೀಡಿದ ಮಹತ್ವದ ಫಲವಾಗಿ ಈ ಸಂಸ್ಥೆ ಇದೀಗ ದೇಶದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದೆ ಎಂದು ಪ್ರಶಂಸಿಸಿದರು.
ವಿಶ್ವವಿದ್ಯಾಲಯಗಳು ಭವಿಷ್ಯಕ್ಕೆ ಸಿದ್ಧವಾಗಿರುವ ಶಿಕ್ಷಣ ವ್ಯವಸ್ಥೆ ರೂಪಿಸಬೇಕು. ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡ ಸಮಗ್ರ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀಡುವುದೇ ಇಂದಿನ ಅಗತ್ಯವಾಗಿದೆ ಎಂದೂ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯಕ್ಕೆ ದೇಶದಲ್ಲೇ ವಿಶಿಷ್ಟ ಸ್ಥಾನ

ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, 1916ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವೇ  ಮೈಸೂರು ವಿಶ್ವವಿದ್ಯಾಲಯ. ಇದು ದೇಶದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲ, ಮಾನವೀಯ ಮೌಲ್ಯ ನೀಡಿದೆ. ಅನೇಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಮಹನೀಯರನ್ನೂ ರೂಪಿಸಿದೆ ಎಂದು ಹೇಳಿದರು.
ಜಗತ್ತು ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ, ಹವಾಮಾನ ವೈಪರೀತ್ಯ, ಆರೋಗ್ಯ ಕ್ಷೇತ್ರದ ಸವಾಲುಗಳು, ಜಾಗತಿಕ ಜಟಿಲತೆಗಳು ಉನ್ನತ ಶಿಕ್ಷಣದ ಮುಂದಿನ ದಿಕ್ಕನ್ನು ನಿರ್ಧರಿಸುತ್ತವೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವ ಸಂಸ್ಥೆಗಳಾಗದೆ. ಹೊಸ ಜ್ಞಾನ ಸೃಷ್ಟಿಸುವ, ಸಂಶೋಧನೆಗೆ ಉತ್ತೇಜನ ನೀಡುವ, ನಾವೀನ್ಯತೆ ಬೆಳೆಸುವ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೇಂದ್ರಗಳಾಗಬೇಕು ಎಂದರು.
ಎಐ ಬಳಕೆಯು ನೈತಿಕತೆ, ಪಾರದರ್ಶಕತೆ, ಮತ್ತು ಮಾನವೀಯ ಮೌಲ್ಯಗಳಿಂದ ಸಾಗಬೇಕು. ಭವಿಷ್ಯದಲ್ಲಿ ಎಐ ಯಾವುದೇ ಕಾರಣಕ್ಕೂ ಮಾನವನನ್ನು ಬದಲಾಯಿಸುವುದಿಲ್ಲ. ಪ್ರಶ್ನೆ ಕೇಳುವ ಮನೋಭಾವ, ಹೊಸ ಆಲೋಚನೆ ರೂಚಿಸುವ ಶಕ್ತಿ, ಸಂಶೋಧನಾ ಮನೋಭಾವ ಯಾವ ಎಐ ಕೂಡ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಇದನ್ನು ಸಮರ್ಥವಾಗಿ ಬಳಸುವವರು ಅದನ್ನು ಬಳಸದೆ ಇರುವವರಿಗಿಂತ ಹೆಚ್ಚಾಗಿ ಪ್ರಗತಿ ಸಾಧಿಸುತ್ತಾರೆ ಎಂಬುದು ನಂಬಿಕೆ ಎಂದರು.
ಎಐಯನ್ನು ಕೇವಲ ಅಸೈನ್‌ಮೆಂಟ್ ಬರೆಯುವ ಸಾಧನವಾಗಿ ಬಳಸಬೇಡಿ. ಚಿಂತನೆ, ಸೃಜನಶೀಲತೆ, ವಿಮರ್ಶಾತ್ಮಕ ವಿಶ್ಲೇಷಣೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಬೆಳೆಸುವ ಸಹಯೋಗಿಯಾಗಿ ಎಐ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ವಿದ್ಯಾರ್ಥಿಗಳು ಉತ್ತಮ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ, ಸಾಮಾಜಿಕ ಹೊಣೆಗಾರಿಕೆ, ಮಾನವೀಯ ಮೌಲ್ಯ, ಸಂವಿಧಾನದ ಆದರ್ಶಗಳು, ಪರಿಸರದ ಬಗ್ಗೆ ಕಾಳಜಿಯನ್ನೂ ಬೆಳೆಸಿಕೊಳ್ಳಬೇಕು. ಶಿಕ್ಷಣ ಉದ್ದೇಶ ಕೇವಲ ಉದ್ಯೋಗವಲ್ಲ. ಉತ್ತಮ ಸಮಾಜ ನಿರ್ಮಾಣವೂ ಆಗಿದೆ ಎಂದರು. ಪರೀಕ್ಷಾಂಗ ಕುಲಸಚಿವ ಡಾ.ನಾಗರಾಜ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net