ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಎಐ ಬಳಸಿ

 ನಗರದ ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನಲ್ಲಿ(ವಿವಿಸಿಇ)ಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಶಿಕ್ಷಕರಿಗಾಗಿ ಎಐ’ ಕುರಿತು ಬೋಧಕ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿದರು. ಪಿ.ವಿಶ್ವನಾಥ್, ಸದಾಶಿವಗೌಡ, ಶೋಭಾ ಶಂಕರ್, ಬಿ.ಸಿ.ಅಶೋಕ್, ಎಂ.ಆರ್.ಪೂಜಾ ಇದ್ದರು.
ನಗರದ ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನಲ್ಲಿ(ವಿವಿಸಿಇ)ಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಶಿಕ್ಷಕರಿಗಾಗಿ ಎಐ’ ಕುರಿತು ಬೋಧಕ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿದರು. ಪಿ.ವಿಶ್ವನಾಥ್, ಸದಾಶಿವಗೌಡ, ಶೋಭಾ ಶಂಕರ್, ಬಿ.ಸಿ.ಅಶೋಕ್, ಎಂ.ಆರ್.ಪೂಜಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಲಹೆ
  • ಶಿಕ್ಷಕರಿಗಾಗಿ ಬೋಧಕ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ
ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೋಧನೆ, ಕಲಿಕೆಯ ಪ್ರಕ್ರಿಯೆಯಲ್ಲಿ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅರಿವು ಹೊಂದಬೇಕು ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.
ನಗರದ ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನಲ್ಲಿ (ವಿವಿಸಿಇ)ಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಶಿಕ್ಷಕರಿಗಾಗಿ ಎಐ’ ಕುರಿತು ಬೋಧಕ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. 
ತಾಂತ್ರಿಕ ಪರಿವರ್ತನೆಗಳ ಪರಿಣಾಮವಾಗಿ 2030ರ ವೇಳೆಗೆ ಇಂದಿನ ಶೇ.85ರಷ್ಟು ಉದ್ಯೋಗಗಳಲ್ಲಿ ಬದಲಾವಣೆ ಸಂಭವಿಸಬಹುದು ಎಂದು ವಿವಿಧ ಅಧ್ಯಯನಗಳು ಹೇಳುತ್ತಿದ್ದು, ಎಲ್ಲ ವೃತ್ತಿಗಳಲ್ಲೂ ಮರುಕೌಶಲ ಅವಶ್ಯಕವಾಗಿದೆ ಎಂದರು.
ಇಂದಿನ ದಿನಗಳಲ್ಲಿ ಹಲವಾರು ಎಐ ಪರಿಕರಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ತಂತ್ರಜ್ಞಾನಗಳು ಹೊರಬರಲಿವೆ. 
ಆದರೆ, ಈ ಉಪಕರಣಗಳನ್ನು ಅಭಿವೃದ್ಧಿಪಡಿಸುವುದಕ್ಕಿಂತ ಅವುಗಳನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಕಲಿಯುವುದು ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಮಾತ್ರವಲ್ಲದೆ ಸಮಾಜದ ಎಲ್ಲ ವಲಯಗಳಿಗೂ ವ್ಯಾಪಕ ತರಬೇತಿ ಅಗತ್ಯ ಇದೆ ಎಂದು ತಿಳಿಸಿದರು.
ರೈತರಿಗೆ ನೆರವಾಗುವಂತೆ ಎಐ ಆಧಾರಿತ ಅನೇಕ ಉಪಕರಣ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಅವುಗಳನ್ನು ಬಳಸುವಲ್ಲಿ ರೈತರಿಗೆ ತಾಂತ್ರಿಕ ಅರಿವು ಕೊರತೆಯಾಗಬಹುದು. ಅಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ರೈತರಿಗೆ ಮಾರ್ಗದರ್ಶನ ನೀಡಬಹುದು. ಅದಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಗತ್ಯ ಜ್ಞಾನ ಮತ್ತು ಕೌಶಲ ನೀಡಬೇಕು ಎಂದು ಹೇಳಿದರು.
ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ತಮ್ಮ ಜ್ಞಾನವನ್ನು ನಿರಂತರವಾಗಿ ಉನ್ನತೀಕರಣಗೊಳಿಸಿಕೊಳ್ಳಬೇಕು. ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶಿಕ್ಷಕರು ತಮ್ಮ ಕಲಿಕೆಯನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಹೆಚ್ಚಿನವರಿಗೆ ಇದರ ಪ್ರಯೋಜನ ತಲುಪಿಸಬೇಕು ಎಂದು ಕರೆನೀಡಿದರು.
ವಿಟಿಯು ಈಗಾಗಲೇ ಮೊದಲ ಸೆಮಿಸ್ಟರ್‌ನಲ್ಲೇ ಎಐ ಅನ್ನು ಸಾಮಾನ್ಯ ವಿಷಯವಾಗಿ ಪರಿಚಯಿಸಿದ್ದು, ವಿದ್ಯಾರ್ಥಿಗಳು ನೈಜ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವಂತೆ ಇನ್ನೋವೇಶನ್ ಆ್ಯಂಡ್ ಡಿಸೈನ್ ಥಿಂಕಿಂಗ್ ಮುಂತಾದ ಉಪಕ್ರಮಗಳನ್ನು ಆರಂಭಿಸಿದೆ ಎಂದು ತಿಳಿಸಿದರು.
ಸಂಶೋಧನೆ ಮತ್ತು ನವೀನತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ 2047ರ ವೇಳೆಗೆ ಭಾರತವು ಸುಧಾರಿತ ತಂತ್ರಜ್ಞಾನಗಳಲ್ಲಿ ಸ್ವಾವಲಂಬಿಯಾಗಬೇಕೆಂಬ ಗುರಿ ಸಾಧಿಸಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಆಶಿಸಿದರು.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಿ.ವಿಶ್ವನಾಥ್, ಪ್ರಾಂಶುಪಾಲ ಸದಾಶಿವಗೌಡ, ಉಪ ಪ್ರಾಂಶುಪಾಲೆ ಶೋಭಾ ಶಂಕರ್, ವಿವಿಸಿಇ ಕಾರ್ಪೊರೇಟ್ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಡೀನ್ ಬಿ.ಸಿ.ಅಶೋಕ್, ಸಿಎಸ್‌ಇ ವಿಭಾಗದ ಮುಖ್ಯಸ್ಥೆ ಮತ್ತು ಪ್ರಾಧ್ಯಾಪಕಿ ಎಂ.ಆರ್.ಪೂಜಾ, ಪಲ್ಸ್ ಐಐಟಿ ಮದ್ರಾಸ್‌ನ ಸಹ-ಸಂಸ್ಥಾಪಕಿ ಎನ್.ಅಲಮೇಲು, ಐಐಟಿ ತಿರುಪತಿಯ ಪ್ರಾಧ್ಯಾಪಕ ಅರುಣ್ ಕೆ.ತಂಗಿರಾಲ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net