ಕುಕ್ಕರಹಳ್ಳಿಕೆರೆ ಸ್ವಚ್ಛತೆಗೆ ಮುಂದಾದ ಮೈಸೂರು ವಿಶ್ವ ವಿದ್ಯಾಲಯ

ಕುಕ್ಕರಹಳ್ಳಿ ಕೆರೆ
ಕುಕ್ಕರಹಳ್ಳಿ ಕೆರೆ
Published on

ಪ್ರಮುಖ ಮುಖ್ಯಾಂಶಗಳು

  • ಬೋಟ್ ಮೂಲಕ ಸ್ವಚ್ಛತೆ ಆರಂಭಿಸುವ ಮುನ್ನ ನುರಿತ ಈಜುಪಟುಗಳು, ಸ್ವಚ್ಛತಾ ತಂಡಕ್ಕೆ ತರಬೇತಿ
  • ಸಾಹಿತಿಗಳು, ಪರಿಸರ ವಾದಿಗಳಿಗೆ ನೆಚ್ಚಿನ ತಾಣ
  • ಔಟ್‌ಬ್ಯಾಕ್ ವರುಣ ತಂಡದ ಸಹಕಾರ
ಮೈಸೂರು: ನಗರದ ಕುಕ್ಕರಹಳ್ಳಿಕೆರೆ ಸ್ವಚ್ಛತೆಗೆ ಮೈಸೂರು ವಿಶ್ವವಿದ್ಯಾಲಯ ಮುಂದಾಗಿದೆ. ಇದಕ್ಕಾಗಿ ಗೋವಾದಿಂದ ತಂಡವನ್ನು ಕರೆಸಲು ನಿರ್ಧರಿಸಿದೆ. 
ಬೋಟ್ ಬಳಸಿ ಕುಕ್ಕರಹಳ್ಳಿ ಕೆರೆಯನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ವರುಣ ಕೆರೆಯ ಔಟ್‌ಬ್ಯಾಕ್ ವರುಣ ತಂಡದ ಸಹಕಾರದಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದು, ಇದಕ್ಕಾಗಿ ಈಗಾಗಲೇ ಗೋವಾದಿಂದ ಬೋಟ್ ಖರೀದಿ ಮಾಡಲಾಗಿದೆ.
ಹಲವರಿಗೆ ಸ್ಫೂರ್ತಿಯಾಗಿರುವ ಹಾಗೂ ವಾಯುವಿಹಾರ ತಾಣವಾಗಿರುವ ಕೆರೆ ಸ್ವಚ್ಛಗೊಳಿಸುವಂತೆ ಮೈಸೂರಿನ ವಿವಿಧ ಸಂಘ-ಸಂಸ್ಥೆಗಳು, ಸಾಹಿತಿಗಳು, ಪರಿಸರವಾದಿಗಳು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿರುವ ವಿವಿ ಈಗ ಕೆರೆ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಅದರಂತೆ ಈಗ 3 ಲಕ್ಷ ರೂ. ವೆಚ್ಚದಲ್ಲಿ ಬೋಟ್ ತರಿಸಿ ಅವುಗಳ ಮೂಲಕ ನುರಿತ ತಜ್ಞರ ತಂಡದಿಂದ ಸ್ವಚ್ಛತೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.
ಮೈಸೂರಿಗೆ ಬರುವ ಪ್ರವಾಸಿಗರು ಮತ್ತು ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾದ ಕುಕ್ಕರಹಳ್ಳಿ ಕೆರೆ ನಗರದ ಒಂದು ಅಚ್ಚುಮೆಚ್ಚಿನ ವಿಹಾರ ಸ್ಥಳವಾಗಿದೆ. ಇಂತಹ ಐತಿಹಾಸಿಕ ಕೆರೆ ಕಲುಷಿತಗೊಂಡಿದ್ದು, ದುರ್ನಾತ ಬೀರುತ್ತದೆ. ಆಗಾಗ್ಗೆ ಕಲುಷಿತ ನೀರಿನಿಂದ ಸಾವಿರಾರು ಜಲಚರಗಳು ಮೃತಪಟ್ಟಿವೆ. ಈ ರೀತಿ ಘಟನೆಗಳು ಪರಿಸರ ಪ್ರೇಮಿಗಳು ಬೇಸರವುಂಟು ಮಾಡಿದೆ.
ಈ ಹಿಂದೆಯೂ ಕುಕ್ಕರಹಳ್ಳಿ ಕೆರೆ ಉಳಿಸುವಂತೆ ಸಾಕಷ್ಟು ಹೋರಾಟಗಳು ನಡೆದಿವೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಾಕಷ್ಟು ದೂರು, ಸಲಹೆ, ವರದಿಗಳನ್ನು ನೀಡಿದ್ದರು. ಆಗ ತಾತ್ಕಾಲಿಕವಾಗಿ ಪರಿಹಾರವನ್ನೂ ಕಂಡುಕೊಳ್ಳಲಾಗಿತ್ತು.
ವರುಣ ಕೆರೆಯಲ್ಲಿ ಜಲ ಕ್ರೀಡೆ ನಡೆಸುತ್ತಿರುವ ಔಟ್‌ಬ್ಯಾಕ್ ವರುಣ ತಂಡದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ.ಸವಿತಾ ಅವರು ಈ ಬಗ್ಗೆ ಚರ್ಚಿಸಿ, ವರುಣ ಕೆರೆಯ ಸ್ವಚ್ಛತೆಗೆ ಬಳಸಿರುವ ವಿಧಾನದ ಮಾಹಿತಿ ಪಡೆದುಕೊಂಡಿದ್ದಾರೆ. 
ನುರಿತ ತಂಡದಿಂದ ಸ್ವಚ್ಛತೆ: 
ಕುಕ್ಕರಹಳ್ಳಿ ಕೆರೆಯನ್ನು ಸ್ವಚ್ಛ ಮಾಡುತ್ತೇವೆ ಎಂದು ಹಲವು ಸಂಘ-ಸಂಸ್ಥೆ, ಸ್ವಯಂ ಸೇವಕರು ಬರುತ್ತಾರೆ. ಅವರ ಕೈಯಿಂದ ಸ್ವಚ್ಛತೆ ಮಾಡಿಸುವುದು ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ಅನುಭವಿ ಔಟ್‌ಬ್ಯಾಕ್ ವರುಣ ಸಂಸ್ಥೆಯೊಂದಿಗೆ ಚರ್ಚಿಸಿ, ಬೋಟ್ ತರಿಸಲಾಗುತ್ತಿದೆ. 
ಯಾವುದೇ ಅವಘಡವಾಗದಂತೆ ಬೋಟ್ ಮೂಲಕ ಸ್ವಚ್ಛತೆ ಆರಂಭಿಸುವ ಮುನ್ನ ನುರಿತ ಈಜುಪಟುಗಳು, ಸ್ವಚ್ಛತಾ ತಂಡಕ್ಕೆ ತರಬೇತಿ ನೀಡಿ, ತದನಂತರವೇ ಸ್ವಚ್ಛತೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕುಕ್ಕರಹಳ್ಳಿ ಕೆರೆಗೆ ಧಕ್ಕೆ ಆಗದಂತೆ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ತಿಳಿಸಿದ್ದಾರೆ.
ಈಗಾಗಲೇ ಗೋವಾದಲ್ಲಿ ಬೋಟ್ ಬುಕ್ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ನಗರ ತಲುಪಲಿದೆ. ಈ ಬೋಟ್‌ಗಳ ಮೂಲಕ ಇಡೀ ಕೆರೆಯನ್ನು ಸ್ವಚ್ಛಗೊಳಿಸಬಹುದು. ಕೆರೆಯಲ್ಲಿರುವ ಕಸವನ್ನು ಸಂಗ್ರಹಿಸಿ ಮತ್ತೊಂದೆಡೆ ಸಾಗಿಸಬಹುದು. ಕೆಲಸಕ್ಕೆ ತಕ್ಕಂತೆ ಬೋಟ್‌ನ ವೇಗದ ಸಾಮರ್ಥ್ಯ ಬದಲಿಸಿಕೊಳ್ಳಲು ಅವಕಾಶವಿದೆ ಎಂದು ಔಟ್‌ಬ್ಯಾಕ್ ವರುಣ ಮುಖ್ಯಸ್ಥ ಅಬ್ದುಲ್ ಅಲೀಮ್ ವಿವರಿಸಿದ್ದಾರೆ.
ಮೈಸೂರಿನ ಭಾಗದಲ್ಲಿ ನಮ್ಮ ಸಂಸ್ಥೆ ಜಲಕ್ರೀಡೆ ನಡೆಸುತ್ತಿದ್ದು, ಜಲ ಸಂರಕ್ಷಣೆ ನಿಟ್ಟಿನಲ್ಲೂ ಕೆಲಸ ಮಾಡುತ್ತಿದೆ. ವರುಣ ಕೆರೆಯನ್ನು ನಿತ್ಯವೂ ಬೋಟ್ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ಅದರಂತೆ ಕುಕ್ಕರಹಳ್ಳಿಕೆರೆ ಸ್ವಚ್ಛತೆಗೂ ನಮ್ಮ ತಂಡ ಸಹಕಾರ ನೀಡಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net