ಸರ್ಕಾರಕ್ಕೆ ‘ಉದಯರವಿ’ ಮನೆ ಹಸ್ತಾಂತರಿಸುವುದಿಲ್ಲ : ಕುವೆಂಪು ಕುಟುಂಬ ವರ್ಗದವರ ಸ್ಪಷ್ಟನೆ

ರಾಷ್ಟ್ರಕವಿ ಕುವೆಂಪು
ರಾಷ್ಟ್ರಕವಿ ಕುವೆಂಪು
Published on
ಮೈಸೂರು: ನಗರದಲ್ಲಿರುವ ಕುವೆಂಪು ಅವರ ‘ಉದಯರವಿ’ ಮನೆಯನ್ನು ಮಾರಾಟ ಮಾಡುವ ಅಥವಾ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ಹೊಂದಿಲ್ಲ ಎಂದು ಕುವೆಂಪು ಕುಟುಂಬ ವರ್ಗದವರು ತಿಳಿಸಿದ್ದಾರೆ.
ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಸ್ಮಾರಕವನ್ನು ಅತ್ಯಂತ ಅರ್ಥಪೂರ್ಣಕವಾಗಿ ಅಭಿವೃದ್ಧಿಪಡಿಸುವಲ್ಲಿ ವ್ಯಕ್ತವಾಗಿರುವ ಕನ್ನಡ ಜನತೆಯ ಬಯಕ ಹಾಗೂ ಕರ್ನಾಟಕ ಸರ್ಕಾರದ ಇಚ್ಛಾಶಕ್ತಿಗೆ ನಾವು ಅಭಾರಿಯಾಗಿರುತ್ತೇವೆ. ಕುವೆಂಪು ಅವರು ಸುಮಾರು 60 ವರ್ಷ ಬಾಳಿ ಬದುಕಿದ ಹಾಗೂ ಅವರ ಬಹುತೇಕ ಕೃತಿಗಳು ರಚನೆಯಾದ ಸ್ಥಳ ಉದಯರವಿ. ಅದನ್ನೂ ಸಹ ವಸ್ತುಸಂಗ್ರಹಾಲಯವನ್ನಾಗಿ ಮಾಡಬೇಕೆಂಬ ಮಾತುಗಳು ಹಲವಾರು ವರ್ಷಗಳಿಂದ ಕೇಳಿ ಬರುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಸರ್ಕಾರದ ಕಡೆಯಿಂದ ಪ್ರಯತ್ನ ನಡೆಯಿತಾದರೂ ಕಾರಣಾಂತರಗಳಿಂದ ಅದು ಕಾರ್ಯಗತವಾಗಲಿಲ್ಲ. ಆದರೆ, ಉದಯರವಿಯನ್ನು ನೋಡಲು ಬರುವ ಜನರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಕನ್ನಡ ಜನತೆಯ ಬಯಕೆಯಂತೆ, ಉದಯರವಿ ಮನೆಯನ್ನು ನಮ್ಮ ಕುಟುಂಬದವರೇ ವಸ್ತುಸಂಗ್ರಹಾಲಯವನ್ನಾಗಿಸಲು ನಿರ್ಧರಿಸಿ, ಕಾರ್ಯೋನ್ಮುಖರಾಗಿದ್ದೇವೆ. ಸುಮಾರು 90 ವರ್ಷಗಳಷ್ಟು ಹಳೆಯದಾದ ಉದಯರವಿ ಮನೆಯ ಅತ್ಯಂತ ಅಗತ್ಯವಾದ ದುರಸ್ತಿ ಕೆಲಸಗಳನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮ್ಯೂಸಿಯಂ ಹೇಗಿರಬೇಕು ಎಂಬುದರ ರೂಪರೇಷೆಗಳನ್ನು ಕೂಡಾ ನಿರ್ಧರಿಸಲಾಗುತ್ತಿದೆ. ಬಳಿಕ ಉದಯರವಿಯನ್ನು ಅದರ ಮೂಲರೂಪದಲ್ಲಿಯೇ ವಸ್ತು ಸಂಗ್ರಹಾಲಯವನ್ನಾಗಿಸುವ ಕೆಲಸವನ್ನು ಕೈಗೊಳ್ಳಲಾಗುವುದು. ಅದನ್ನೊಂದು ಅತ್ಯುತ್ತಮ ವಸ್ತುಸಂಗ್ರಹಾಲಯವನ್ನಾಗಿಸಿ, ಮುಂದಿನ ತಲೆಮಾರಿಗೆ ಕುವೆಂಪು ಅವರ ಜೀವನ, ಸಾಹಿತ್ಯ ಮತ್ತು ಚಿಂತನೆಗಳನ್ನು ಪರಿಚಯಿಸುವ ಜವಾಬ್ದಾರಿಯು ನಮ್ಮದಾಗಿರುತ್ತದೆ. ಉದಯರವಿಯನ್ನು ಮಾರಾಟ ಮಾಡುವ ಅಥವಾ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ಈಗ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ, ಮತ್ತೆ ಪತ್ರಿಕೆಗಳಲ್ಲಿ ಉದಯರವಿಯನ್ನು ಸ್ಮಾರಕವಾಗಿಸಬೇಕು ಎನ್ನುವ ಸಂಗತಿ ಬರಲಾರಂಭಿಸಿದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಉದಯರವಿಗೆ ಭೇಟಿ ನೀಡಿದ್ದರು. ಅವರ ಗಮನಕ್ಕೆ ಮೇಲಿನ ಸಂಗತಿಗಳನ್ನು ತರಲಾಗಿದೆ. ಸಚಿವರು, ‘ಈ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಅದಕ್ಕೆ ನೀವು ಸಹಕರಿಸಿ’ ಎಂದು ಹೇಳಿದ್ದರು. ಉದಯರವಿಯನ್ನು ವಸ್ತುಸಂಗ್ರಹಾಲಯನ್ನಾಗಿಸಲು, ಪ್ರಸ್ತುತ ನಾವೇ ಕಾರ್ಯೋನ್ಮುಖರಾಗಿರುವುದರಿಂದ ಹಾಗೂ ಉದಯರವಿಯ ಮಾರಾಟದ ಉದ್ದೇಶವೇ ನಮಗಿಲ್ಲವಾದ್ದರಿಂದ ಈ ವಿಚಾರಕ್ಕೆ ಸಂಬಂಧಿಸಿದ ಹಣಕಾಸಿನ ವಿಷಯ ಇಲ್ಲಿ ಅಪ್ರಸ್ತುತ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net