ಗುರಿ ಸಾಧನೆಯ ಕಡೆ ಮುಖ ಮಾಡಿ

ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಿರಿಯ ವಿದ್ಯಾರ್ಥಿನಿಯರ ಸಮಾವೇಶ ನಡೆಯಿತು.
ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಿರಿಯ ವಿದ್ಯಾರ್ಥಿನಿಯರ ಸಮಾವೇಶ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ.ಕಲಾಶ್ರೀ ಸಲಹೆ

ವಿದ್ಯಾರ್ಥಿಗಳು ಆತ್ಮವಿಶ್ವಾಸ, ಶಿಸ್ತು ಮತ್ತು ಗುರಿಸಾಧನೆಯ ಛಲವನ್ನು ಹೊಂದಿದಾಗ ಮಾತ್ರ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ.ಕಲಾಶ್ರೀ ಹೇಳಿದರು.

ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿನಿಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದೃಢ ವಿಶ್ವಾಸ, ಪರಿಶ್ರಮ ಮತ್ತು ಏಕಾಗ್ರತೆ ಎಂಬ ಅಸ್ತ್ರಗಳನ್ನು ಬೆನ್ನಿಗೆ ಗಟ್ಟಿಯಾಗಿ ಕಟ್ಟಿಕೊಂಡಾಗ ಮಾತ್ರ ಸಾಧನೆ ಸಿದ್ಧಿಸುತ್ತದೆ ಎಂದು ತಿಳಿಸಿದ ಅವರು, ತಮ್ಮ ಉನ್ನತ ಸಾಧನೆಗೆ ಕಾರಣವಾದ ಈ ಕಾಲೇಜಿನ ಬಗ್ಗೆ ಗೌರವವನ್ನು ವ್ಯಕ್ತಪಡಿಸುವ ಮೂಲಕ ಅನುಭವವನ್ನು ಹಂಚಿಕೊಂಡರು.
ಹಿರಿಯ ವಕೀಲರಾದ ಎಂ.ಎನ್.ಸುಮನಾ ಮಾತನಾಡಿ, ಋಣಾತ್ಮಕ ಚಿಂತೆಗಳನ್ನು ತ್ಯಜಿಸಿ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ನಾವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಕೂಡ ಮಾನವೀಯ ಮೌಲ್ಯಗಳು ಹಾಗೂ ನೈತಿಕ ಗುಣಗಳೊಂದಿಗೆ ಬದುಕಬೇಕು. ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಕಾನೂನು ಅರಿವನ್ನು ಪಡೆಯುವುದು ಇಂದಿನ ಕಾಲದ ಹೆಣ್ಣು ಮಕ್ಕಳಿಗೆ ಪ್ರಮುಖವಾಗಿರುತ್ತದೆ ಎಂದು ಕಾಲೇಜಿನ ದಿನಗಳ ಅನುಭವವನ್ನು ತಿಳಿಸುತ್ತಾ ತಮ್ಮ ಸಾಧನೆಯ ಹೆಜ್ಜೆಗಳನ್ನು ನೆನಪಿಸಿಕೊಂಡರು.
ಲೆಕ್ಕ ಪರಿಶೋಧಕಿ ಪಿ. ಸಹನಾ ಮಾತನಾಡಿ, ವ್ಯಕ್ತಿಗಳಾಗುವುದಕ್ಕಿಂತ ವ್ಯಕ್ತಿತ್ವ ರೂಪಿಸಿಕೊಳ್ಳುವುದೇ ದೊಡ್ಡ ಸಾಧನೆ. ವಿದ್ಯಾರ್ಥಿಗಳು ಸಮಯಪಾಲನೆ, ಗುರುಹಿರಿಯರಲ್ಲಿ ಗೌರವ ಭಾವನೆ ಹೊಂದಿ ಶಿಕ್ಷಣ ಕಲಿಯಬೇಕು. ವಿದ್ಯಾರ್ಥಿ ಜೀವನ ಚಿನ್ನದಂತಹದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಸಾರ್ಥಕ ಜೀವನ ಮಾಡಬೇಕೆಂದು ತಿಳಿಸಿದರು.
ತಜ್ಞ ವೈದ್ಯೆ ಡಾ.ಕೆ. ಎಸ್. ನಾಗವೇಣಿ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರ, ಉತ್ತಮ ಬಾಂಧವ್ಯ ಬೆಸೆಯುವಂತಹುದು. ಇಂತಹ ವಾತಾವರಣದಲ್ಲಿ ವಿದ್ಯೆ ಕಲಿತವರು ಸಮಾಜಕ್ಕೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ. ಹದಿಹರೆಯದ ಈ ವಯಸ್ಸಿನಲ್ಲಿ ಚಂಚಲತೆಯ ಸ್ವಭಾವವಿರುತ್ತದೆ. ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಇವುಗಳಿಂದ ಮಾನಸಿಕ ಮತ್ತು ದೈಹಿಕ ದೃಢತೆ ಸಾಧಿಸಬಹುದು ಎಂದರು.
ಹಲವು ವಿದ್ಯಾರ್ಥಿನಿಯರು ತಮ್ಮ ಕಾಲೇಜು ದಿನಗಳ ಅನುಭವಗಳನ್ನು ಹಂಚಿಕೊಂಡರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net