ನಾಗರಹೊಳೆ ಉದ್ಯಾನವನವು ಈ ನೆಲದ ಜೇನು ಕುರುಬ, ಬೆಟ್ಟ ಕುರುಬ, ಪಣಿಯ ಮತ್ತು ಯರವ ಸಮುದಾಯಗಳ ಪಾರಂಪರಿಕ ನೆಲೆಯಾಗಿದೆ. ನಮ್ಮ ಪೂರ್ವಜರಿಂದ ಬಂದ ಮೌಲ್ಯಗಳು ಮತ್ತು ಜಾನಪದ ಪದ್ಧತಿಗಳೊಂದಿಗೆ ಕಾಡು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿಕೊಂಡು ಬಂದಿದ್ದೇವೆ. ಆದಿವಾಸಿ ಸಂಪ್ರದಾಯಗಳು ಮತ್ತು ಪರಂಪರೆಯನ್ನು ಸಂವಿಧಾನದ ಐದನೇ ಅನುಸೂಚಿ ಮತ್ತು ಪೇಸಾ ಕಾಯ್ದೆ, ಅರಣ್ಯಹಕ್ಕು ಕಾಯ್ದೆಯ ಮೂಲಕ ಬಲಗೊಳಿಸಲಾಗಿದೆ. ಆದರೆ ಸಂರಕ್ಷಿತ ಪ್ರದೇಶಗಳಲ್ಲಿ ಆದಿವಾಸಿ ಜನರ ಮತ್ತು ಸಂಪ್ರದಾಯಗಳ ಮೇಲೆ ನಡೆಯುತ್ತಿರುವ ಅನ್ಯಾಯದ ಕಡೆ ಗಮನ ನೀಡದ ಸರ್ಕಾರಗಳು ಇದೀಗ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆ ನಡೆಸುವ ಮೂಲಕ ನಮ್ಮ ಮೇಲಾಗಿರುವ ಗಾಯಕ್ಕೆ ಉಪ್ಪು ಸವರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.