ತಿ.ನರಸೀಪುರ ಪಟ್ಟಣದಲ್ಲಿ ಬುಧವಾರ ರಾತ್ರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದ ಪದಾಧಿಕಾರಿಗಳು ಪಂಜಿನ ಮೆರವಣಿಗೆ ನಡೆಸಿದರು. ಕುಮಾರಸ್ವಾಮಿ, ಶಂಕರ್, ಶಾಂತಮೂರ್ತಿ, ಇ.ರಾಜು, ಎಚ್.ಎಂ.ರವಿಕುಮಾರ್ ಇತರರು ಇದ್ದರು.
ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಸೂಚಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಖಂಡಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಪಟ್ಟಣದಲ್ಲಿ ಬುಧವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.
ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಮಾವಣೆಗೊಂಡಿದ್ದ ರಾಜ್ಯ ರೈತ ಸಂಘದ ಕಾರ್ಯಕರ್ತರು, ಬರಗಾಲದಲ್ಲಿ ಇಲ್ಲಿನ ರೈತರು ಹೈರಾಣರಾಗಿ ಬೆಳೆಗೆ ನೀರಿಲ್ಲದೆ ಪರದಾಡುತ್ತಿರುವಾಗ ನಿತ್ಯವೂ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತ ಪಂಜುಗಳನ್ನು ಹೊತ್ತಿಸಿ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದರು.
ಕಾಲೇಜು ರಸ್ತೆ, ಖಾಸಗಿ ಬಸ್ ನಿಲ್ದಾಣ ವೃತ್ತ, ಲಿಂಕ್ ರಸ್ತೆ, ಭಗವಾನ್ ಟಾಕೀಸ್ ವೃತ್ತ ಹಾಗೂ ಮಾರುಕಟ್ಟೆ ರಸ್ತೆಗಳಲ್ಲಿ ಸಾಗಿದ ಪಂಜಿನ ಮೆರವಣಿಗೆ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ತಲುಪಿ ಅಂತ್ಯಗೊಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಮಾತನಾಡಿ, ಕಬಿನಿ ಜಲಾಶಯದಲ್ಲಿ ನೀರು ಲಭ್ಯವಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಮುಂದಾಗಿದೆ. ಕಾವೇರಿ ನೀರಾವರಿ ನಿಗಮದ ಕಚೇರಿಗಳಿಗೆ ಬೀಗ ಹಾಕಬೇಕು. ಆದೇಶಕ್ಕೆ ತಲೆಬಾಗಿ ಕಾವೇರಿ ನೀರನ್ನು ಬಿಟ್ಟಿದ್ದೇ ಆದಲ್ಲಿ ಆ.17ರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಕಾರ್ಯದರ್ಶಿ ಬೂದಹಳ್ಳಿ ಶಂಕರ್, ಸಂಘಟನಾ ಕಾರ್ಯದರ್ಶಿ ಕೊತ್ತೇಗಾಲ ಶಾಂತಕುಮಾರ್, ಖಜಾಂಚಿ ಮಹೇಶ್‌ಕುಮಾರ್, ಮಾಡ್ರಹಳ್ಳಿ ನಂಜುಂಡಸ್ವಾಮಿ, ಹೊರಳಹಳ್ಳಿ ರಾಜು, ಈ.ರಾಜು, ಮುಖಂಡರಾದ ಎಚ್.ಎಂ.ರವಿಕುಮಾರ್, ದಿನೇಶ್, ರಮೇಶ್, ಕಟ್ಟೆಪುರ ಪ್ರದೀಪ್, ತಾಲೂಕು ಗೌರವಾಧ್ಯಕ್ಷ ಮಹದೇವಸ್ವಾಮಿ ಪದಾಧಿಕಾರಿಗಳು ಇದ್ದರು.