ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಬನ್ನೂರಿನ ನೂತನ ಮಾರಮ್ಮ ದೇವಾಲಯದಲ್ಲಿ ಅಳವಡಿಸಿರುವ ಶಿಲಾನ್ಯಾಸ ಫಲಕದಲ್ಲಿ ಹೆಸರು ಹಾಕುವ ಸಂಬಂಧ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಪ್ರತಿಭಟಿಸಿದರು.
ಬನ್ನೂರಿನ ನೂತನ ಮಾರಮ್ಮ ದೇವಾಲಯದಲ್ಲಿ ಅಳವಡಿಸಿರುವ ಶಿಲಾನ್ಯಾಸ ಫಲಕದಲ್ಲಿ ಹೆಸರು ಹಾಕುವ ಸಂಬಂಧ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಪ್ರತಿಭಟಿಸಿದರು.
Published on
ಬನ್ನೂರು: ಪಟ್ಟಣದ ಮೈಸೂರು- ಮಳವಳ್ಳಿ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮಹಾಗಣಪತಿ ಹಾಗೂ ಬಿಸಿಲು ಮಾರಮ್ಮ ದೇವಾಲಯದಲ್ಲಿ ಶಿಲಾನ್ಯಾಸ ಫಲಕದಲ್ಲಿ ಶಿಷ್ಟಾಚಾರ ಪಾಲಿಸದೆ ತಮಗೆ ಬೇಕಾದವರ ಹೆಸರನ್ನು ಹಾಕಿರುವುದನ್ನು ಖಂಡಿಸಿ ಪುರಸಭೆಯ ಮಾಜಿ ಅಧ್ಯಕ್ಷ ಕೃಷ್ಣೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಮಾರಮ್ಮ ದೇವಾಲಯದ ಒಂದು ಶಿಲಾನ್ಯಾಸ ಫಲಕದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಸಂಸದ ಸುನೀಲ್‌ಬೋಸ್, ಅಧಿಕಾರಿಗಳ ಹೆಸರು ಮಾತ್ರ ಬರೆಸಲಾಗಿದೆ. ದೇವಾಲಯ ಸಾರ್ವಜನಿಕರ ಸ್ವತ್ತು. ಮಾರಮ್ಮ ಹಾಗೂ ಗಣಪತಿ ದೇವಾಲಯದ ನಿರ್ಮಾಣಕ್ಕೆ 2019ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಿದ್ದರು. ಶಾಸಕ ಅಶ್ವಿನ್‌ಕುಮಾರ್ ಅವಧಿಯಲ್ಲಿ ಪೂರ್ಣಗೊಂಡಿತ್ತು. ನಂತರದಲ್ಲಿ ಆದ ರಾಜಕೀಯ ಬೆಳವಣಿಗೆಯಿಂದ ದೇವಾಲಯಕ್ಕೆ ನೀಡಬೇಕಾದ ಅನುದಾನವನ್ನು ಇಂದಿನ ಶಾಸಕರು ನೀಡದೆ ತಡೆಹಿಡಿದಿದ್ದರಿಂದ ದೇವಾಲಯ ಉದ್ಘಾಟನೆಯಾಗಿರಲಿಲ್ಲ. ದೇವಾಲಯ ಆರಂಭ ಸಂದರ್ಭದಲ್ಲಿ ಭಾಗ್ಯಶ್ರೀ ಕೃಷ್ಣ ಪುರಸಭೆ ಅಧ್ಯಕ್ಷರಾಗಿದ್ದು, ಶೋಭಾ ಸತೀಶ್ ಉಪಾಧ್ಯಕ್ಷರಾಗಿದ್ದರು. ದೇವಾಲಯ ಆರಂಭಕ್ಕೆ ಕಾರಣರಾದವರ ಹೆಸರನ್ನು ಶಿಲಾನ್ಯಾಸ ಫಲಕದಲ್ಲಿ ಅಳವಡಿಸದಿರುವುದು ಖಂಡನೀಯ ಎಂದರು.
ವಿಷಯ ತಿಳಿದ ತಹಸೀಲ್ದಾರ್ ಸುರೇಶ್ ಆಚಾರ್ ದೇವಾಲಯದ ಆವರಣದಲ್ಲಿ ಅಳವಡಿಸಿದ್ದ ಶಿಲಾನ್ಯಾಸ ಫಲಕವನ್ನು ತೆರವುಗೊಳಿಸಿ ವಿವಾದಕ್ಕೆ ಅಂತ್ಯ ಹಾಡಿದರು. ಪುರಸಭೆ ಮಾಜಿ ಉಪಾಧ್ಯಕ್ಷೆ ಸೌಮ್ಯಾ ಮುರಳೀಧರ್, ನಾರಾಯಣ್, ಜಯರಾಂ, ಸತೀಶ್, ಬೀಡನಹಳ್ಳಿ ರಘು, ನಿಂಗಪ್ಪ, ಕಿಟ್ಟಪ್ಪ ರಮೇಶ್, ಪುರಸಭೆ ಮಾಜಿ ಸದಸ್ಯ ಆನಂದ್, ಮಹೇಶ್, ಚಂದು, ರಾಜು, ರವಿ, ಸತೀಶ್, ವೆಂಕಟೇಶ್, ಶ್ರೀಧರ್, ಕೇಶವಮೂರ್ತಿ, ಮಾಯೀಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net