ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ವರ್ಗಾವಣೆ ಮತ್ತು ದುರುಪಯೋಗ ತಡೆ
ಕಾಳಸಂತೆಯಲ್ಲಿ ಆಹಾರ ಧಾನ್ಯ ಮಾರಾಟ ಮಾಡುವವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ
ಮೈಸೂರು:ಬಿಪಿಎಲ್ ಪಡಿತರ ಚೀಟಿ ಪಡೆಯಲಿರುವ ಮಾನದಂಡಗಳನ್ನು ಪರಿಷ್ಕರಣೆಗೆ ಚಿಂತನೆ ನಡೆಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ರಾಜ್ಯದಲ್ಲಿ ಈಗ ರದ್ದು ಮಾಡಿರುವ 4.5 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಮರು ಪರಿಶೀಲನೆ ಮಾಡಲಾಗುವುದು. ಪರಿಶೀಲನೆ ಮಾಡುವವರೆಗೂ ಯಾವುದೇ ಕಾರ್ಡ್ ರದ್ದು ಮಾಡದಂತೆ ಸೂಚನೆ ಕೊಟ್ಟಿರುವುದಾಗಿ ನಗರದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
ಸರ್ವರ್ ಸಮಸ್ಯೆ ಇತ್ಯರ್ಥಕ್ಕೆ ಮೂರನೇ ಏಜೆನ್ಸಿಯ ಸೇವೆ ಪಡೆಯಲಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ವರ್ಗಾವಣೆ ಮತ್ತು ದುರುಪಯೋಗ ತಡೆಗೆ ಕ್ರಮವಹಿಸಲಾಗಿದೆ. ಕಾಳಸಂತೆಯಲ್ಲಿ ಆಹಾರ ಧಾನ್ಯ ಮಾರಾಟ ಮಾಡುವವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 3 ವರ್ಷಗಳಲ್ಲಿ 1,497 ಎಫ್‌ಐಆರ್ ದಾಖಲಿಸಿ 86,181 ಕ್ವಿಂಟಾಲ್ ಆಹಾರ ಧಾನ್ಯ ಹಾಗೂ 49.38 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಜೂನ್ 2023ರಿಂದ ಜುಲೈ 31ರವರೆಗೆ ಹೊಸದಾಗಿ 3,70,803 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಆದ್ಯತಾ ಪಡಿತರ ಚೀಟಿಗಾಗಿ ಬಾಕಿ ಇರುವ 1,30,546 ಅರ್ಜಿಗಳ ಪರಿಶೀಲನೆ ಹಾಗೂ ವಿಲೇವಾರಿ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದರು.
ಇಂದಿರಾ ಕಿಟ್ ಸದ್ಯಕ್ಕಿಲ್ಲ:
ಪಡಿತರ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಇಂದಿರಾಕಿಟ್ ಜಾರಿಗೆ ಸರ್ಕಾರ ಉದ್ದೇಶಿಸಿತ್ತು. ಜನರಿಗೆ ಅಗತ್ಯ ವಸ್ತುಗಳನ್ನು ಕಿಟ್ ಮೂಲಕ ತಲುಪಿಸಿ ಪಡಿತರ ಕಾಳಸಂತೆಯಲ್ಲಿ ಮಾರಾಟವಾಗದಂತೆ ಮಾಡುವುದು ಇದರ ಉದ್ದೇಶವಾಗಿತ್ತು. ಆದರೆ, ಟೆಂಡರ್ ಕರೆದು ಬಹಳ ದಿನಗಳು ಅಗಿರುವುದರಿಂದ ದರದಲ್ಲಿ ವ್ಯತ್ಯಾಸವಾಗಿದೆ. ಅದನ್ನು ಸರಿಪಡಿಸಿ ವಿತರಣಾ ಜಾಲವನ್ನು ರಚಿಸುವ ಉದ್ದೇಶದಿಂದ ಸದ್ಯಕ್ಕೆ ಇಂದಿರಾ ಕಿಟ್ ವಿತರಣೆ ಟೆಂಡರ್ ರದ್ದುಪಡಿಸಲಾಗಿದೆ. ಮುಂದೆ ಕಿಟ್ ವಿತರಣೆ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ರಿಜ್ವಾನ್ ಅರ್ಷದ್ ಉತ್ತರಿಸಿದರು.
ರಾಹುಲ್ ವಿರುದ್ಧ ಎಫ್‌ಐಆರ್ ಲೀಗಲ್ ಟೆರರಿಸಂ
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಲೀಗಲ್ ಟೆರರಿಸಂ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಟೀಕಿಸಿದರು.
ಉತ್ತರಕಾಂಡ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದ ಸ್ಥಳ ಶುದ್ಧೀಕರಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಈ ಮೂಲಕ ಬಿಜೆಪಿ, ಶುದ್ಧೀಕರಣ ಮಾಡಿದ್ದು ಸರಿ ಹಾಗೂ ಪ್ರಶ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತವೆ ಎಂಬ ಸಂದೇಶ ನೀಡಿದೆ. ಇದರಿಂದ ದೇಶದ ಪ್ರಜಾಪ್ರಭುತ್ವ ಎತ್ತ ಸಾಗಿದೆ ಎನ್ನುವುದು ತಿಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಸ್ಲಿಮರನ್ನು ಹೊಗಳುವ ಹೇಳಿಕೆ ತಮ್ಮ ವರ್ಚಸ್ಸು ಸುಧಾರಣೆ ಮಾಡಿಕೊಳ್ಳುವ ಪ್ರಯತ್ನವಾಗಿದೆ ಎಂದು ಪ್ರತಿಕ್ರಿಯಿಸಿದರು.
ತನ್ವೀರ್ ಸೇಠ್ ಪಕ್ಷದ ಹಿರಿಯ ನಾಯಕರಾಗಿದ್ದು, ಎರಡು ಬಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹೈಕಮಾಂಡ್ ನಿರ್ಧಾರವನ್ನು ಒಪ್ಪಿ ಪಕ್ಷದ ಕೆಲಸ ಮಾಡುತ್ತಿದ್ದಾರೆ. ಅವರು ಎಂದೂ ಪಕ್ಷದ ವಿರುದ್ಧವಾಗಿಲ್ಲ ಎಂದು ಪ್ರತಿಕ್ರಿಯಿಸಿದರು.