ಮೈಸೂರು:ಹೂವು ತರಲು ಬಂದಿದ್ದ ಮಂಜುಳಾ, ಪ್ರವಾಸಕ್ಕೆ ಬಂದಿದ್ದ ಲಕ್ಷ್ಮೀ ಇಹಲೋಕವನ್ನೇ ತ್ಯಜಿಸಿ, ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮುಂದೆ ಬಿ.ಎನ್.ರಸ್ತೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮಂಜುಳಾ(38) ಶುಕ್ರವಾರ ಸಂಜೆ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಲಕ್ಷ್ಮೀ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸಾವಿನ 3ಕ್ಕೆ ಏರಿದೆ.
ಬಲೂನ್ ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಕನೋಜ್ ಜಿಲ್ಲೆ ತೊಫಿಯ ಗ್ರಾಮದ ಸಲೀಂ(40) ಸ್ಥಳದಲ್ಲೇ ಮೃತಪಟ್ಟಿದ್ದರು.
ಸ್ಫೋಟದಲ್ಲಿ ಗಾಯಗೊಂಡಿದ್ದ ನಂಜನಗೂಡಿನ ಚಾಮಲಾಪುರ ಬೀದಿ ನಿವಾಸಿ ಮಂಜುಳಾ ಮತ್ತು ಬೆಂಗಳೂರಿನ ಲಕ್ಷ್ಮೀ ಅವರನ್ನು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಮೃತದೇಹಗಳನ್ನು ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗುತ್ತದೆ.
ಹೂವಿನ ವ್ಯಾಪಾರಿಯಾಗಿರುವ ಮಂಜುಳಾ ಅವಿವಾಹಿತೆ. ಪಾಲಕರು, ಸಹೋದರರೊಂದಿಗೆ ವಾಸಿಸುತ್ತಿದ್ದರು. ಹೂ ಖರೀದಿಸಿ ನಂಜನಗೂಡಿಗೆ ಹೋಗಲು ಹಾರ್ಡಿಂಗ್ ವೃತ್ತದ ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದಾಗ ದುರಂತ ಅಂತ್ಯ ಕಂಡಿದ್ದಾರೆ.
‘ನಿನ್ನೆ ಬೆಳಗ್ಗೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟ ಮಾಡಿದ್ದೆವು. ಹೂ ಖರೀದಿಸಲು ಮೈಸೂರಿಗೆ ಬಂದು, ವಾಪಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ನಮಗೆ ಶುಕ್ರವಾರ ಬೆಳಗ್ಗೆ ವಿಷಯ ಗೊತ್ತಾಗಿ ಆಸ್ಪತ್ರೆಗೆ ಬಂದಿದ್ದೇವೆ. ಬೆಳಗ್ಗೆ ಐಸಿಯುನಲ್ಲಿ ಸಹೋದರಿ ಮಂಜುಳಾ ಅವರನ್ನು ನೋಡಲು ಹೋಗಿದ್ದೆ. ಮಾತನಾಡುವ ಪ್ರಯತ್ನ ಮಾಡಿದ್ದರೂ ಸ್ಪಂದಿಸಲಿಲ್ಲ’ ಎಂದು ಮಂಜುಳಾ ಅವರ ಸಹೋದರ ನಾಗೇಂದ್ರ ಹೇಳಿದರು.
ವಾಸಕ್ಕೆ ಬಂದಿದ್ದ ಲಕ್ಷ್ಮೀ ಮರಳಿ ಮನೆಗೆ ವಾಪಸ್ ಹೋಗಲೇ ಇಲ್ಲ.
ಬೆಂಗಳೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದ ಲಕ್ಷ್ಮೀ ಮರಳಿ ಮನೆಗೆ ವಾಪಸ್ ಹೋಗಲೇ ಇಲ್ಲ.
‘ತಾಯಿ ಲಕ್ಷ್ಮೀ, ಚಿಕ್ಕ ಅತ್ತೆ ರಂಜಿತಾ ಹಾಗೂ ಅವರ ಮಗ ನಿಹಾಲ್ ಅವರೊಂದಿಗೆ ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಹೋಗಿ ಮೈಸೂರಿಗೆ ಬಂದಿದ್ದೆವು.
ನಂತರ ಸಂಜೆ ದಸರಾ ವಸ್ತುಪ್ರದರ್ಶನಕ್ಕೆ ಬಂದು ಬಸ್ ನಿಲ್ದಾಣಕ್ಕೆ ಹೋಗುವಾಗ ಸ್ಫೋಟ ಸಂಭವಿಸಿತು. ಇದರಿಂದ ಅಮ್ಮ(ಲಕ್ಷ್ಮೀ)ಹಾಗೂ ಚಿಕ್ಕತ್ತೆ(ರಂಜಿತಾ) ಗಾಯಗೊಂಡು ಕೆಳಗೆ ಬಿದ್ದರು. ಅಲ್ಲಿದ್ದ ಪೊಲೀಸರು ಆಟೋ ಚಾಲಕರೊಂದಿಗೆ ಸೇರಿ ಆಸ್ಪತ್ರೆಗೆ ಕರೆದುಕೊಂಡು ಬಂದರು’ ಎಂದು ಗಾಯಾಳು ಲಕ್ಷ್ಮೀ ಅವರ ಮಗಳು, 5ನೇ ತರಗತಿ ವಿದ್ಯಾರ್ಥಿನಿ ಡಿಂಪಲ್ ತಿಳಿಸಿದರು.
ಲಕ್ಷ್ಮೀ ಅವರ ಪತಿ, ಬೆಂಗಳೂರಿನಲ್ಲಿ ಆಟೋ ಚಾಲಕರಾಗಿರುವ ರಾಜೇಶ್, ‘ಕ್ರಿಸ್‌ಮಸ್ ರಜೆ ಇದ್ದ ಕಾರಣ ಮಗಳೊಂದಿಗೆ ಪತ್ನಿ ಮೈಸೂರಿಗೆ ಬಂದಿದ್ದರು ಎಂದು ತಿಳಿಸಿದ್ದಾರೆ.
ಬಲೂನ್ ಖರೀದಿ ವೇಳೆ ಸ್ಫೋಟ:
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದ ಕೋಟ್ರೇಶ್ ಬೀರಪ್ಪ ಗುತ್ತೇರ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿಯಲ್ಲಿ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಎಫ್‌ಡಿಎ ಆಗಿರುವ ಕೋಟ್ರೇಶ್ ಅವರು ಹೆಂಡತಿ ಪ್ರಿಯಾಂಕ್, ಮಗ ದನ್ವಿತ್, ಮಗಳು ವಂಶಿಕಾ, ಇವರ ಮಾವನ ಮಗಳು ವೇದಶ್ರೀ ಅವರೊಂದಿಗೆ ಕಾರ್‌ನಲ್ಲಿ ಪ್ರವಾಸಕ್ಕೆ ಬಂದಿದ್ದರು.
ಮಗಳಿಗಾಗಿ ಬಲೂನ್ ಖರೀದಿ ಮಾಡುವಾಗಲೇ ಸಿಲಿಂಡರ್ ಸ್ಫೋಟವಾಗಿದೆ. ಇವರಿಗೆ, ಮಗಳಿಗೆ, ಮಾವನ ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.