ಕಾಂಗ್ರೆಸ್ ಪಕ್ಷ ಟೀಕಿಸುವರಲ್ಲಿ ಸತ್ಯಾಂಶವಿಲ್ಲ

 ಆರ್. ಧರ್ಮಸೇನಾ
ಆರ್. ಧರ್ಮಸೇನಾ
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಟೀಕೆ
ತಿ.ನರಸೀಪುರ: ಕಾಂಗ್ರೆಸ್ ಪಕ್ಷವನ್ನು ದಲಿತ ವಿರೋಧಿ ಎಂದು ಬಿಂಬಿಸಲು ಕೆಲವರು ನಡೆಸುತ್ತಿರುವ ಪ್ರಯತ್ನಗಳು ರಾಜಕೀಯ ಪ್ರೇರಿತವಾಗಿದೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಹೇಳಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ದೇಶ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ದಲಿತ ನಾಯಕರಿಗೆ ಸಚಿವ ಸ್ಥಾನ ಸೇರಿದಂತೆ ಉನ್ನತ ಹುದ್ದೆಗಳು ಮತ್ತು ಜವಾಬ್ದಾರಿಗಳನ್ನು ನೀಡಿ ಗೌರವಯುತ ಸ್ಥಾನಮಾನ ಕಲ್ಪಿಸಿರುವ ಇತಿಹಾಸ ಹೊಂದಿದೆ. ಹೀಗಿರುವಾಗ ಕೆಲವರು ವೈಯಕ್ತಿಕ ಕಾರಣಗಳಿಂದ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ಎಂಬ ಆರೋಪ ಮಾಡುತ್ತಿರುವುದು ಸಮಂಜಸವಲ್ಲ ಎಂದು ಹೇಳಿದರು.
ಯಾರಿಗಾದರೂ ಸಚಿವ ಸ್ಥಾನ ದೊರೆಯದಿದ್ದರೆ ಅದಕ್ಕೆ ಪಕ್ಷವನ್ನು ದೂರುವುದು ಸರಿಯಲ್ಲ. ಒಬ್ಬ ನಾಯಕನಿಗೆ ಸ್ಥಾನ ಸಿಗದಿರುವುದಕ್ಕೆ ಹಲವಾರು ರಾಜಕೀಯ, ಸಂಘಟನಾ ಹಾಗೂ ಆಡಳಿತಾತ್ಮಕ ಕಾರಣಗಳಿರಬಹುದು. ಕೆಲವೊಮ್ಮೆ ನಾಯಕರ ರಾಜಕೀಯ ನಡೆ-ನುಡಿಗಳು, ಪಕ್ಷದ ಬಗ್ಗೆ ಅವರ ನಿಲುವು ಹಾಗೂ ಪಕ್ಷದ ಶಿಸ್ತಿನ ವಿಚಾರಗಳನ್ನು ಪರಿಗಣಿಸಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಆದ್ದರಿಂದ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ಹೇಳಿದರು.
ಪಕ್ಷದಲ್ಲಿ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಪಡೆದಿರುವ ನಾಯಕರ ಬದಲಾಗಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವೂ ಹೈಕಮಾಂಡ್‌ಗೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಹುದ್ದೆಗಳು ಯಾರೊಬ್ಬರ ಸ್ವತ್ತಲ್ಲ. ಪಕ್ಷದ ಬೆಳವಣಿಗೆಗಾಗಿ ದುಡಿಯುವ ಹೊಸ ನಾಯಕರಿಗೆ ಅವಕಾಶ ನೀಡುವುದು ಪ್ರಜಾಪ್ರಭುತ್ವದ ವ್ಯವಸ್ಥೆಯ ಭಾಗವಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ನಾಯಕರಿಗೆ ನೀಡಿರುವ ಪ್ರಮುಖ ಸ್ಥಾನಮಾನಗಳನ್ನು ಉಲ್ಲೇಖಿಸಿದ ಧರ್ಮಸೇನಾ, ಡಾ. ಜಿ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಭಾವಿ ಖಾತೆಯ ಜವಾಬ್ದಾರಿ ನೀಡಲಾಗಿದೆ. ಕೆ.ಎಚ್. ಮುನಿಯಪ್ಪ ಸಚಿವರಾಗಿದ್ದಾರೆ. ರುದ್ರಪ್ಪ ಲಮಾಣಿ ಅವರಿಗೆ ಉಪಸಭಾಪತಿ ಸ್ಥಾನಕ್ಕೆ ಆಹ್ವಾನ ನೀಡುವ ಮೂಲಕ ಗೌರವಿಸಲಾಗಿದೆ. ರಾಜ್ಯದ ಹಲವು ಪ್ರಮುಖ ಇಲಾಖೆಗಳ ಜವಾಬ್ದಾರಿಗಳನ್ನು ಪರಿಶಿಷ್ಟ ಜಾತಿ ಸಮುದಾಯದ ನಾಯಕರಿಗೆ ನೀಡಲಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೆಲವು ಸಚಿವರು ತಮ್ಮ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿದ ಧರ್ಮಸೇನಾ, ಪಕ್ಷದ ನಾಯಕರ ವಿರುದ್ಧವೇ ಕೆಲಸ ಮಾಡುವವರು ಸಚಿವ ಸ್ಥಾನದ ಆಕಾಂಕ್ಷಿಗಳಾಗುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಎತ್ತಿದರು. ಇಂತಹ ಎಲ್ಲ ಬೆಳವಣಿಗೆಗಳನ್ನು ಪಕ್ಷದ ಹೈಕಮಾಂಡ್ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net