ಯಾರೂ ಕಾನೂನು ಉಲ್ಲಂಘನೆಯ ದಾರ್ಷ್ಟೃ ತೋರಬಾರದು. ಪ್ರತಿಯೊಬ್ಬರಿಗೂ ಕಾನೂನು ಅರಿವು ಅತ್ಯಗತ್ಯ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹೈಕೋರ್ಟ್ ನ್ಯಾಯಮೂರ್ತಿ ಎಚ್.ಶಶಿಧರ ಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ ಸಹಯೋಗದಲ್ಲಿ ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು (ಪೋಕ್ಸೋ, ಮಾದಕ ದ್ರವ್ಯ ದುರ್ಬಳಕೆ ತಡೆಗಟ್ಟುವುದು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006) ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನು ತಿಳಿವಳಿಕೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಕಾನೂನು ಅರಿವು ಇಲ್ಲದೆ ತಪ್ಪು ಮಾಡಿದರೆ ಕ್ಷಮಾಪಣೆ ಇರುವುದಿಲ್ಲ. ತಮ್ಮ ಕರ್ತವ್ಯ, ಮತ್ತೊಬ್ಬರ ಹಕ್ಕುಗಳನ್ನು ಉಲ್ಲಂಘನೆ ಮಾಡದಿದ್ದರೆ ಕಾನೂನು ತೊಡಕು ಬರುವುದಿಲ್ಲ ಎಂದರು.
ಯುವಕರು ಹೆಚ್ಚು ಜಾಗ್ರತೆ ವಹಿಸಬೇಕು. ತಪ್ಪು ಹೆಜ್ಜೆ ಇಡಬಾರದು. ಆಕರ್ಷಣೆಗೆ ಒಳಗಾಗಬಾರದು. ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಮನೆಯಲ್ಲಿ ಪುಸ್ತಕ ಹಿಡಿಯದಿದ್ದರೂ ಪರವಾಗಿಲ್ಲ. ಮೊಬೈಲ್ ಹಿಡಿಯಬಾರದು ಎಂದರು.
18 ವರ್ಷ ಪೂರ್ಣಗೊಂಡು ಡ್ರೈವಿಂಗ್ ಲೈಸೆನ್ಸ್ ಪಡೆದ ನಂತರ ವಾಹನ ಚಾಲನೆ ಮಾಡಬೇಕು. ಸೈಕ್ಲಿಂಗ್, ಈಜು, ವಾಹನ ಚಾಲನೆ ಕಲಿಯಬೇಕು. ಕಾನೂನು ಉಲ್ಲಂಘಿಸಿ ವಾಹನ ಚಾಲನೆ ಮಾಡಬಾರದು. ಇದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಎಚ್.ಶಶಿಧರ ಶೆಟ್ಟಿ ಉದಾಹರಣೆ ಸಮೇತ ವಿವರಿಸಿದರು.
7 ಸಾವಿರ ಪ್ರಕರಣಗಳಿವೆ:
ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ಸಂಬಂಧ 7 ಸಾವಿರ ಪ್ರಕರಣಗಳಿವೆ. ಈ ಪೈಕಿ ಶೇ.10ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಮೈಸೂರು ಸೇರಿದಂತೆ ರಾಜ್ಯದಲ್ಲಿ 10 ಮಾದಕ ದ್ರವ್ಯ ತಯಾರಿಕ ಘಟಕಗಳು ಪತ್ತೆಯಾಗಿವೆ. ಶಾಲಾ-ಕಾಲೇಜುಗಳ ಸಮೀಪದಲ್ಲೇ ಡ್ರಗ್ಸ್ ಮಾರುತ್ತಿರುವುದು ಕಳವಳಕಾರಿ ಎಂದರು.
ದೇಶವನ್ನು ನಾಶ ಮಾಡಲು ಯುದ್ಧ ಮಾಡಿ ಕ್ಷಿಪಣಿ ಹಾರಿಸಬೇಕಿಲ್ಲ. ಯುವ ಜನಾಂಗವನ್ನು ಮಾದಕ ವಸ್ತುಗಳ ದಾಸರನ್ನಾಗಿಸಿದರೆ ಆ ದೇಶ ನಾಶವಾಗುತ್ತದೆ. ಆ ದೇಶ ಮುಂದುವರಿಯಲು ಸಾಧ್ಯವಿಲ್ಲ. ಮಾದಕ ವಸ್ತುಗಳ ಮಾರಾಟ, ಡ್ರಗ್ಸ್ ಸೇವನೆ ಕಂಡು ಬಂದರೆ ಮಾಹಿತಿ ನೀಡಬೇಕು ಎಂದು ಎಚ್.ಶಶಿಧರ ಶೆಟ್ಟಿ ತಿಳಿಸಿದರು.
ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ:
ರಾಜ್ಯದಲ್ಲಿ 8 ಸಾವಿರಕ್ಕೂ ಹೆಚ್ಚು ಪೋಕ್ಸೋ ಕೇಸ್‌ಗಳು ದಾಖಲಾಗಿವೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಾರಿಯಾಗಿದೆ. ಹೆಣ್ಣು ಮಕ್ಕಳ ಮೇಲೆ ಮಾತ್ರವಲ್ಲ, ಶೇ.43ರಷ್ಟು ಬಾಲಕರ ಮೇಲೂ ಲೈಂಗಿಕ ದೌರ್ಜನ್ಯಗಳಾಗುತ್ತಿವೆ. ಮನೆಯಲ್ಲೂ ದೌರ್ಜನ್ಯಗಳಾಗುತ್ತಿರುವುದು ಕಳವಳಕಾರಿ ಎಂದು ಶೆಟ್ಟಿ ನುಡಿದರು.
ಬುದ್ಧಿಮಾತುಗಳನ್ನು ಕೇಳಬೇಕು:
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ, ಜೆನ್ ಜಿ ತಲೆಮಾರಿನ ಮಕ್ಕಳಲ್ಲಿ ಬುದ್ಧಿವಂತಿಕೆ ಇರುತ್ತದೆ. ಅನುಭವ ಕಡಿಮೆ. ಹೀಗಾಗಿ ಹಿರಿಯರು, ಶಿಕ್ಷಕರು ಹೇಳುವ ಬುದ್ಧಿಮಾತುಗಳನ್ನು ಕೇಳಬೇಕು ಎಂದು ಸಲಹೆ ನೀಡಿದರು.
ವಿಜಯ ವಿಠಲ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ವಾಸುದೇವ ಭಟ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇದ್ದು, ಉತ್ತಮ ಪ್ರಜೆಗಳಾಗಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ಎಂ.ಶ್ರೀಧರ್, ನಿವೃತ್ತ ನ್ಯಾಯಮೂರ್ತಿ ಚನ್ನಕೇಶವರೆಡ್ಡಿ, ಹಾರ್ಟ್‌ಫುಲ್‌ನೆಸ್ ಇನ್‌ಸ್ಟಿಟ್ಯೂಟ್ ರೀಜನಲ್ ಫೆಸಿಲಿಟೇಟರ್ ಕೆ. ಮಧುಸೂದನ್, ವಿಜಯ ವಿಠಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ್, ಪ್ರಾಂಶುಪಾಲೆ ಎಸ್.ಎ. ವೀಣಾ ಇನ್ನಿತರರಿದ್ದರು
ನಗರದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಉದ್ಘಾಟಿಸಿದರು.ಎಸ್.ಲೋಕೇಶ್, ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಎಂ.ಶ್ರೀಧರ್ , ಚನ್ನಕೇಶವರೆಡ್ಡಿ, ಕೆ. ಮಧುಸೂದನ್, ಆರ್.ವಾಸುದೇವ ಭಟ್ ಇನ್ನಿತರರಿದ್ದರು.