ಕಲಾರಂಗದಲ್ಲಿ ಯಶಸ್ಸಿಗೆ ಅಡ್ಡದಾರಿಗಳಿಲ್ಲ: ನಟ ಜಗ್ಗೇಶ್ ಅಭಿಮತ

ಮೈಸೂರು ಸಿನಿಮಾ ಸೊಸೈಟಿಯಿಂದ ನಗರದಲ್ಲಿ ಮೂರು ದಿನ ಆಯೋಜಿಸಿರುವ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರೋತ್ಸವದ ನಾಲ್ಕನೇ ಆವೃತ್ತಿಗೆ ಚಾಲನೆ ನೀಡಲಾಯಿತು. ಜಗ್ಗೇಶ್, ಪಿ.ಶೇಷಾದ್ರಿ, ವಿ.ನಾಗೇಂದ್ರ ಪ್ರಸಾದ್,  ಜೋಗಿ, ಕಾರುಣ್ಯ ರಾಮ್, ಡಾ.ಚಂದ್ರಶೇಖರ್, ಚೇತನ್, ಪದ್ಮಾವತಿ ಎಸ್.ಭಟ್ ಇತರರು ಇದ್ದರು.
ಮೈಸೂರು ಸಿನಿಮಾ ಸೊಸೈಟಿಯಿಂದ ನಗರದಲ್ಲಿ ಮೂರು ದಿನ ಆಯೋಜಿಸಿರುವ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರೋತ್ಸವದ ನಾಲ್ಕನೇ ಆವೃತ್ತಿಗೆ ಚಾಲನೆ ನೀಡಲಾಯಿತು. ಜಗ್ಗೇಶ್, ಪಿ.ಶೇಷಾದ್ರಿ, ವಿ.ನಾಗೇಂದ್ರ ಪ್ರಸಾದ್, ಜೋಗಿ, ಕಾರುಣ್ಯ ರಾಮ್, ಡಾ.ಚಂದ್ರಶೇಖರ್, ಚೇತನ್, ಪದ್ಮಾವತಿ ಎಸ್.ಭಟ್ ಇತರರು ಇದ್ದರು.
Published on
ಮೈಸೂರು:ಏಕಾಏಕಿ ಹೀರೋ ಆಗಿ ಕೋಟ್ಯಂತರ ರೂಪಾಯಿ ಗಳಿಸಿ ಮೆರೆಯಬಹುದು ಎಂಬ ಭ್ರಮೆಬೇಡ. ಕಲಾವಿದರಾಗಲು ಸಾಕಷ್ಟು ಪರಿಶ್ರಮ ಮತ್ತು ಸಮಯ ಮೀಸಲಿಡಬೇಕು ಎಂದು ನಟ ಜಗ್ಗೇಶ್ ಯುವ ಕಲಾವಿದರಿಗೆ ಸಲಹೆ ನೀಡಿದರು.
ಮೈಸೂರು ಸಿನಿಮಾ ಸೊಸೈಟಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಪರಿದೃಶ್ಯ’ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರೋತ್ಸವದ ನಾಲ್ಕನೇ ಆವೃತ್ತಿ ಉದ್ಘಾಟಿಸಿ ಮಾತನಾಡಿ, ಕಲಾರಂಗದಲ್ಲಿ ಯಶಸ್ವಿಯಾಗಲು ಯಾವುದೇ ಅಡ್ಡದಾರಿಗಳಿಲ್ಲ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಬಹಳ ಪ್ರಭಾವ ಹೊಂದಿವೆ. ಇದನ್ನು ವೇದಿಕೆಯಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಈ ಸಾಮಾಜಿಕ ಜಾಲತಾಣ ಇನ್ನೂ ಹತ್ತರಿಂದ ಹದಿನೈದು ವರ್ಷ ತನ್ನ ಪ್ರಭಾವ ಹೊಂದಿರುತ್ತದೆ ಎಂದರು.
ನಾನು ಅಪ್ಪನೊಂದಿಗೆ ಜಗಳ ಮಾಡಿಕೊಂಡು ಬಿಸಿರಕ್ತದಲ್ಲಿ ಮನೆ ಬಿಟ್ಟು ಬಂದವನು. ಮೈಸೂರಿನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಕೆಫೆಯೊಂದರಲ್ಲಿಯೂ ಕೆಲಸ ಮಾಡುತ್ತಿದ್ದೆ. ಆದರೆ ನಾನು ಬರೆಯುತ್ತಿದ್ದ ಕನ್ನಡವನ್ನು ನೋಡಿ ನನ್ನ ಗೆಳೆಯ ಕೃಷ್ಣ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಸಿದ ಎಂದು ಹಿಂದಿನ ಘಟನೆಗಳನ್ನು ನೆನೆದರು.
ಆ ನಂತರ ನೀ ತಂದ ಕಾಣಿಕೆ ಸಿನಿಮಾ ಚಿತ್ರೀಕರಣಕ್ಕೆ ಚೆನ್ನೈಗೆ ಹೋದಾಗ ಅಲ್ಲೊಬ್ಬರು ನೀವು ನೋಡಲು ರಜನಿಕಾಂತ್ ರೀತಿಯೇ ಇದ್ದೀರಿ. ನೀವು ಒಂದು ಪಾತ್ರ ಮಾಡಿ ಎಂದು ರೇಪ್ ಸೀನ್ ಕೊಟ್ಟರು. ಅಲ್ಲಿಂದ ಮತ್ತೆ ನಾನು ಹಿಂದಕ್ಕೆ ತಿರುಗಿ ನೋಡಲಿಲ್ಲ ಎಂದು ಆರಂಭದ ದಿನಗಳನ್ನು ಮೆಲುಕು ಹಾಕಿದರು.
ಇಂಜಿನಿಯರ್, ವೈದ್ಯ, ಕಲಾವಿದ ಮಕ್ಕಳು ತಮ್ಮಂತೆ ಆಗಬೇಕು ಎನ್ನುವ ಮನೋಭಾವವನ್ನು ಪಾಲಕರು ಬಿಡಬೇಕು. ನಿಮ್ಮ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅದರಂತೆ ಬೆಳೆಯಲು ಬಿಡಬೇಕು ಎಂದು ಹೇಳಿದರು.
ಸಿನಿಮಾದಲ್ಲೂ ಜ್ಞಾನ ಇದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅರಿತಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಿದ್ದಾರೆ. ನಮ್ಮ ಸಂಘಟನೆಗಳೂ ಇದೇ ರೀತಿಯ ಚಿಂತನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಕರ್ನಾಟಕ ಚಲನಚಿತ್ರ ಅಕಾಡೆಮಿಯು ಚಲನಚಿತ್ರೋತ್ಸವ ಬಿಟ್ಟು ಬೇರೇನು ಮಾಡುತ್ತಿಲ್ಲ. ಚಿತ್ರರಂಗವನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ನಿರ್ದಿಷ್ಟ ಯೋಜನೆಯನ್ನು ರೂಪಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇರಳ ಒಳ್ಳೆಯ ಪ್ರೇಕ್ಷಕರನ್ನು ಹೊಂದಿರುವುದರಿಂದ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಕರ್ನಾಟಕದ 7 ಕೋಟಿ ಜನರಿಗೆ ಕೇವಲ 3 ಫಿಲಂ ಸೊಸೈಟಿಗಳು ಮಾತ್ರ ಇವೆ. ಸಿನಿಮಾವನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಚಿತ್ರ ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್ ಮಾತನಾಡಿ, ಪರಿದೃಶ್ಯ ಎಂಬ ಪರಿಕಲ್ಪನೆ ಚಂದವಾಗಿದೆ. ಕಿರುಚಿತ್ರಗಳಲ್ಲಿ ನಮಗೆ ಹೊಸ ಪ್ರಪಂಚ ತೆರೆದುಕೊಳ್ಳುತ್ತ ಹೋಗುತ್ತದೆ. ಪ್ಯಾಲೆಸ್ತೇನ್‌ನ 36 ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂಬ ಸುದ್ದಿ ಹರಡಿತ್ತು. ಆದರೆ ಆ ಸಿನಿಮಾ ಪ್ರದರ್ಶನವಾಯಿತು. ಇಂತಹ ಸಾರ್ವತ್ರಿಕ ಸುಳ್ಳು ಹರಡುವುದು ಕಡಿಮೆಯಾಗಬೇಕು ಎಂದರು.
ಲೇಖಕ, ಚಿತ್ರ ಸಾಹಿತಿ ಜೋಗಿ ಮಾತನಾಡಿ, ಪ್ರೇಕ್ಷಕರ ಮನಸ್ಸು ಕೆಟ್ಟಿರುವ ಈ ಸಂದರ್ಭದಲ್ಲಿ ಕಿರುಚಿತ್ರಗಳು ಬಹುಬೇಗ ಜನರನ್ನು ಮುಟ್ಟುತ್ತಿವೆ ಎಂದು ಹೇಳಿದರು.
ಜನರು ಸಿನಿಮಾ ನೋಡುತ್ತಾರೆ. ಆದರೆ ಹೇಗೆ ನೋಡಬೇಕು ಎಂಬುದು ಗೊತ್ತಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಸಿನಿಮಾವನ್ನು ಹೇಗೆ ನೋಡಬೇಕು ಎನ್ನುವ ಕುರಿತೇ ಕಾರ್ಯಾಗಾರ ಮಾಡುತ್ತಿದ್ದರು. ಈಗೆಲ್ಲಾ ಪ್ಯಾನ್ ಇಂಡಿಯಾ ಮಾದರಿ ಹೆಚ್ಚಾಗಿದೆ. ಆದರೆ ಕಿರುಚಿತ್ರಗಳು ಒಂದು ಪ್ರದೇಶದ ಜೀವಂತಿಕೆ, ಸಮಸ್ಯೆಯನ್ನು ತೋರಿಸುತ್ತದೆ. ಆ ಮೂಲಕ ಬಹುಬೇಗ ಜನರನ್ನು ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.
ದೊಡ್ಡ ಪರದೆಗೆ ಬಂದಾಗ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಸಿನಿಮಾ ಮಾಡುವುದು ದೊಡ್ಡದಲ್ಲ. ಪ್ರೇಕ್ಷಕರನ್ನು ಬರುವಂತೆ ಮಾಡುವುದು ಕಷ್ಟ ಎಂದು ಅವರು ಹೇಳಿದರು.
ನಟಿ ಕಾರುಣ್ಯ ರಾಮ್, ಸೊಸೈಟಿ ಗೌರವಾಧ್ಯಕ್ಷ ಡಾ. ಚಂದ್ರಶೇಖರ್, ಅಧ್ಯಕ್ಷ ಚೇತನ್, ಕಾರ್ಯದರ್ಶಿ ಪದ್ಮಾವತಿ ಎಸ್.ಭಟ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net