ರಾಷ್ಟ್ರೀಯ ಮಟ್ಟದ ಕಿಸಾನ್ ಸ್ವರಾಜ್ ಸಮ್ಮೇಳನದ ಅಂಗವಾಗಿ ನೈಸರ್ಗಿಕ ಬೇಸಾಯದ ಅರಿವು
ನೈಸರ್ಗಿಕ ಕೃಷಿ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಪದಾರ್ಥಗಳು ಪ್ರದರ್ಶನ,
ಮೈಸೂರು: ದೂರ ಶಿಕ್ಷಣದ ವಿದ್ಯಾರ್ಜನೆ ತಾಣವಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮುಕ್ತಗಂಗೋತ್ರಿಯಲ್ಲಿ ಸಾವಯವ ಕೃಷಿ ಸಂಸ್ಕೃತಿ ಲೋಕವೇ ಗರಿಬಿಚ್ಚಿದ್ದು, ಕೃಷಿಕರು, ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ರಾಷ್ಟ್ರೀಯ ಮಟ್ಟದ ಕಿಸಾನ್ ಸ್ವರಾಜ್ ಸಮ್ಮೇಳನದ ಅಂಗವಾಗಿ ‘ಜೀವವೈವಿಧ್ಯತೆ ಮೇಳ’ವಾಗಿ ರೂಪಗೊಂಡಿರುವ ಇಲ್ಲಿ ಸಾಂಪ್ರದಾಯಿಕ ಬಿತ್ತನೆ ಬೀಜಗಳು, ಗಡ್ಡೆ, ಗೆಣಸು ಸೇರಿದಂತೆ ಸಾವಯವ ಕೃಷಿ ಉತ್ಪನ್ನಗಳೊಂದಿಗೆ ದೇಸಿ ಆಹಾರ ಖಾದ್ಯಗಳು ಗಮನ ಸೆಳೆದವು. ಇದರೊಂದಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.
30 ಸಾವಯವ ಮಳಿಗೆಗಳಲ್ಲಿ ನೈಸರ್ಗಿಕ ಕೃಷಿ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಪದಾರ್ಥಗಳು ಪ್ರದರ್ಶನ, ಮಾರಾಟಕ್ಕಿವೆ.
ತಮಿಳುನಾಡು, ಕೇರಳ, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಬಂದಿರುವ 50ಕ್ಕೂ ಹೆಚ್ಚಿನ ಬೀಜ ಸಂರಕ್ಷಕರು ವಿವಿಧ ಬಗೆಯ ದೇಸಿ ಬೀಜ, ಹಣ್ಣು-ತರಕಾರಿ, ತೆನೆಗಳ ಪ್ರದರ್ಶನ ಮಾಡಿ ಪರಿಚಯಿಸಿದರು. ಬೀಜ ಸಂರಕ್ಷಣೆಯನ್ನು ಕಾಯಕವಾಗಿಸಿಕೊಂಡು ಜನಪ್ರಿಯತೆ ಪಡೆದ ರಾಜ್ಯ, ಅಂತಾರಾಜ್ಯದ ವಿಶಿಷ್ಟ ಬೀಜಗಳೂ ಇಲ್ಲಿವೆ.
ಧಾರವಾಡ ಜಿಲ್ಲೆಯ ಕುಂದಗೋಳದ ಯಶಸ್ವಿನಿ ಸಮುದಾಯ ಬೀಜ ಬ್ಯಾಂಕ್‌ನಿಂದ 72 ರಾಗಿ, ಗೋಧಿಯ 36 ತಳಿಯ ಬಿತ್ತನೆ ಬೀಜಗಳನ್ನು ಪ್ರದರ್ಶಿಸಿದರು. ‘ನಾವೇ ರೈತರಿಗೆ ಬೀಜ ಕೊಟ್ಟು ಬಿತ್ತನೆ ಮಾಡಿಸುತ್ತೇವೆ. ಇದರೊಂದಿಗೆ ಹೆಚ್ಚುವರಿ ಬೀಜ ಸಂಗ್ರಹ ಮಾಡಿಕೊಂಡು ಬೀಜ ಬ್ಯಾಂಕ್ ಮಾಡಿಕೊಂಡಿದ್ದು, ದ್ವಿದಳ, ಎಣ್ಣೆಕಾಳು, ಬ್ಯಾಡಗಿ ಮೆಣಸಿನಕಾಯಿ...ಹೀಗೆ ವಿವಿಧ ಬಿತ್ತನೆ ಬೀಜಗಳು ನಮ್ಮಲ್ಲಿ ದೊರೆಯುತ್ತಿವೆ. ಇವುಗಳೆಲ್ಲವೂ ಸಾವಯವ ಪದ್ಧತಿಯ ಬೀಜಗಳೇ ಎಂದು ಕುಂದಗೋಳದ ಕಮ್ಮಲಮ್ಮ ಹೇಳಿದರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕ ೃತ ಕೇರಳದ ವಯನಾಡಿನ ಶಾಜಿ 200ಕ್ಕೂ ಹೆಚ್ಚಿನ ಗಡ್ಡೆ ಗೆಣಸು ಪ್ರದರ್ಶಿಸಿದರು. ದೇಶ-ವಿದೇಶಗಳ ವೈವಿಧ್ಯಮಯ ಗಡ್ಡೆ ಗೆಣಸುಗಳು ಇವರ ಸಂಗ್ರಹದಲ್ಲಿವೆ.
ಎಚ್.ಡಿ.ಕೋಟೆ ಅಂತರಸಂತೆಂು ಹುಲಿಕಾಡು ರೈತ ಉತ್ಪಾದಕರ ಕಂಪನಿ ಪರ್ಪಲ್ ಯಾಮ್, ಬಳ್ಳಿ ಆಲೂಗಡ್ಡೆ ಮತ್ತು ಉತ್ತರಿ ಗೆಣಸುಗಳು ನೋಡಬಹುದಾಗಿದೆ. ಆಂಧ್ರಪ್ರದೇಶದ ಅರಕು ವ್ಯಾಲಿಯ ಸಂಜೀವಿನಿ ಆದಿವಾಸಿ ಸಂಘದಿಂದ ಅಪರೂಪದ ಗಡ್ಡೆ-ಗೆಣಸು ಸಹ ನೋಡಬಹುದಾಗಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿಯ ಗ್ರಾಮದ ಕುರಿ ಉಣ್ಣೆಯಿಂದ ಮಾಡಿರುವ ಕಪ್ಪು-ಬಿಳುಪಿನ ಕಂಬಳಿಗಳು ಇಲ್ಲಿದ್ದವು. ಮಂಗನನ್ನು ಓಡಿಸುವ ಕೋವಿಯೂ ಇಲ್ಲಿದೆ. ಅದರ ಬೆಲೆ 4500 ರೂ. ಎಂದಾಗ ದುಬಾರಿ ಎನಿಸಿತು. ಮುರಳೀಧರ ಅವರು ವೈವಿಧ್ಯಮಯ ಸೊಪ್ಪುಗಳನ್ನು ಪ್ರದರ್ಶಿಸಿದರು. ದೇಸಿರಿ ನ್ಯಾಚುರಲ್ ಸಂಸ್ಥೆಯಿಂದ ಎತ್ತಿನ ಗಾಣ ಹಾಕಿದ್ದಾರೆ. ಹರಳನ್ನು ಬೇಯಿಸುವ ಪ್ರಾತ್ಯಕ್ಷತೆ ವೀಕ್ಷಿಸಬಹುದಾಗಿದೆ. ಗ್ರಾಹಕರು ತಮ್ಮ ಇಷ್ಟದ ಗಾಣದ ಎಣ್ಣೆ ಖರೀದಿಸಬಹುದು.
ವಿಶೇಷವೆಂದರೆ ಬಿತ್ತನೆ ಬೀಜಗಳನ್ನು ತಮ್ಮ ಮನೆಯ ಆವರಣ, ಜಮೀನಿನಲ್ಲಿ ಯಾವ ಮಾದರಿಯಲ್ಲಿ ನೆಡುವುದು, ಪೋಷಿಸುವ ಕುರಿತು ಪಿರಿಯಾಪಟ್ಟಣದ ಬಿತ್ತನೆ ಬೀಜ ಸಂರಕ್ಷಕಿ ಪದ್ಮಮ್ಮ ಅಚ್ಚುಕಟ್ಟಾಗಿ ವಿವರಿಸುತ್ತ ಗಮನ ಸೆಳೆದರು.
ಕಳೆದ 20 ವರ್ಷಗಳಿಂದ ಬಿತ್ತನೆ ಬೀಜಗಳನ್ನು ಸಂರಕ್ಷಿಸುತ್ತ ಸಾವಯವ ಕೃಷಿಯ ಆರೋಗ್ಯಕರ ಆಹಾರ ಉತ್ಪನ್ನಗಳನ್ನು ಸ್ವತಃ ಬೆಳೆದು ತಿನ್ನುವುದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸೌತೆಕಾಯಿ, ಟೊಮ್ಯಾಟೊ, ಕೊತ್ತಂಬರಿ, ಬೀನ್ಸ್, ಪಪ್ಪಾಯ ಸೇರಿದಂತೆ ಇತರ ಬೆಳೆಗಳ ಬಿತ್ತನೆ ಬೀಜಗಳು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.
‘ಈಗಾಗಲೇ ಮಣ್ಣಿನ ಫಲವತತ್ತೆ ಕಡಿಮೆಯಾಗಿದೆ. ರಾಸಾಯನಿಕಗಳ ಬಳಕೆಯಿಂದ ಮಣ್ಣು ನಾಶವಾಗುತ್ತಿದೆ. ಹೀಗಾಗಿ ಮುಂದಿನ ಪೀಳಿಗೆಗಾಗಿ ಮಣ್ಣನ್ನು ಕಾಪಾಡಬೇಕು. ಇದಕ್ಕಾಗಿ ಇಂದಿನ ಕೃಷಿಕರು ಸಂಕಲ್ಪ ಮಾಡಬೇಕು. ಭೂಮಿ ಮಾರಾಟ ಮಾಡಬೇಡಿ. ಒಂದು ಬಾರಿ ಹೋದ ಜಮೀನು ಮತ್ತೆ ಗಳಿಸುವುದು ಕಷ್ಟ’ ಎಂದು ಪದ್ಮಮ್ಮ ಹೇಳಿದರು.
ಆಹಾರ ಮೇಳದಲ್ಲಿರುವ ಕೇರಳ, ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ಶೈಲಿಯ ಆಹಾರ ಖಾದ್ಯಗಳು ಬಾಯಿಯಲ್ಲಿ ನೀರು ತರಿಸಿದವು. ರಾಗಿ ಶ್ಯಾವಿಗೆ, ಜೋಳದ ರೊಟ್ಟಿ, ಬೆರಕೆ ಸೊಪ್ಪಿನ ಪಲ್ಯ, ್ಯಾಷನ್ ಫ್ರೂಟ್, ಎಳ್ಳಿಕಾಯಿ ಜ್ಯೂಸ್.. ಹೀಗೆ ವಿವಿಧ ಪದಾರ್ಥಗಳ ರುಚಿ ಸಹ ನೋಡಬಹುದಾಗಿದೆ.
"
ಅಮೆರಿಕದವಳಾದ ನಾನು ಹಲವಾರು ವರ್ಷಗಳಿಂದ ಯೋಗಾಭ್ಯಾಸಕ್ಕಾಗಿ ಮೈಸೂರಿನಲ್ಲಿ ವಾಸವಾಗಿದ್ದು, ಯೋಗದೊಂದಿಗೆ ನೈಜ ಕೃಷಿ ಪದ್ಧತಿಯೂ ನನ್ನ ಆಸಕ್ತಿ. ಆದ್ದರಿಂದ ಮೇಳದಲ್ಲಿ ಭಾಗವಹಿಸಿ ಇಲ್ಲಿಯ ಕೃಷಿ ವಸ್ತುಪ್ರದರ್ಶನವನ್ನು ವೀಕ್ಷಣೆ ಮಾಡಿ ಜ್ಞಾನ, ಅರಿವು ಹೆಚ್ಚಿಸಿಕೊಂಡಿರುವೆ.