ಅಭಿವೃದ್ಧಿಯಾಗುತ್ತಿವೆ ವರುಣ ಕ್ಷೇತ್ರದ ಗ್ರಾಮಗಳು

ತಿ.ನರಸೀಪುರ ತಾಲೂಕಿನ ಪಟ್ಟೇಹುಂಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು. ಎನ್.ಅನಿಲ್ ಕುಮಾರ್, ಕೆ.ಬಿ.ಪ್ರಭಾಕರ್, ಟಿ.ಜಿ. ಸುರೇಶಾಚಾರ್, ಕೆ.ಮುದ್ದೇಗೌಡ, ಗೋಪಿ, ಪಿ.ಎನ್.ಚರಿತಾ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಪಟ್ಟೇಹುಂಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು. ಎನ್.ಅನಿಲ್ ಕುಮಾರ್, ಕೆ.ಬಿ.ಪ್ರಭಾಕರ್, ಟಿ.ಜಿ. ಸುರೇಶಾಚಾರ್, ಕೆ.ಮುದ್ದೇಗೌಡ, ಗೋಪಿ, ಪಿ.ಎನ್.ಚರಿತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Varuna Kshetra
ತಿ.ನರಸೀಪುರ: ಸಿಎಂ ಸಿದ್ದರಾಮಯ್ಯ ಅವರೇ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮವೂ ವಿವಿಧ ಇಲಾಖೆಗಳ ಅನುದಾನದಲ್ಲಿ ಅಭಿವೃದ್ಧಿ ಕಾಣುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಪಟ್ಟೇಹುಂಡಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು, ಅಭಿವೃದ್ಧಿ ಎಂಬುದು ನಿರಂತರವಾಗಿ ನಡೆಯಬೇಕಿರುವ ಪ್ರಕ್ರಿಯೆ. ಹಾಗಾಗಿ ಸರ್ಕಾರಿ ಶಾಲೆ, ವಿವಿಧ ಸಮುದಾಯಗಳ ಕಾಲನಿ ರಸ್ತೆಗಳ ಅಭಿವೃದ್ಧಿ, ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಸೇರಿದಂತೆ ಕೆಐಡಿಆರ್‌ಎಲ್ ಹಾಗೂ ನಿರ್ಮಿತಿ ಕೇಂದ್ರದ ವತಿಯಿಂದ ಕೈಗೊಂಡಿರುವ ಯಾವುದೇ ಅಭಿವೃದ್ಧಿ ಕಾಮಗಾರಿ ಮೊಟಕುಗೊಂಡಿದ್ದರೆ, ಪೂರ್ಣಗೊಳಿಸಲು ಯೋಜನೆ ರೂಪಿಸಿ ಅಗತ್ಯ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳದಲ್ಲಿಯೇ ಇದ್ದ ಜಿಪಂ ತಾಂತ್ರಿಕ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಎನ್.ಚರಿತಾ ಅವರಿಗೆ ಸೂಚಿಸಿದರು.
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ದೂರು ಅಥವಾ ಮನವಿಗಳಿಗೆ ಸ್ಪಂದಿಸಬೇಕಿರುವುದು ನಮ್ಮ ಜವಾಬ್ದಾರಿ. ಸಂಬಂಧಪಟ್ಟ ಅಧಿಕಾರಿಗಳು ಅಹವಾಲಿನಲ್ಲಿ ಪ್ರಸ್ತಾಪಿಸುವ ಕೆಲಸ ಆಗುತ್ತದೆ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಜನರೆದುರು ಆಗುತ್ತದೆ ಎಂದು ಹೇಳಿ, ಬಳಿಕ ಆಗಲ್ಲ ಎನ್ನಬಾರದು. ಅಧಿಕಾರಿಗಳ ಕಾರ್ಯ ಪಾಲನೆಯಲ್ಲಿ ಸ್ಪಷ್ಟತೆ ಇರಬೇಕು. ವಸತಿ ಯೋಜನೆಗಳನ್ನು ಪಂಚಾಯಿತಿವಾರು ಹಂಚಿಕೆ ಮಾಡುವ ಸಂಬಂಧ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ತೀರ್ಮಾನಿಸಲಿದ್ದಾರೆ. ಈ ಬಗ್ಗೆ ಯಾವುದೇ ಒತ್ತಡ ಬೇಡವೆಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ರಂಗಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಚಾರಿ ಹುಂಡಿ ಗ್ರಾಮದಿಂದ ಜನ ಸಂಪರ್ಕ ಸಭೆಯನ್ನು ಆರಂಭಿಸಿದ ಯತೀಂದ್ರ ಸಿದ್ದರಾಮಯ್ಯ ರಂಗನಾಥಪುರ, ಮಾದೇಗೌಡನಹುಂಡಿ, ಹುನುಗನಹಳ್ಳಿ ಗ್ರಾಮಗಳಲ್ಲಿಯೂ ಸಭೆಗಳನ್ನು ನಡೆಸಿ ಜನರ ಹವಾಲುಗಳನ್ನು ಆಲಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಮಹದೇವ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ಕುಪ್ಯ ಡೇರಿ ಅಧ್ಯಕ್ಷ ಕೆ.ಬಿ.ಪ್ರಭಾಕರ್, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಂಗಸ್ವಾಮಿ, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಕುರುಬರ ಸಂಘದ ಅಧ್ಯಕ್ಷ ಮನೆ ಹುಂಡಿ ಮಹೇಶ್, ಮಾಜಿ ಅಧ್ಯಕ್ಷ ಟಿ.ಎಸ್. ಪ್ರಶಾಂತ್ ಬಾಬು, ಮುಖಂಡರಾದ ಗೋಪಿ, ಮಸ್ರುರ್ ಅಹಮ್ಮದ್, ಕಲ್ಪನಾ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net