ರಾಜ್ಯದಲ್ಲಿ ಜವಳಿ ಮತ್ತು ಕೈಮಗ್ಗ ಉದ್ಯಮದ ರಫ್ತು 2030ಕ್ಕೆ 75,200 ಕೋಟಿ ರೂ.ಗೆ ಏರಿಸುವ ಗುರಿ

ಮೈಸೂರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜವಳಿ ಆಂತರಿಕ ಸಲಹಾ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಉದ್ಘಾಟಿಸಿದರು. ಎ.ಬಿ.ಬಸವರಾಜು, ಸಿ.ಎಸ್.ಯೋಗೇಶ್, ಎಸ್.ಯುಕೇಶ್ ಕುಮಾರ್, ಬಿ.ಆರ್.ಯೋಗೀಶ್ ಹಾಗೂ ಇತರರು ಇದ್ದರು.
ಮೈಸೂರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜವಳಿ ಆಂತರಿಕ ಸಲಹಾ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಉದ್ಘಾಟಿಸಿದರು. ಎ.ಬಿ.ಬಸವರಾಜು, ಸಿ.ಎಸ್.ಯೋಗೇಶ್, ಎಸ್.ಯುಕೇಶ್ ಕುಮಾರ್, ಬಿ.ಆರ್.ಯೋಗೀಶ್ ಹಾಗೂ ಇತರರು ಇದ್ದರು.
Published on
ಮೈಸೂರು: ರಾಜ್ಯದಲ್ಲಿ ಪ್ರಸ್ತುತ ಜವಳಿ ಮತ್ತು ಕೈಮಗ್ಗ ಉದ್ಯಮದ ರಫ್ತು 23,961 ಕೋಟಿ ರೂ. ಇದ್ದು, 2030ಕ್ಕೆ 75,200 ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಮದು ಜವಳಿ ಅಭಿವೃದ್ಧಿ ಆಯುಕ್ತ ಎ.ಬಿ.ಬಸವರಾಜು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜವಳಿ ಆಂತರಿಕ ಸಲಹಾ ಕಾರ್ಯಾಗಾರದಲ್ಲಿ ಮಾತನಾಡಿ, ಕೃಷಿ ಕ್ಷೇತ್ರ ಹೊರತುಪಡಿಸಿದರೆ ಅತಿ ಹೆಚ್ಚು ಉದ್ಯೋಗವನ್ನು ಜವಳಿ ಕ್ಷೇತ್ರದಿಂದ ಸೃಷ್ಟಿಸಲಾಗುತ್ತಿದೆ. ಜವಳಿ ಕ್ಷೇತ್ರದಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿದೆ ಎಂದರು.
ಕೇಂದ್ರ ಸರ್ಕಾರ ರಫ್ತು ಪ್ರಮಾಣ ಹೆಚ್ಚು ಮಾಡುವ ಉದ್ದೇಶದಿಂದ ದೇಶದ ಎಲ್ಲ ರಾಜ್ಯಗಳಿಗೂ ಗುರಿ ನೀಡಿದೆ. ಅದರಂತೆ ರಾಜ್ಯಕ್ಕೆ 75,200 ಕೋಟಿ ರೂ. ಮೊತ್ತದ ರಫ್ತು ಗುರಿ ನೀಡಲಾಗಿದೆ. ಈ ಗುರಿ ತಲುಪಬೇಕಾದರೆ ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಜವಳಿ ಮತ್ತು ಕೈಮಗ್ಗ ಕ್ಷೇತ್ರದಲ್ಲಿ ಉತ್ಪಾದಕರು, ರಫ್ತುದಾರರು, ಮರ್ಚೆಂಟ್ಸ್‌ಗಳ ಸಮಸ್ಯೆಗಳನ್ನು ಆಲಿಸಲಾಗುವುದು. ಒಂದು ಜಿಲ್ಲೆ- ಒಂದು ಉತ್ಪನ್ನಕ್ಕೆ ಒತ್ತು ನೀಡಿದಂತೆ ಜವಳಿ ಕ್ಷೇತ್ರದ ಉದ್ಯಮದಾರರಿಗೂ ಉತ್ತೇಜನ ನೀಡಲಾಗುತ್ತದೆ. ಜವಳಿ ಉತ್ಪಾದನೆಯಲ್ಲಿ ರಾಜ್ಯದ ಚಾಂಪಿಯನ್ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ ಹಾಗೂ ಮೈಸೂರು ಜಿಲ್ಲೆ ಸೇರಿವೆ ಎಂದು ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಸಿ.ಎಸ್.ಯೋಗೇಶ್ ಮಾತನಾಡಿ, ಜವಳಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಕಲಬುರಗಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಯುಎಸ್, ನೆದರ್‌ಲ್ಯಾಂಡ್, ಜರ್ಮನಿ, ಯುಕೆ, ಫ್ರಾನ್ಸ್ ದೇಶಗಳಿಗೆ ಮೈಸೂರು ಭಾಗದಿಂದ ಕೈಮಗ್ಗ, ಜವಳಿ ವಸ್ತುಗಳು ರಫ್ತಾಗುತ್ತಿವೆ. ಟೆಕ್ಸ್‌ಟೈಲ್‌ನಿಂದ ಶೇ.45, ಗಾರ್ಮೆಂಟ್ಸ್‌ನಿಂದ ಶೇ.30,ಫ್ಯಾಬ್ರಿಕ್ಸ್‌ನಿಂದ ಶೇ.15, ಹೋಮ್ ಟೆಕ್ಸ್‌ಟೈಲ್ಸ್‌ನಿಂದ ಶೇ.10 ರಷ್ಟು ರಫ್ತು ಮಾಡುವುದಕ್ಕೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕ್ಷೇತ್ರ ಜವಳಿ. ಈ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ದುಡಿಯುತ್ತಿದ್ದು, ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಬಾಂಗ್ಲಾದೇಶ, ವಿಯೆಟ್ನಾಂ ದೇಶಗಳು ಜವಳಿ ರಫ್ತು ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವತ್ತ ಹೆಜ್ಜೆ ಹಾಕಿದೆ. ನಮ್ಮಲ್ಲೂ ಸಹ ಜವಳಿ ಉದ್ಯಮಕ್ಕೆ ಪ್ರೋತ್ಸಾಹ ದೊರೆಯುವ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆ ದಕ್ಷಿಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಯೋಗೀಶ್, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net