ದಿಗಿಲು ಹುಟ್ಟಿಸಿರುವ ಚಿಣ್ಣರ ನಾಪತ್ತೆ ಪ್ರಕರಣ!

ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣ
ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • 3 ವರ್ಷದಲ್ಲಿ ಕಾಣೆಯಾಗಿದ್ದ 452ರಲ್ಲಿ 172 ಮಕ್ಕಳ ಸುಳಿವು ಸಿಕ್ಕಿಲ್ಲ
  • ಹೆಣ್ಣು ಮಕ್ಕಳೇ ಹೆಚ್ಚು ಮಿಸಿಂಗ್
  • 115 ಅಪ್ರಾಪ್ತೆಯರು ಇನ್ನೂ ಸಿಕ್ಕಿಲ್ಲ:

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಆಧುನಿಕ ಸಂಸ್ಕೃತಿಗೆ ನಿಧಾನಗತಿಯಲ್ಲಿ ತೆರೆದುಕೊಳ್ಳುತ್ತಿರುವ ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಪಾಲಕರಲ್ಲಿ ದಿಗಿಲು ಹುಟ್ಟಿಸಿದೆ!
ಗೃಹ ಇಲಾಖೆಯ ಪ್ರಕಾರ, ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ 452 ಮಕ್ಕಳ ಅಪಹರಣ, ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 280 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ, ಇನ್ನೂ 172 ಮಕ್ಕಳ ಸುಳಿವೇ ದೊರೆತಿಲ್ಲ.

115 ಅಪ್ರಾಪ್ತೆಯರು ಇನ್ನೂ ಸಿಕ್ಕಿಲ್ಲ:

ಅಪಹರಣವಾದ ಮಕ್ಕಳ ಪೈಕಿ ಬಾಲಕಿಯರ ಸಂಖ್ಯೆಯೇ ಅಧಿಕ. 2023ರಿಂದ 2025ರ ನವೆಂಬರ್‌ವರೆಗೆ 323 ಬಾಲಕಿಯರು ನಾಪತ್ತೆಯಾಗಿದ್ದಾರೆ. ಈ ಪೈಕಿ 115 ಅಪ್ರಾಪ್ತೆಯರು ಇನ್ನೂ ಸಿಕ್ಕಿಲ್ಲ. 2023ರಲ್ಲಿ 4, 2024ರಲ್ಲಿ 8, 2025ರಲ್ಲಿ 103 ಬಾಲಕಿಯರ ಸುಳಿವು ದೊರೆತಿಲ್ಲ ಎಂಬುದು ಆತಂಕ ಮೂಡಿಸಿದೆ.

ಬಾಲಕರು ಕಾಣೆಯಾಗಿದ್ದಾರೆ: 

ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ 129 ಬಾಲಕರು ಅಪಹರಣ, ನಾಪತ್ತೆಯಾಗಿದ್ದರು. ಈ ಪೈಕಿ 112 ಗಂಡು ಮಕ್ಕಳು ಸಿಕ್ಕಿದ್ದಾರೆ. ಆದರೆ, 17 ಬಾಲಕರು ಇನ್ನೂ ದೊರೆತಿಲ್ಲ ಎಂಬುದು ಚಿಂತೆಗೆ ಕಾರಣವಾಗಿದೆ.

ದಾರಿ ತಪ್ಪಿಸುತ್ತಿರುವ ಶೋಷಿಯಲ್ ಮೀಡಿಯಾ:

ಮಕ್ಕಳು ಬಾಲ್ಯದಲ್ಲೇ ತಪ್ಪು ತಿಳಿವಳಿಕೆಯಿಂದ ಕುಟುಂಬವನ್ನು ತ್ಯಜಿಸಿ ಹೋಗುತ್ತಿದ್ದಾರೆ. ಮನೆಯಲ್ಲಿ ಹೊಂದಾಣಿಕೆ, ಪ್ರೀತಿ, ವಾತ್ಸಲ್ಯ ಸಿಗದವರು ಸದಾ ಬಾಗಿಲಿನಿಂದ ಆಚೆ ಇಣುಕು ನೋಡುತ್ತಾರೆ. ಮತ್ತೊಬ್ಬರ ಸಾಂಗತ್ಯ ಬಯಸುತ್ತಾರೆ. ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂಬುದು ನಾಪತ್ತೆ ಪ್ರಕರಣದಲ್ಲಿ ಎದ್ದುಕಾಣುತ್ತಿದೆ.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು: 

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದ ನಂತರ ಕಾಣೆಯಾಗುವ ಮಕ್ಕಳ ಸಂಖ್ಯೆ ಏರುಮುಖವಾಗಿದೆ. ಅಪಹರಣವಾದ ಬಾಲಕಿಯರು ಪತ್ತೆಯಾದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅತ್ಯಾಚಾರ ನಡೆದಿದ್ದು ದೃಢಪಟ್ಟರೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ದೌರ್ಜನ್ಯ ಎಸಗಿದವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ.
ಶೇ.90ರಷ್ಟು ಪ್ರಕರಣಗಳಲ್ಲಿ ಹದಿಹರೆಯದವರು ಪ್ರೀತಿ, ಪ್ರೇಮದ ಬಲೆಗೆ ಸಿಲುಕಿ ಮನೆ ಬಿಟ್ಟು ಹೋಗಿದ್ದಾರೆ. ಉಳಿದ ಶೇ.10ರಷ್ಟು ಮಕ್ಕಳು ಕೌಟುಂಬಿಕ ಸಮಸ್ಯೆಗಳು, ತಂದೆ-ತಾಯಿ ಗಲಾಟೆ, ಪಾಲಕರ ವಿಚ್ಛೇದನದಿಂದ ನೊಂದು ಮನೆ ತೊರೆದಿದ್ದಾರೆ. ಇಂತಹವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಮತ್ತೆ ಮನೆಗೆ ಸೇರಿಸುವ ಕೆಲಸವನ್ನು ಪೊಲೀಸರು, ಮಕ್ಕಳು ರಕ್ಷಣಾ ಘಟಕದ ಅಧಿಕಾರಿಗಳು ಮಾಡಿದ್ದಾರೆ.

ನಾಪತ್ತೆಯಾದವರ ಪತ್ತೆಗೆ ಹೇಗೆ?

ಕಾಣೆಯಾದವರನ್ನು ಸಿಸಿ ಕ್ಯಾಮೆರಾಗಳ ನೆರವಿನಿಂದ ಪತ್ತೆ ಹಚ್ಚಲಾಗುತ್ತಿದೆ. ಮೊಬೈಲ್ ನೆಟ್‌ವರ್ಕ್ ಸಹ ಮಕ್ಕಳ ಸುಳಿವು ನೀಡುತ್ತದೆ. ಪ್ರಕರಣ ದಾಖಲಾದ 120 ದಿನಗಳ ನಂತರವೂ ಮಕ್ಕಳ ಸುಳಿವು ದೊರೆಯದಿದ್ದರೆ ಅಂತಹ ಪ್ರಕರಣಗಳನ್ನು ಎಎಚ್‌ಟಿಯು (ಮಾನವ ಕಳ್ಳಸಾಗಣೆ ವಿರೋಧಿ ಘಟಕ) ವಿಭಾಗಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ಪರಿಣಾಮಕಾರಿ ತನಿಖೆಗೆ ಸಹಾಯವಾಗಲಿದೆ.

ಪೊಲೀಸರು ಏನು ಮಾಡುತ್ತಾರೆ?

ಮಕ್ಕಳ ಅಪಹರಣ, ನಾಪತ್ತೆ ಕುರಿತು ದೂರು ಬಂದ ತಕ್ಷಣ ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ದೇಶಾದ್ಯಂತ ತನಿಖಾ ಹಂತದಲ್ಲಿ ಮಾಹಿತಿಯನ್ನು ಸಿಇಜಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ತ್ವರಿತವಾಗಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ.
ಜತೆಗೆ, ಶಾಲಾ-ಕಾಲೇಜುಗಳಲ್ಲಿ ಅರಿವು-ನೆರವು, ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ರಕ್ಷಣಾ ಕಾನೂನಿನ ಕುರಿತು ತಿಳಿಹೇಳಲಾಗುತ್ತದೆ.
ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ನಾಪತ್ತೆ ಪ್ರಕರಣಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಸಭೆ ನಡೆಸುತ್ತಾರೆ. ಈ ಪೊಲೀಸ್ ಸಿಬ್ಬಂದಿಗೆ ತರಬೇತಿ, ತನಿಖಾ ಹಂತದಲ್ಲಿ ನಿರ್ದೇಶನ ಸಹ ನೀಡಲಾಗುತ್ತದೆ. ಜಿಲ್ಲಾಮಟ್ಟ ಕಾಣೆಯಾದ ಮಕ್ಕಳ ಪತ್ತೆ ಹಚ್ಚುವ ವಿಶೇಷ ಕಾರ್ಯಪಡೆಯನ್ನು ಐಜಿಪಿ, ಎಸ್‌ಪಿ, ಡಿವೈಎಸ್‌ಪಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ನಾಪತ್ತೆಗೆ ಕಾರಣ ಏನು?

ಹೆಣ್ಣು ಮತ್ತು ಗಂಡು ಮಕ್ಕಳು ನಾಪತ್ತೆಯಾಗಲು ಮನೆಯಲ್ಲಿ ಅತಿಯಾದ ಶಿಸ್ತು, ಪಾಲಕರ ಕಿರುಕುಳದಿಂದ ಮಕ್ಕಳು ಮನೆ ಬಿಡುವುದು ಒಂದು ಕಾರಣವಾಗಿದೆ. ಪ್ರೇಮ-ಪ್ರೀತಿ ಪ್ರಕರಣಗಳಿಂದ ಹದಿಹರೆಯದವರು ಮನೆ ತೊರೆದು ಕಾಣೆಯಾಗುತ್ತಿರುವುದು. 
ಟಿವಿ, ಸಿನಿಮಾ, ಮೊಬೈಲ್ ಮುಂತಾದ ಆಧುನಿಕ ಮಾಧ್ಯಮಗಳ ಹವ್ಯಾಸಗಳಿಂದ ಪ್ರಭಾವಿತರಾಗುವುದರಿಂದ ಅತೃಪ್ತಿಗೊಳ್ಳುತ್ತಿರುವುದರಿಂದ ಹಾಗೂ ಶೈಕ್ಷಣಿಕ ವೈಫಲ್ಯದ ಕಾರಣದಿಂದಾಗಿ ನಾಪತ್ತೆಯಾಗಿದ್ದಾರೆ ಎಂದು ಗೃಹ ಇಲಾಖೆ ಉತ್ತರ ನೀಡಿದೆ.
"

ಮಕ್ಕಳ ಅಪಹರಣ, ನಾಪತ್ತೆ ಗಂಭೀರ ಪ್ರಕರಣವಾಗಿದ್ದು, ತಕ್ಷಣ ಪ್ರಕರಣ ದಾಖಲಾಗುತ್ತದೆ. ಪ್ರೀತಿ-ಪ್ರೇಮಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಪ್ರಾಪ್ತರು ಮನೆಯಿಂದ ಓಡಿಹೋಗುತ್ತಿರುವುದು ಕಂಡು ಬರುತ್ತದೆ. ಈ ಪೈಕಿ ಕೆಲವರು ವಾಪಸ್ ಬರುವುದಿಲ್ಲ. ಇನ್ನೂ ಕೆಲವರು ಪತ್ತೆಯಾಗುತ್ತಾರೆ. ಆದರೆ, ಜಿಲ್ಲೆಯಲ್ಲಿ ಮಕ್ಕಳ ಕಳ್ಳ ಸಾಗಾಟ ಕಡಿಮೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net