ಧರ್ಮ, ಶಿಕ್ಷಣ ಸಂಸ್ಕೃತಿ ಉಳಿಸುವಲ್ಲಿ ಮಠಗಳ ಪಾತ್ರ ಅನನ್ಯ

 ಬೆಟ್ಟದಪುರದ ಕನ್ನಡ ಮಠದಲ್ಲಿ ಆಯೋಜಿಸಿದ ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿ, ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಅವರ ಗಣಾರಾಧನೆ ಮಹೋತ್ಸವ, ಕನ್ನಡ ಮಠದ 217ನೇ ಸ್ಥಾಪನಾ ವರ್ಷಾಚರಣೆ, ಶಿವಾನುಭವ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಾಂಬಸದಾಶಿವ ಸ್ವಾಮೀಜಿ, ಶ್ರೀ ಮಹದೇವ ಸ್ವಾಮೀಜಿ, ನಿತಿನ್ ವೆಂಕಟೇಶ್ ಇದ್ದರು.
ಬೆಟ್ಟದಪುರದ ಕನ್ನಡ ಮಠದಲ್ಲಿ ಆಯೋಜಿಸಿದ ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿ, ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಅವರ ಗಣಾರಾಧನೆ ಮಹೋತ್ಸವ, ಕನ್ನಡ ಮಠದ 217ನೇ ಸ್ಥಾಪನಾ ವರ್ಷಾಚರಣೆ, ಶಿವಾನುಭವ ಕಾರ್ಯಕ್ರಮ ಉದ್ಘಾಟನೆ ಸಮಾರಂಭದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಾಂಬಸದಾಶಿವ ಸ್ವಾಮೀಜಿ, ಶ್ರೀ ಮಹದೇವ ಸ್ವಾಮೀಜಿ, ನಿತಿನ್ ವೆಂಕಟೇಶ್ ಇದ್ದರು.
Published on
ಬೆಟ್ಟದಪುರ: ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನಮಾನ ನೀಡಲಾಗಿದೆ. ಇತಿಹಾಸದಲ್ಲಿನ ಅನೇಕ ಘಟನೆಗಳು ಗುರುವಿನ ಮಹತ್ವವನ್ನು ಸಾರುತ್ತವೆ. ಗುರು ಒಲಿದು ಪಾದವಿಟ್ಟ ಸ್ಥಳವೇ ಪುಣ್ಯ ಸ್ಥಳವಾಗುತ್ತದೆ. ಅದಕ್ಕೆ ಬೆಟ್ಟದಪುರ ಪ್ರಮುಖ ಉದಾಹರಣೆಯಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಕನ್ನಡ ಮಠದಲ್ಲಿ ಮಂಗಳವಾರ ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿ ಅವರ 97ನೇ ಹಾಗೂ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಅವರ 45ನೇ ಗಣಾರಾಧನೆ ಮಹೋತ್ಸವ, ಕನ್ನಡ ಮಠದ 217ನೇ ಸ್ಥಾಪನಾ ವರ್ಷಾಚರಣೆ, ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿನ ಕನ್ನಡ ಮಠದ ಶ್ರೀಗಳು ಸಮಾಜಮುಖಿ ಕಾರ್ಯಗಳೊಂದಿಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ನಿರಂತರ ಸೇವೆ ಸಲ್ಲಿಸುತ್ತಿವೆ. ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಧರ್ಮ, ಶಿಕ್ಷಣ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಯಲ್ಲಿ ಮಠಗಳ ಪಾತ್ರ ಅನನ್ಯವಾಗಿದ್ದು ಇಂತಹ ಸೇವಾ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ನುಡಿದರು.
ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಈ ವರ್ಷ ಮಳೆಯ ಕೊರತೆ ಎದುರಾಗಿದೆ. ಪಿರಿಯಾಪಟ್ಟಣ ಭಾಗದ ಅನೇಕ ರೈತರು ತಂಬಾಕು ಬೆಳೆಯಿಂದ ದೂರ ಸರಿದು ಪರ್ಯಾಯ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರು ವೈಜ್ಞಾನಿಕ ಮಾಹಿತಿ ಪಡೆದು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಲಾಭದಾಯಕ ಬೆಳೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ನಮ್ಮ ಕನ್ನಡ ಮಠದಲ್ಲಿಯೇ ಸುಮಾರು 15 ಸಾವಿರ ಕರಿಮೆಣಸು ಗಿಡಗಳನ್ನು ಬೆಳೆಸಲಾಗಿದ್ದು ಇದು ಉತ್ತಮ ಆದಾಯ ತರುವ ವಾಣಿಜ್ಯ ಬೆಳೆಯಾಗಿದೆ. ಸಮಾಜದ ಶ್ರೇಯೋಭಿವೃದ್ಧಿಗಾಗಿ ಕನ್ನಡ ಮಠದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ರೈತರ ಅಭಿವೃದ್ಧಿಗೂ ಮಠ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಮಾತನಾಡಿ, ಬೆಟ್ಟದಪುರ ಕನ್ನಡ ಮಠದ ಶ್ರೀಗಳು ನಿಜವಾದ ಕಾಯಕ ಯೋಗಿಗಳು. ತಮ್ಮ ಸರಳ ಜೀವನ, ಸೇವಾ ಮನೋಭಾವ ಮತ್ತು ಮಾರ್ಗದರ್ಶನದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಠದ ಆಸ್ತಿ ಉಳಿವಿಗಾಗಿ ಅವರು ನಡೆಸಿದ ಹೋರಾಟ ಮುಂದಿನ ಪೀಳಿಗೆ, ಭಕ್ತರು ಹಾಗೂ ರೈತರಿಗೆ ಶಾಶ್ವತವಾಗಿ ಉಪಯೋಗವಾಗಲಿದೆ. ಇಂತಹ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಮತ್ತು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಪಡುವಲು ಶ್ರೀ ವಿರಕ್ತಮಠದ ಶ್ರೀ ಮಹದೇವ ಸ್ವಾಮೀಜಿ, ಗುಮ್ಮಸಂದ್ರ ರುದ್ರಮುನೀಶ್ವರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಯು ಶಿವಪ್ಪ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಎಚ್.ಜಿ.ಪರಮೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ನಿರ್ದೇಶಕ ಲೋಕೇಶ್, ಬೆಟ್ಟದಪುರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಟಿ.ಸಿ.ಶಿವುದೇವಪ್ಪ, ಚಂದ್ರು ಹೊಸಮಠ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net