ದೇಶ ಶಕ್ತಿಯುತವಾಗಿ ಬೆಳೆಯದಿದ್ದರೆ ಅಪಾಯ ಹೆಚ್ಚು: ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಟೆರಿಷಿಯನ್ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಗಿರೀಶ್ ಲಿಂಗಣ್ಣ, ಪ್ರೊ.ಎಂ. ನಂಜಯ್ಯ ಹೊಂಗನೂರು, ಸಿಸ್ಟರ್ ಡಾ. ರೋಹಿಣಿ, ಡಾ.ಸಿ.ಸಿ ವೆಂಕಟೇಶ್, ವಿವೇಕ್‌ಚಾರ್ಲ್ಸ್ ಮತ್ತಿತರು ಇದ್ದರು.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಟೆರಿಷಿಯನ್ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಗಿರೀಶ್ ಲಿಂಗಣ್ಣ, ಪ್ರೊ.ಎಂ. ನಂಜಯ್ಯ ಹೊಂಗನೂರು, ಸಿಸ್ಟರ್ ಡಾ. ರೋಹಿಣಿ, ಡಾ.ಸಿ.ಸಿ ವೆಂಕಟೇಶ್, ವಿವೇಕ್‌ಚಾರ್ಲ್ಸ್ ಮತ್ತಿತರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ರಕ್ಷಣೆಗೆ ಕ್ಷಿಪಣಿಗಳು ತುಂಬ ಅವಶ್ಯಕ
  • ವಿದ್ಯಾರ್ಥಿಗಳು ವಿಜ್ಞಾನದ ಕಡೆ ಮುಖ ಮಾಡಬೇಕಿದೆ
ಮೈಸೂರು:ಯಾವುದೇ ದೇಶ ರಕ್ಷಣೆಯಲ್ಲಿ ಶಕ್ತಿಯುತವಾಗಿ ಬೆಳೆಯದಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕ ಗಿರೀಶ್ ಲಿಂಗಣ್ಣ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ,ಸಿದ್ಧಾರ್ಥ ನಗರದ ಟೆರಿಷಿಯನ್ ಕಾಲೇಜಿನ ಕನ್ನಡ ವಿಭಾಗದಿಂದ ಟೆರಿಷಿಯನ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕ್ಷಿಪಣಿಗಳ ಇತಿಹಾಸ ಕುರಿತು ಮಾತನಾಡಿದರು.
ಯಾವುದೇ ಒಂದು ದೇಶ ರಕ್ಷಣೆಯಲ್ಲಿ ಶಕ್ತಿಯುತವಾಗಿ ಬೆಳೆಯಲಿಲ್ಲ ಎಂದರೆ ವೆನೆಜುವೆಲಾ ದೇಶದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಈ ಎಚ್ಚರಿಕೆ ಎಲ್ಲ ದೇಶಗಳಲ್ಲಿಯೂ ಇರಬೇಕು. ಈ ನಿಟ್ಟಿನಲ್ಲಿ ಭಾರತದ ರಕ್ಷಣೆಗೆ ಕ್ಷಿಪಣಿಗಳು ತುಂಬ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ನಮ್ಮ ಯುವ ಪೀಳಿಗೆ ಸಾಮಾಜಿಕ ಜಾಲತಾಣ, ಕ್ರೀಡೆ, ಸಿನಿಮಾ ಇವುಗಳನ್ನು ಬಿಟ್ಟು ಬೇರೆ ಕಡೆ ಮುಖ ಮಾಡುತ್ತಿಲ್ಲ, ವಿದ್ಯಾರ್ಥಿಗಳು ವಿಜ್ಞಾನದ ಕಡೆ ಮುಖ ಮಾಡಬೇಕಿದೆ ಎಂದು ತಿಳಿಸಿದರು.
ಹಿಂದೆ ಯುದ್ಧ ಮಾಡಲು ಮದ್ದು ಗುಂಡು ಬೇಕಿತ್ತು. ಆದರೆ ಇತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಿದ್ದು, ಸೈಬರ್ ದಾಳಿ ನಡೆಸುತ್ತಿವೆ. ಕ್ಷಿಪಣಿ ಎಂದರೆ ಸ್ವಯಂ ಚಾಲಿತವಾಗಿ ನಿಖರವಾದ ಗುರಿಯನ್ನು ತಲುಪುವ ಸಾಧನ ವಾಗಿದೆ ಎಂದರು.
ಕ್ಷಿಪಣಿಗಳಲ್ಲಿ ಪ್ರಮುಖವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು, ಗಾಳಿ-ಗಾಳಿ ಕ್ಷಿಪಣಿಗಳು, ಗಾಳಿ-ನೆಲೆಗೆ ಕ್ಷಿಪಣಿಗಳು, ಭೂಮಿಯಿಂದ-ಗಾಳಿಗೆ ಕ್ಷಿಪಣಿಗಳು, ಹೈಪರ್ ಸಾನಿಕ್ ಕ್ಷಿಪಣಿ ಸೇರಿದಂತೆ ಇನ್ನಿತರ ಕ್ಷಿಪಣಿಗಳು ಅಭಿವೃದ್ಧಿಗೊಂಡಿವೆ ಎಂದು ಮಾಹಿತಿ ನೀಡಿದರು.
ರಾಕೆಟ್ ಮತ್ತು ಮಿಸೈಲ್ (ಕ್ಷಿಪಣಿ) ನಡುವಿನ ಮುಖ್ಯ ವ್ಯತ್ಯಾಸವೆಂದರೆ ಮಾರ್ಗದರ್ಶನ ವ್ಯವಸ್ಥೆ ರಾಕೆಟ್‌ಗಳು ಸಾಮಾನ್ಯವಾಗಿ ಗುರಿ ಇಲ್ಲದೆ ಉಡಾಯಿಸುವ ಸಾಧನಗಳಾಗಿವೆ. ಆದರೆ ಕ್ಷಿಪಣಿಯು ಗುರಿಯನ್ನು ತಲುಪಿಸಲು ಆಂತರಿಕ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿರುವ ಶಸ್ತ್ರಾಸ್ತ್ರವಾಗಿದೆ ಎಂದು ವಿಶ್ಲೇಷಿಸಿದರು.
ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆಯನ್ನು ಬಿಟ್ಟು ವಿಜ್ಞಾನದ ಕಡೆ ವಿದ್ಯಾರ್ಥಿಗಳು ಮುಖ ಮಾಡಬೇಕಿದೆ. ಮೊಬೈಲ್ ಬಂದ ಮೇಲೆ ವಿದ್ಯಾರ್ಥಿಗಳು ಪುಸ್ತಕದ ಕಡೆ ಮುಖ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜ್ಞಾನಿಯಾಗಿ ಗಿರೀಶ್ ಲಿಂಗಣ್ಣ ಅವರು 600ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇದು ಹೆಮ್ಮೆಯ ಸಂಗತಿ. ಈ ಕಾರ್ಯ ಮುಂದುವರಿಯಬೇಕು. ವಿದ್ಯಾರ್ಥಿಗಲು ಹೊಸ ಆವಿಷ್ಕಾರಗಳ ಕಡೆ ಗಮನ ನೀಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ರೆವರೆಂಡ್ ಸಿಸ್ಟರ್ ಡಾ. ರೋಹಿಣಿ, ಕನ್ನಡ ವಿಭಾಗದ ಡಾ.ಸಿ.ಸಿ ವೆಂಕಟೇಶ್, ಸಂಯೋಜಕ ವಿವೇಕ್‌ಚಾರ್ಲ್ಸ್ ಮತ್ತಿತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net