ಮೈಸೂರು ಜಿಲ್ಲೆಯಲ್ಲಿ 5.59 ಲಕ್ಷ ಮತದಾರರ ಹಕ್ಕಿಗೆ ಸಂಚಕಾರ

 ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ
ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆ
Published on

ಪ್ರಮುಖ ಮುಖ್ಯಾಂಶಗಳು

  • ಶೇ.19.99 ಜನರನ್ನು ಕೈಬಿಡುವ ಸಾಧ್ಯತೆ
  • ಎಎಸ್‌ಡಿಡಿಒಯಿಂದ ರೋಲ್‌ಬ್ಯಾಕ್ ಗೂ ಅವಕಾಶ
  • ನರಸಿಂಹರಾಜ ಕ್ಷೇತ್ರದಲ್ಲೇ ಅಧಿಕ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಜಿಲ್ಲೆಯಲ್ಲಿ 5.59 ಲಕ್ಷ ಮತದಾರರ ಹಕ್ಕಿಗೆ ಸಂಚಕಾರ ಬಂದಿದ್ದು, ಮತದಾರರ ಕರಡು ಪಟ್ಟಿಯಿಂದ ಇವರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ...!
ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಗಣತಿ ನಮೂನೆ ಸ್ವೀಕರಿಸಿ, ಡಿಜಿಟಲೀಕರಣ ಕೆಲಸ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು ಇನ್ನೂ ಮೂರು ದಿನ ಮಾತ್ರ ಉಳಿದಿದೆ. ಈಗಾಗಲೇ ಶೇ.19.99 ಮತದಾರರನ್ನು ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 27.99 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಿಸಿದ್ದು, ಈ ಪೈಕಿ 22.39 ಲಕ್ಷ ಮತದಾರರ ಗಣತಿ ನಮೂನೆ ಸಂಗ್ರಹಿಸಿ, ಡಿಜಿಟಲೀಕರಿಸಲಾಗಿದೆ. ಇದರಲ್ಲಿ ಪತ್ತೆಯಾಗದ 5.59 ಲಕ್ಷ ಮತದಾರರನ್ನು ಎಎಸ್‌ಡಿಡಿಒ ಮತದಾರರು ಎಂದು 5 ವಿಭಾಗದಲ್ಲಿ ವರ್ಗೀಕರಣ ಮಾಡಲಾಗಿದೆ. 
ಈ ಪೈಕಿ ಗೈರಾದವರು 1.38 ಲಕ್ಷ, ಶಾಶ್ವತವಾಗಿ ಸ್ಥಳಾಂತರಗೊಂಡವರು 2.45 ಲಕ್ಷ, ಮೃತಪಟ್ಟವರು 43,138, ನಕಲಿ ಅಥವಾ ಎರಡು ಕಡೆ ದಾಖಲುಗೊಂಡವರು 43,138, ಇತರ ಕಾರಣಗಳಿಂದ ಪತ್ತೆಯಾಗದ 19,321 ಮತದಾರರಿದ್ದಾರೆ. ಇವರೆಲ್ಲರೂ ಮತದಾರರ ಕರಡು ಪಟ್ಟಿಯಿಂದ ಹೊರ ಬೀಳಲಿದ್ದಾರೆ.
ಮೈಸೂರು ನಗರ ಪ್ರದೇಶದ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಎಎಸ್‌ಡಿಡಿಒ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇವರೆಲ್ಲರೂ ಮತದಾನ ಹಕ್ಕು ಕಳೆದುಕೊಳ್ಳಲಿದ್ದು, ಇದು ಭವಿಷ್ಯದಲ್ಲಿ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ.

 ಎನ್‌ಆರ್ ಕ್ಷೇತ್ರದಲ್ಲೇ ಅಧಿಕ

ಮುಸ್ಲಿಂ ಮತದಾರರು ಹೆಚ್ಚಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗದ (ಎಎಸ್‌ಡಿಡಿಒ)ಮತದಾರರು ವರದಿಯಾಗಿದ್ದಾರೆ. ಇಂತಹವರ ಸಂಖ್ಯೆ ಲಕ್ಷ ದಾಟಿದೆ. 
ಬರೋಬ್ಬರಿ 1,01,245 ಜನರು ಮತದಾನ ಹಕ್ಕು ಕಳೆದುಕೊಳ್ಳಲಿದ್ದಾರೆ. ಇದು ಜಿಲ್ಲೆಯಲ್ಲೇ ಅಧಿಕ ಪ್ರಮಾಣವಾಗಿದೆ. ಇಲ್ಲಿ ನಡೆಯುತ್ತಿದ್ದ ಎಸ್‌ಐಆರ್ ಪ್ರಕ್ರಿಯೆ ಕುರಿತು ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಹೀಗಾಗಿ, ವಿವಿಧ ಹಂತದಲ್ಲಿ ಪರಿಶೀಲನೆ ಸಹ ನಡೆದಿತ್ತು. 
ಹೀಗಾಗಿ, ಕಟ್ಟುನಿಟ್ಟಿನಿಂದ ಈ ಪ್ರಕ್ರಿಯೆ ಇಲ್ಲಿ ನಡೆದಿದೆ. 40,410 ಮತದಾರರು ಪತ್ತೆಯಾಗಿಲ್ಲ. 30,961 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 9,644 ಮೃತಪಟ್ಟಿದ್ದರೆ, ಇತರ ಕಾರಣಕ್ಕೆ ಪತ್ತೆಯಾಗದ ಸಂಖ್ಯೆ 15,242 ಇದೆ. ಇಲ್ಲಿಯ ಎಎಸ್‌ಡಿಡಿಒ ಸಂಖ್ಯೆ ಇತರ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಎಂಬುದು ಗಮನಾರ್ಹ ಸಂಗತಿ.

2ನೇ ಸ್ಥಾನದಲ್ಲಿ ಚಾಮುಂಡೇಶ್ವರಿ

ಎಎಸ್‌ಡಿಡಿಒ ಪಟ್ಟಿಯ ವಿಚಾರದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವು ಜಿಲ್ಲೆಯಲ್ಲೇ 2ನೇ ಸ್ಥಾನಲಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶವನ್ನು ಹೊಂದಿರುವ ಈ ಕ್ಷೇತ್ರದಲ್ಲಿ 85,696 ಮತದಾರರು ಪಟ್ಟಿಯಿಂದ ಹೊರ ಹಾಕಲಾಗಿದೆ. ನಗರದಲ್ಲಿ ಮತ್ತೊಂದು ಕ್ಷೇತ್ರವಾದ ಚಾಮರಾಜದಲ್ಲಿ 84,798 ಮತದಾರರು ಪತ್ತೆಯಾಗಿಲ್ಲ.
 ಉಳಿದಂತೆ ವರುಣ ಕ್ಷೇತ್ರದಲ್ಲಿ 29,136, ಪಿರಿಯಾಪಟ್ಟಣದಲ್ಲಿ 22,847, ಕೃಷ್ಣರಾಜನಗರ ಕ್ಷೇತ್ರದಲ್ಲಿ 26,830, ಹುಣಸೂರು ಕ್ಷೇತ್ರದಲ್ಲಿ 34,244, ಎಚ್.ಡಿ.ಕೋಟೆ ಕ್ಷೇತ್ರದಲ್ಲಿ 33,021, ನಂಜನಗೂಡು ಕ್ಷೇತ್ರದಲ್ಲಿ 32,010, ತಿ.ನರಸೀಪುರದಲ್ಲಿ 31,135 ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಹೀಗೆ ವರ್ಗೀಕರಿಸಲಾದ ಮತದಾರರನ್ನು ಬಿಎಲ್‌ಒಗಳು, ಬಿಎಲ್‌ಒ ಆ್ಯಪ್‌ನಲ್ಲಿ ಸಂಗ್ರಹಿಸಲಾಗದ ಮತದಾರರು ಎಂದು ನಮೂದು ಮಾಡಿದ್ದಾರೆ. ಇಂತಹ ಮತದಾರರ ಗಣತಿ ನಮೂನೆಯನ್ನು ವಿತರಣೆ ಮಾಡುವುದಿಲ್ಲ. ಬಿಎಲ್‌ಒ ಆ್ಯಪ್‌ನಲ್ಲಿ ’ಸಂಗ್ರಹಿಸಲಾಗದ’ ಎಂದು ನಮೂದಾಗಿರುವ ಕಾರಣ ಅಂತಹ ಮತದಾರರು ಆನ್‌ಲೈನ್‌ನಲ್ಲೂ ಗಣತಿ ನಮೂನೆ ಭರ್ತಿ ಮಾಡಲು ಅವಕಾಶವಿಲ್ಲ. ಪರಿಣಾಮವಾಗಿ ಅಂತಹ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯುತ್ತದೆ.

ಮತದಾರರೇ ಜವಾಬ್ದಾರರು

ಮನೆ ಬದಲಿಸಿದ ತಕ್ಷಣ, ಅರ್ಜಿ ಸಲ್ಲಿಸಿ ಮತದಾರರ ಚೀಟಿಯಲ್ಲೂ ವಿಳಾಸವನ್ನು ಬದಲಿಸುವುದು ಮತದಾರರದ್ದೇ ಕರ್ತವ್ಯ. ಹೀಗೆ ವಿಳಾಸ ಬದಲಿಸದೆ ಇರುವವರನ್ನು ‘ಶಾಶ್ವತವಾಗಿ ಸ್ಥಳಾಂತರವಾದವರು’ ಎಂದು ವರ್ಗೀಕರಿಸಲಾಗಿದೆ. ನಿಯಮಬದ್ಧವಾಗಿಯೇ ಹೀಗೆ ಮಾಡಲಾಗಿದೆ. ಈ ಕಾರಣದಿಂದ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದರೆ, ಅದಕ್ಕೆ ಆಯಾ ಮತದಾರರೇ ಜವಾಬ್ದಾರರು ಎಂದು ಚುನಾವಣಾಧಿಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

ಮತ್ತೆ ಪಡೆಯಲು ಅವಕಾಶ

ಮತದಾರರ ಕರಡು ಪಟ್ಟಿಯಿಂದ ಹೊರಗೆ ಉಳಿದವರು ಆ ನಂತರ ಅರ್ಜಿ ನಮೂನೆ-6 ಅನ್ನು ಸಲ್ಲಿಸಬೇಕು. ಬಳಿಕ ಮತದಾನದ ಹಕ್ಕನ್ನು ಮತ್ತೆ ಪಡೆದುಕೊಳ್ಳಲು ಅವಕಾಶವಿದೆ. 
ಹೀಗಾಗಿ, ಅಂತಹವರು ಆತಂಕ ಪಡುವ ಅಗತ್ಯವಿಲ್ಲ. ನಮೂನೆ-6ನ್ನೂ ಸಲ್ಲಿಸದಿದ್ದರೆ, ಎಸ್‌ಐಆರ್‌ನ ಅಂತಿಮ ಮತದಾರರ ಪಟ್ಟಿಯಿಂದಲೂ ಅವರು ಹೊರಗುಳಿಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.


ರೋಲ್‌ಬ್ಯಾಕ್ ಚಾನ್ಸ್

ಕೆಲ ಮತದಾರರು ತಮ್ಮ ಸಹಿ ಮಾಡಿದ ಎಣಿಕೆ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಸಲ್ಲಿಸಿದ್ದರೂ, ತಮ್ಮ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. 
ಈ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಹಾಗೂ ಮತಗಟ್ಟೆವಾರು ಎಎಸ್‌ಡಿಡಿಒ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ನಮೂನೆ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದಿದ್ದರೂ, ನಿಮ್ಮ ಹೆಸರು ಎಎಸ್‌ಡಿಡಿಒ (ಹೊರಗಿಡುವ) ಪಟ್ಟಿಯಲ್ಲಿ ಇದ್ದರೆ, ತಕ್ಷಣವೇ ಬಿಎಲ್‌ಒ ಅವರನ್ನು ಸಂಪರ್ಕಿಸಿ ರೋಲ್‌ಬ್ಯಾಕ್ ಮಾಡಿಸಿಕೊಳ್ಳಬಹುದು.
ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರಿದೆ ಎಂಬ ಕಾರಣಕ್ಕೆ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂದರ್ಥವಲ್ಲ. ಪರಿಶೀಲನೆಗಾಗಿ ಮಾತ್ರ ಆ ದಾಖಲೆ ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಹೊರಗಿಟ್ಟಿರುವ ಮತದಾರರಲ್ಲಿ ಮಾತ್ರ ಆತಂಕ ಮುಂದುವರಿದಿದೆ.
"

ಈಗಾಗಲೇ ನಡೆಯುತ್ತಿರುವ ಗಣತಿ ನಮೂನೆ ಡಿಜಿಟಲೀಕರಣ ಮತ್ತು ಎಎಸ್‌ಡಿಡಿಒ ರೋಲ್‌ಬ್ಯಾಕ್ ಪ್ರಕ್ರಿಯೆಯನ್ನು ಆ.17ರ ವರೆಗೆ ವಿಸ್ತರಣೆ ಮಾಡಲಾಗಿದ್ದು, ಹೊರಗೆ ಉಳಿದಿರುವ ಮತದಾರರು ಈ ಅವಕಾಶ ಬಳಕೆ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ಸಲ್ಲಿಸಬೇಕು.

— ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಎಸ್‌ಐಆರ್ ವಿವರಣೆ

ನಕಲಿ, 2 ಕಡೆ ದಾಖಲುಗೊಂಡವರು 43,138

ಜಿಲ್ಲೆಯಲ್ಲಿ ಪತ್ತೆಯಾಗದ ಎಎಸ್‌ಡಿಡಿ ಮತದಾರರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net