ರಾಜ್ಯ ಬಜೆಟ್ ಕಡತದಲ್ಲೇ ಉಳಿದ ಘೋಷಣೆಗಳು!

ನಿಮ್ಹಾನ್ಸ್-ಆಸ್ಪತ್ರೆ-ಯೋಜನೆ
ನಿಮ್ಹಾನ್ಸ್-ಆಸ್ಪತ್ರೆ-ಯೋಜನೆ
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ಕೈದು ಆಶ್ವಾಸನೆಗಳು ಜಾರಿಯತ್ತ
  • ಅನೇಕ ಭರವಸೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ 2024-25ನೇ ಸಾಲಿನಲ್ಲಿ ರಾಜ್ಯ ಬಜೆಟ್‌ನಲ್ಲಿ ತವರು ಜಿಲ್ಲೆ ಮೈಸೂರಿಗೆ ಘೋಷಣೆ ಮಾಡಿದ್ದ ಬಹುತೇಕ ಕಾರ್ಯಕ್ರಮಗಳು ಕಡತದಲ್ಲೇ ಉಳಿದಿವೆ!
ಇದೀಗ ದಾಖಲೆ 17ನೇ ಆಯವ್ಯಯಕ್ಕಾಗಿ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಾ.6ರಂದು ಅಧಿವೇಶನದಲ್ಲಿ ಮಂಡನೆ ಮಾಡಲಿದ್ದಾರೆ. 
ಈ ಹೊತ್ತಿನಲ್ಲಿ ಕಳೆದ ವರ್ಷ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿಸಿದ ಘೋಷಣೆಗಳು ಏನಾಗಿವೆ ಎಂಬ ಪ್ರಶ್ನೆಗೆ ನಿರಾಶೆಯ ಉತ್ತರ ದೊರೆಯುತ್ತಿದ್ದು, ಅನೇಕ ಘೋಷಣೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದು ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ.
ಆಧುನಿಕ ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಎಂಡೊಕ್ರೈನಾಲಜಿ ಕೇಂದ್ರ, ನಿಮ್ಹಾನ್ಸ್ ಆಸ್ಪತ್ರೆ ಕೆಲಸಕ್ಕೆ ಚಾಲನೆ ನೀಡಬೇಕಿದೆ. ಇಷ್ಟು ಬಿಟ್ಟರೆ ಕಳೆದ ವರ್ಷ ಘೋಷಣೆಗಳಲ್ಲಿ ಬಹಳಷ್ಟು ಇನ್ನೂ ಪ್ರಾರಂಭಿಕ ಹಂತದಲ್ಲಿವೆ. ಕೆಲವು ಇನ್ನೂ ಶುರುವಾಗೇ ಇಲ್ಲ.

ಎಂಡೊಕ್ರೈನಾಲಜಿ, ನಿಮ್ಹಾನ್ಸ್ ಜಾಗ ಗುರುತು:

ಮಧುಮೇಹ ಸಮಸ್ಯೆಗಳಿಗೆ ಒಂದೇ ಸೂರಿನಡಿ ಸಮಗ್ರ ಆರೈಕೆ, ಚಿಕಿತ್ಸೆ ನೀಡುವ ಪ್ರಾದೇಶಿಕ ಎಂಡೊಕ್ರೈನಾಲಜಿ (ನಿರ್ನಾಳ ಗ್ರಂಥಿವಿಜ್ಞಾನ) ಕೇಂದ್ರ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. 
50 ಕೋಟಿ ರೂ. ನಿಗದಿ ಪಡಿಸಲಾಗಿದೆ. ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಿದ್ವಾಯಿ ಆಸ್ಪತ್ರೆ ಬಳಿಯೇ ಇದಕ್ಕೆ 3 ಎಕರೆ ಜಾಗ ಕೊಡಲಾಗಿದ್ದು, ಟೆಂಡರ್ ಕರೆದು ಕಾಮಗಾರಿ ಶುರು ಮಾಡಬೇಕಿದೆ. 40 ಹಾಸಿಗೆ ಸಾಮರ್ಥ್ಯ ಇದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗುಡುಮಾದನಹಳ್ಳಿ ಬಳಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆರಂಭಿಸಲು 20 ಎಕರೆ ಜಾಗ ಗುರುತಿಸಿದೆ. ಘೋಷಣೆಯಾದ 11 ತಿಂಗಳ ಬಳಿಕ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ. 
ವೈದ್ಯಕೀಯ ಶಿಕ್ಷಣ ಇಲಾಖೆಯ ಅನುದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಎರಡು ಯೋಜನೆಗಳು ನಿರ್ಮಾಣವಾದರೆ ಮೈಸೂರು ಜಿಲ್ಲೆಯೊಂದಿಗೆ ಚಾಮರಾಜನಗರ, ಕೊಡುಗ, ಮಂಡ್ಯ ಜನರಿಗೂ ಅನುಕೂಲವಾಗಲಿದೆ.

ತ್ವರಿತಗತಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ:

ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಇದಕ್ಕಾಗಿ 120 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದರೊಂದಿಗೆ ಬಹುದಿನದ ಬೇಡಿಕೆ ಈಡೇರಿಕೆಯತ್ತ ಸಾಗಿದೆ.
 ಈ ಕ್ರಮದಿಂದ ಈಗಿರುವ ಗ್ರಾಮಾಂತರ ಬಸ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಿ ಪ್ರಯಾಣಿಕರಿಗೂ, ಸಾರ್ವಜನಿಕರಿಗೂ ಪ್ರಯೋಜನವಾಗಲಿದೆ. ಘೋಷಣೆಯಂತೆ ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ.

ಉನ್ನತೀಕರಣಕ್ಕೆ ಗ್ರಹಣ:

ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯ ಭೂ ಸ್ವಾಧೀನಕ್ಕಾಗಿ 319 ಕೋಟಿ ರೂ. ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಅನುವಾಗುವಂತೆ ಕೆಐಎಡಿಬಿ ವಶ ಪಡಿಸಿಕೊಂಡಿರುವ ಜಮೀನುಗಳನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ. ಆದರೆ, ಇನ್ನೂ ಕೇಂದ್ರ ಸರ್ಕಾರದಿಂದ ವಿಮಾನ ನಿಲ್ದಾಣದ ಉನ್ನತೀಕರಣ ಕಾಮಗಾರಿಗೆ ಚಾಲನೆ ದೊರೆತಿಲ್ಲ.

ಆಮೆ ವೇಗದಲ್ಲಿ ಫಿಲ್ಮ್ ಸಿಟಿ:

ಪ್ರತಿ ಬಜೆಟ್‌ನಲ್ಲಿ ಪ್ರಸ್ತಾವನೆಯಾಗುವ ಫಿಲ್ಮ್ ಸಿಟಿ ಯೋಜನೆ ಇನ್ನೂ ತೇವಳುತ್ತಿದೆ. ಪಿಪಿಪಿ ಮಾದರಿಯಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ 150 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಸಿನಿಮಾ ನಗರಿ ನಿರ್ಮಾಣ ಮಾಡಲಾಗುತ್ತಿದೆ. ಕಾಂಪೌಂಡ್ ಸೇರಿದಂತೆ ಸಣ್ಣಪುಟ್ಟ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಕಾಮಗಾರಿ ಯಾವಾಗ ಮುಗಿದು, ಯಾವಾಗ ಬಳಕೆಗೆ ದೊರೆಯಲಿದೆಯೋ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.

ಸ್ಥಾಪನೆಯಾಗದ ಮ್ಯೂಸಿಯಂ:

ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯ ಮಟ್ಟದ ವಸ್ತು ಸಂಗ್ರಹಾಲಯ ಸ್ಥಾಪನೆಗೂ ಇನ್ನೂ ಕಾಲ ಕೂಡಿ ಬಂದಿಲ್ಲ. ರಾಜ್ಯದ ಸಂಸ್ಕೃತಿ, ನಾಗರಿಕತೆಯ ಉಗಮ, ವಿಕಾಸಗಳೂ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಸಂಗತಿಯನ್ನು ಬಿಂಬಿಸುವ ಈ ಮ್ಯೂಸಿಯಂ ಪ್ರಾರಂಭಿಸಲು ಸಣ್ಣ ಪ್ರಕ್ರಿಯೆಗಳು ನಡೆದಿಲ್ಲ. 
ಇಡೀ ಯೋಜನೆ ನನೆಗುದಿಗೆ ಬಿದ್ದಿದ್ದು, ಇದರಿಂದ ಮೂರು ವರ್ಷದಿಂದ ಹಳೇ ಡಿಸಿ ಕಚೇರಿ ಪಾಳುಬಿದ್ದಿದೆ. ನಿರ್ವಹಣೆವಿಲ್ಲದೆ ಅವಸಾನದತ್ತ ಮುಖ ಮಾಡುತ್ತಿದೆ.

ಸೋಮನಾಥಪುರಕ್ಕಿಲ್ಲ ಮೂಲ ಸೌಲಭ್ಯ:

ಯುನೆಸ್ಕೋ ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ತಿ.ನರಸೀಪುರ ತಾಲೂಕಿನ ಸೋಮನಾಥಪುರ ಪ್ರವಾಸಿ ತಾಣದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೂ ಕ್ರಮ ಕೈಗೊಂಡಿಲ್ಲ. ರಸ್ತೆ, ಬಸ್ ಸಂಪರ್ಕ ಸೇರಿದಂತೆ ವಿವಿಧ ಕೆಲಸಗಳು ಆಗಬೇಕಿದೆ. ಆದರೆ, ಇದು ಆಗಿಲ್ಲ. ಈ ಕೊರತೆಯಿಂದ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ.

ಕೈಗಾರಿಕೆ ಬೆಳವಣಿಗೆಗೆ ವೇಗಸ್ಪರ್ಶ ಸಿಕ್ಕಿಲ್ಲ:

ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಮೈಸೂರಿನ 150 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ‘ಪ್ರಿಂಟೆಂಡ್ ಸರ್ಕೀಟ್ ಬೋರ್ಡ್ ಪಾರ್ಕ್’ ಸಹ ಅಭಿವೃದ್ಧಿ ಆಗಿಲ್ಲ. ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯದಲ್ಲಿ ಕರ್ನಾಟಕದ ನಾಯಕತ್ವವನ್ನು ಬಲಪಡಿಸಲು ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್’ ಅನ್ನು ಅಭಿವೃದ್ಧಿ ಮಾಡುವ ಘೋಷಣೆಯೂ ಈಡೇರಿಲ್ಲ.
 ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಗೆ ಸಹ ಕ್ರಮ ವಹಿಸಿಲ್ಲ. ಇದರಿಂದ ಮೈಸೂರು ಕೈಗಾರಿಕಾ ಬೆಳವಣಿಗೆಗೆ ವೇಗಸ್ಪರ್ಶ ಸಿಕ್ಕಿಲ್ಲ.

ರೇಷ್ಮೆ ಮಾರುಕಟ್ಟೆಗೆ ಶಾಶ್ವತ ನೆಲೆ ಇಲ್ಲ:

ಈ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ರೇಷ್ಮೆಗೂಡಿನ ಮಾರುಕಟ್ಟೆಯನ್ನು ಸ್ಥಾಪನೆ ಮಾಡುವ ಕೆಲಸವೂ ಇನ್ನೂ ಆರಂಭಗೊಂಡಿಲ್ಲ. 
ನಬಾರ್ಡ್ ಸಹಯೋಗದಲ್ಲಿ ಹೊಸಹುಂಡಿ ಬಳಿ 2 ಎಕರೆ ಜಾಗದಲ್ಲಿ ಇದು ನಿರ್ಮಾಣವಾಗಬೇಕಿದೆ. 2019ರಲ್ಲಿ ಬಂಡಿಪಾಳ್ಯದ ಎಪಿಎಂಸಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಷ್ಮೆಗೂಡಿನ ಮಾರುಕಟ್ಟೆಗೆ ಶಾಶ್ವತ ನೆಲೆ ಕಲ್ಪಿಸಿಕೊಡಲು ಇನ್ನೂ ಆಗಿಲ್ಲ. 

ದರ್ಶನವಾಗದ ‘ಮತ್ಸ್ಯ ದರ್ಶಿನಿ’:

ಮೈಸೂರಿನಲ್ಲಿ ಹೈಟೆಕ್ ‘ಮತ್ಸ್ಯ ದರ್ಶಿನಿ’ ಪ್ರಾರಂಭಿಸುವ ಆಶ್ವಾಸನೆ ಸಹ ಇನ್ನೂ ಈಡೇರಿಲ್ಲ. ಪ್ರವಾಸಿಗರಿಗೆ ಶುಚಿ-ರುಚಿಯಾದ ಕರಾವಳಿ ಮೀನುಖಾದ್ಯ ಸವಿಯುವ ಮೈಸೂರಿನವರ ಕನಸು ಇನ್ನೂ ನನಸಾಗಿಲ್ಲ. ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ  ಕ್ಯಾಂಟಿನ ಬಳಕೆ ಮಾಡಿಕೊಂಡು 50 ಲಕ್ಷ ರೂ. ವೆಚ್ಚದಲ್ಲಿ ಇದನ್ನು ಆರಂಭಿಸುವ ಘೋಷಣೆ ಇನ್ನೂ ಕಡತದಲ್ಲೇ ಉಳಿದಿದೆ. ವಿವಿಧ ಕಾರಣಗಳಿಂದ ಇದರ ಅನುಷ್ಠಾನಕ್ಕೆ ಅಡೆತಡೆ ಎದುರಾಗಿದೆ.

ಕಣ್ಣು ಬಿಟ್ಟಿಲ್ಲ ಕ್ರೀಡಾ ಕೇಂದ್ರ:

ಮೈಸೂರಿನಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ ಸಹ ಇನ್ನೂ ಕಣ್ತೆರೆದಿಲ್ಲ. ಇದಕ್ಕಾಗಿ 7 ಕೋಟಿ ರೂ. ಕಾಯ್ದಿಡಲಾಗಿದೆ. ಜತೆಗೆ, ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿಗಳನ್ನು ಸ್ಥಾಪಿಸಲು 2 ಕೋಟಿ ರೂ. ಒದಗಿಸಲಾಗುವುದು ಎಂದು ಘೋಷಿಸಲಾಗಿತ್ತು. 
ಮೈಸೂರಿನಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು 5 ಕೋಟಿ ರೂ. ನೀಡಲಾಗುವುದು ಎಂದೂ ತಿಳಿಸಲಾಗಿತ್ತು.  ಇದು ಬರೀ ಮಾತಾಗಿಯೇ ಉಳಿದಿದೆ. ಈ ಕುರಿತು ಯಾವುದೇ ಬೆಳವಣಿಗೆಗಳು ನಡೆದಿಲ್ಲ. 

ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಿಲ್ಲ:

ಮೈಸೂರು ನಗರದ ವ್ಯಾಪ್ತಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಹೊಸ ಅಗ್ನಿ ಶಾಮಕ ಠಾಣಾ ಕಟ್ಟಡ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ಇನ್ನೂ ಈಡೇರಿಲ್ಲ. ಸರಸ್ವತಿಪುರಂನಲ್ಲಿ ಅಗ್ನಿಶಾಮಕ ಠಾಣೆ ಇದ್ದ ಪಾರಂಪರಿಕ ಕಟ್ಟಡ ಕೆಲ ವರ್ಷಗಳ ಹಿಂದೆ ಕುಸಿದು ಬಿದ್ದಿದೆ. ಉಳಿದ ಭಾಗವೂ ಶಿಥಿಲಗೊಂಡಿದೆ. ಹೀಗಾಗಿ, ಹೊಸ ಕಟ್ಟಡ ಅವಶ್ಯಕವಾಗಿದೆ.

ಹಸ್ತ ಪ್ರತಿಗಳಿಗೆ ಡಿಜಿಟಲ್ ಸ್ಪರ್ಶ ಸಿಕ್ಕಿಲ್ಲ:

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತ ಪ್ರತಿಗಳಿಗೆ ಡಿಜಿಟಿಲೀಕರಣ ಯೋಜನೆಯ ಸ್ಪರ್ಶ ಇನ್ನೂ ದೊರೆತಿಲ್ಲ. 1 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಬೇಕಿದೆ. ಇದರಿಂದಾಗಿ ಹಸ್ತಪ್ರತಿಗಳು ಡಿಜಿಟಲ್ ರೂಪ ಪಡೆದುಕೊಳ್ಳಲಿವೆ. ಆದರೆ, ಇದು ಇನ್ನೂ ಟೇಕ್ ಆಫ್ ಆಗಿಲ್ಲ.

ಬುಡಕಟ್ಟು ಮ್ಯೂಸಿಯಂ ಸಕಾರಗೊಂಡಿಲ್ಲ:

ನಗರದ ಹೊರವಲಯದ ದಟ್ಟಗಳ್ಳಿಯಲ್ಲಿರುವ ಬುಡಕಟ್ಟು ಸಂಶೋಧನಾ ಕೇಂದ್ರದ ಆವರಣದಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಉದ್ದೇಶವೇ ಇನ್ನೂ ಸಕಾರಗೊಂಡಿಲ್ಲ. 
ಇದರಿಂದ ರಾಜ್ಯ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವೂ ಆಗಿಲ್ಲ. ಕಳೆದ ವರ್ಷ ಎಚ್.ಡಿ.ಕೋಟೆ ತಾಲೂಕಿನ ಹಾಡಿಗಳಿಗೆ ಭೇಟಿ ನೀಡಿ ಬುಡಕಟ್ಟು ಜನರೊಂದಿಗೆ ಸಂವಾದ ಮಾಡುವ ಸಂದರ್ಭದಲ್ಲಿ ಸಿಎಂ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಅಂತೆಯೇ ಬಜೆಟ್‌ನಲ್ಲೂ ಘೋಷಿಸಿದ್ದರು. ಆದರೆ, ಇದು ಇನ್ನೂ ಘೋಷಣೆಯಾಗಿಯೇ ಉಳಿದಿದೆ.

ನಿರ್ಮಾಣವಾಗದ ಪ್ರಜಾಸೌಧ: 

ಕಬಿನಿ ನದಿಗೆ ಅಡ್ಡಲಾಗಿ ಹಾಗೂ  ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವೂ ಆಗಿಲ್ಲ. ಜಿಲ್ಲೆಯ ಹೊಸ ತಾಲೂಕುಗಳಾದ ಸರಗೂರು ಮತ್ತು ಸಾಲಿಗ್ರಾಮದಲ್ಲಿ ತಾಲೂಕು ಆಡಳಿತಕ್ಕಾಗಿ ಪ್ರಜಾಸೌಧ ಕಟ್ಟಡವೂ ತಲೆಯೆತ್ತಿಲ್ಲ. ಇದೀಗ 6 ಕೋಟಿ ರೂ. ವೆಚ್ಚದಲ್ಲಿ ತಿ.ನರಸೀರಪುರ ತಾಲೂಕು ಕ್ರೀಡಾಂಗಣ ನಿರ್ಮಾಣ ವಿವಾದಕ್ಕೆ ಸಿಲುಕಿಕೊಂಡಿದೆ. ರೇಷ್ಮೆ ಕಾರ್ಖಾನೆಯಲ್ಲಿ ಆವರಣದಲ್ಲಿ ಮರಗಳ ಹನನ ಮಾಡಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಿವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net