

ಕಾನೂನು ಮತ್ತು ಸೇವಾ ನಿಯಮಗಳನ್ನು ಪಾಲಿಸುವುದಷ್ಟೇ ಸರ್ಕಾರಿ ನೌಕರರ ಕರ್ತವ್ಯವಾಗಬಾರದು. ಪ್ರಾಮಾಣಿಕತೆ, ನಿಷ್ಠೆ, ಸಮಯಪಾಲನೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಮೌಲ್ಯಾಧಾರಿತ ಆಡಳಿತ ಸಾಧ್ಯ ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೋಕಾಯುಕ್ತ ಸಂಸ್ಥೆ ಸ್ಥಾಪನೆಯಾಗಿ ಸುಮಾರು ನಾಲ್ಕು ದಶಕಗಳು ಕಳೆದಿದ್ದರೂ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಇಂದಿಗೂ ಸಮಾಜದಲ್ಲಿ ಭ್ರಷ್ಟಾಚಾರ ಮುಂದುವರಿದಿರುವುದು ಕಳವಳಕಾರಿ ಸಂಗತಿ. ಭ್ರಷ್ಟಾಚಾರವನ್ನು ತಡೆಗಟ್ಟಲು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬೇಕು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರಾಮಾಣಿಕತೆ ಎಂದರೆ ಲಂಚ ಪಡೆಯದಿರುವುದಷ್ಟೇ ಅಲ್ಲ. ಕಚೇರಿಗೆ ನಿಗದಿತ ಸಮಯಕ್ಕೆ ಬಂದು ಕೆಲಸ ನಿರ್ವಹಿಸುವುದರ ಜತೆಗೆ, ತಮಗೆ ವಹಿಸಿರುವ ಜವಾಬ್ದಾರಿಯನ್ನು ಅರಿತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಅಗತ್ಯವಿದ್ದಾಗ ಹೆಚ್ಚುವರಿ ಸಮಯ ಮೀಸಲಿಟ್ಟು ಕೆಲಸ ಪೂರ್ಣಗೊಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕರ್ತವ್ಯದ ಅವಧಿಯನ್ನು ಗಡಿಯಾರದ ಸಮಯಕ್ಕೆ ಸೀಮಿತಗೊಳಿಸದೆ, ಕೆಲಸದ ಮಹತ್ವ ಮತ್ತು ತುರ್ತನ್ನು ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಗಳಿರುತ್ತವೆ. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದರ ಜತೆಗೆ ತುರ್ತು ಕಡತಗಳ ವಿಲೇವಾರಿ ಮತ್ತು ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡಬೇಕು. ತಾವು ಜಿಲ್ಲಾ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಗತ್ಯ ಅಂಕಿ-ಅಂಶಗಳನ್ನು ಕಳುಹಿಸಲು ರಾತ್ರಿ 10 ಗಂಟೆಯವರೆಗೂ ಸಿಬ್ಬಂದಿಯೊಂದಿಗೆ ಕೆಲಸ ಮಾಡಿದ್ದನ್ನು ಸ್ಮರಿಸಿದರು.
ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಉದಾಹರಿಸಿದ ಅವರು, ಒಂದು ವರ್ಷದಲ್ಲಿ ಸುಮಾರು 30 ಸಾವಿರ ಪ್ರಕರಣಗಳು ಬಂದಿದ್ದು, ಅವುಗಳಲ್ಲಿ ಸುಮಾರು 22 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ದಿನದ 24 ಗಂಟೆಗಳ ಅವಧಿ ಬದಲಾಗುವುದಿಲ್ಲ. ಲಭ್ಯವಿರುವ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯ ಎಂದರು.
ಸಂವಿಧಾನವು ಎಲ್ಲರಿಗೂ ಸಮಾನತೆ, ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವ ಆಶಯ ಹೊಂದಿದೆ. ಪ್ರತಿಯೊಬ್ಬರಿಗೂ ಉತ್ತಮ ಜೀವನ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾನೂನುಗಳನ್ನು ರೂಪಿಸಿ, ಇಲಾಖೆಗಳ ಮೂಲಕ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ, ಆಸ್ತಿ ರಕ್ಷಣೆ ಹಾಗೂ ನಾಗರಿಕರ ಹಕ್ಕುಗಳ ಸಂರಕ್ಷಣೆಯಲ್ಲಿ ವಿವಿಧ ಇಲಾಖೆಗಳು ಪ್ರಮುಖ ಪಾತ್ರ ವಹಿಸುತ್ತವೆ. ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು, ಜನರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕೆಸಿಎಸ್ಆರ್ ಸೇರಿದಂತೆ ಸೇವಾ ನಿಯಮಗಳ ಚೌಕಟ್ಟಿನೊಳಗೆ ಮಾತ್ರ ತಮ್ಮ ಕರ್ತವ್ಯವನ್ನು ಸೀಮಿತಗೊಳಿಸಿಕೊಳ್ಳಬಾರದು. ಕಾನೂನು ಪಾಲನೆಯೊಂದಿಗೆ ಮಾನವೀಯ ಗುಣಗಳು, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕಾಳಜಿ ಮತ್ತು ಸೇವಾ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಸನ್ನಡತೆ ಮತ್ತು ಪ್ರಾಮಾಣಿಕತೆ ಪರಸ್ಪರ ಬೇರ್ಪಡಿಸಲಾಗದ ಮೌಲ್ಯಗಳಾಗಿವೆ ಎಂದು ಹೇಳಿದರು.
ಪ್ರತಿವರ್ಷ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಜಾಗೃತಿ ಅರಿವು ಸಪ್ತಾಹ ಆಚರಿಸಲಾಗುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31ರ ಅಂಗವಾಗಿ ಪ್ರಾಮಾಣಿಕತೆ ಮತ್ತು ನಿಷ್ಠೆಯ ಮಹತ್ವವನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವರ್ಷದ ಸಪ್ತಾಹದ ಧ್ಯೇಯವಾಕ್ಯ ಸಮೃದ್ಧಿಗಾಗಿ ಪ್ರಾಮಾಣಿಕತೆ ಎಂಬುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಟಿ.ಜೆ. ಉದೇಶ್ ಇದ್ದರು.