ಭಕ್ತಿಗೆ ನೀಡಿರುವ ಆದ್ಯತೆ ಪುಸ್ತಕಗಳಿಗೆ ಕೊಡಲಿಲ್ಲ

  ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಡಾ.ಮಾನಸ, ಮ.ಗು. ಸದಾನಂದಯ್ಯ,  ಎಂ.ಚಂದ್ರಶೇಖರ್,  ಎಲ್.ಶಿವಲಿಂಗಪ್ಪ  ಇದ್ದರು.
ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಡಾ.ಮಾನಸ, ಮ.ಗು. ಸದಾನಂದಯ್ಯ, ಎಂ.ಚಂದ್ರಶೇಖರ್, ಎಲ್.ಶಿವಲಿಂಗಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಕಳವಳ
  • ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ
ಮೈಸೂರು: ಭಾರತದಲ್ಲಿ ಭಕ್ತಿಗೆ ನೀಡಿರುವ ಆದ್ಯತೆಯನ್ನು ಪುಸ್ತಕಗಳಿಗೆ ಕೊಡಲಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಕಳವಳ ವ್ಯಕ್ತಪಡಿಸಿದರು.
 ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಗರದ ರಾಮಾನುಜ ರಸ್ತೆಯ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಸಾಹಿತ್ಯ ಓದುಗರ ಮತ್ತು ಸಾಹಿತ್ಯ ಪ್ರಿಯರ ಸಂಖ್ಯೆ ಕಡಿಮೆ ಇದೆ. ಸಾಹಿತ್ಯದ ಪುಸ್ತಕ ಓದುವ ಸಂಸ್ಕೃತಿ ಈ ದೇಶದಲ್ಲಿ ಪರಂಪರೆ, ಸಂಪ್ರದಾಯವಾಗಿ ಬೆಳೆಯಲಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳು ಜ್ಞಾನವನ್ನು ಬೆಳಕಾಗಿಸಿಕೊಂಡರೆ, ಭಾರತದಲ್ಲಿ ಭಕ್ತಿಯನ್ನು ಬೆಳಕಾಗಿಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪುಸ್ತಕ ಓದುವ ಸಂಪ್ರದಾಯವನ್ನು ಪಾರಂಪರಿಕವಾಗಿ ಬೆಳೆಸಲಿಲ್ಲ. ಇದರಿಂದಾಗಿಯೇ ದೊಡ್ಡ ಮಟ್ಟದಲ್ಲಿ ಓದುಗರು ಸೃಷ್ಟಿಯಾಗಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪೂಜಾ ಸಾಮಗ್ರಿ ಮಾರಾಟ ಮಾಡುವವರು, ದಿನೇ ದಿನೇ ಆರ್ಥಿಕವಾಗಿ ಅಭಿವೃದ್ಧಿಯಾದರೆ, ಸಾಹಿತ್ಯ ಬರಹಗಾರ, ಪ್ರಕಾಶಕ ಈಗಲೂ ಬದುಕು ಸಾಗಿಸಲು ಒದ್ದಾಡುವ ಪರಿಸ್ಥಿತಿಯಿದೆ. ಪುಸ್ತಕ ಓದುವ ಮೂಲಕ ಭಾರತೀಯರು ಜಗತ್ತಿಗೆ ಜ್ಞಾನದ ಬೆಳಕಾಗಬೇಕು ಎಂದು ಹೇಳಿದರು.
ಶಾಲಾ-ಕಾಲೇಜುಗಳ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸಬೇಕಾಗಿದ್ದು, ಇದರೊಂದಿಗೆ ಬದುಕು ಕಟ್ಟಿಕೊಳ್ಳಬಹುದಾದ ಮಾರ್ಗಗಳನ್ನು ಈಗಿನ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಪುಸ್ತಕದ ಅಭಿರುಚಿ ಬೆಳೆಸುವ ಸಲುವಾಗಿ ಕನ್ನಡ ಪುಸ್ತಕ  ಪ್ರಾಧಿಕಾರ ಎರಡು ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಅಂಗಳದಲ್ಲಿ ತಿಂಗಳ ಪುಸ್ತಕ ಎಂಬ ಆಶಯದಲ್ಲಿ ಪ್ರತಿ ತಿಂಗಳು ಒಂದು ಕಾಲೇಜಿನಲ್ಲಿ ಸಾಹಿತ್ಯ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಸಾಹಿತ್ಯದಲ್ಲಿನ ಆಸಕ್ತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
 ಮನೆಗೊಂದು ಗ್ರಂಥಾಲಯ ಆಶಯದಲ್ಲಿ ಮನೆ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಿ ಆ ಮೂಲಕ ಸಾಹಿತ್ಯದ ಬಗೆಗಿನ ಅಭಿರುಚಿ ಉತ್ತೇಜಿಸಲಾಗುತ್ತಿದೆ. ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಮ.ಗು. ಸದಾನಂದಯ್ಯ, ಮನೆಗೊಂದು ಪುಸ್ತಕ ಜಿಲ್ಲಾ ಜಾಗೃತ ಸಮಿತಿ ಮೈಸೂರು ಸಂಚಾಲಕ ಎಂ.ಚಂದ್ರಶೇಖರ್, ಕಲಾವಿದರು ಹಾಗೂ ಲೇಖಕ ಎಲ್.ಶಿವಲಿಂಗಪ್ಪ  ಮತ್ತಿತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net