ವಿಮಾನ ನಿಲ್ದಾಣ ವಿಸ್ತರಣೆ, ರೈಲ್ವೆ ಸೌಕರ್ಯ ವಿಸ್ತರಣೆ ಸಾಧ್ಯ
ಆಸ್ತಿ ತೆರಿಗೆ ಏಕರೂಪ
ಮೈಸೂರು: ಮೈಸೂರನ್ನು ಬೃಹತ್ ಮೈಸೂರನ್ನಾಗಿಸುವ ಸಚಿವ ಸಂಪುಟದ ಸಭೆ ನಿರ್ಧಾರದಿಂದಾಗಿ ನಗರ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ಕೈಗಾರಿಕೆ, ಇನ್ನಿತರ ಆರ್ಥಿಕ ಚಟುವಟಿಕೆಗಳ ದೃಷ್ಟಿಯಿಂದ ಸಮಗ್ರವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಈಗಾಗಲೇ ಮೂಲ ಸೌಕರ್ಯ ದೃಷ್ಟಿಯಿಂದ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳು ಬೃಹತ್ ಮೈಸೂರು ವ್ಯಾಪ್ತಿಗೆ ಬರಲಿದ್ದು, ಎಲ್ಲ ರೀತಿಯ ಅಭಿವೃದ್ಧಿ ಕಾಣಲಿವೆ. ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನವೂ ಹೆಚ್ಚಳವಾಗಲಿದೆ.
ರಸ್ತೆಗಳು ವಿಶಾಲವಾಗಲಿವೆ. ಮೈಸೂರಿಗೆ ಹೊಂದಿಕೊಂಡಂತಿರುವ ನಂಜನಗೂಡು, ಕೆಆರ್‌ಎಸ್, ಶ್ರೀರಂಗಪಟ್ಟಣದಂತಹ ಪ್ರವಾಸೋದ್ಯಮ ಕೇಂದ್ರಗಳು ಅಭಿವೃದ್ಧಿಯಾಗಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಿಸಿದರು.
ಇದಲ್ಲದೆ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆರಂಭ ಮಾಡಲು ಪೂರಕ ವಾತಾವರಣ ನಿರ್ಮಾಣವಾಗಲಿದೆ. ನೋಂದಣಿಯಾಗಿದ್ದರೂ ನಿರ್ವಹಣೆ ರಹಿತವಾಗಿರುವ ಬಡಾವಣೆಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಜಲಶುದ್ಧೀಕರಣ ವ್ಯವಸ್ಥೆ ಆರಂಭಿಸಿ, ಕಲುಷಿತ ನೀರು ಸಂಸ್ಕರಿಸುವ ಕೆಲಸ ನಡೆಯುವ ಕಾರಣ ಅಕ್ಕಪಕ್ಕದ ನದಿಗಳು ಕಲುಷಿತವಾಗುವುದು ತಪ್ಪುತ್ತದೆ ಎಂದರು.
ವಿಮಾನ ನಿಲ್ದಾಣ ವಿಸ್ತರಣೆ, ರೈಲ್ವೆ ಸೌಕರ್ಯ ವಿಸ್ತರಣೆ ಸಾಧ್ಯವಾಗಲಿದೆ. ನಗರ ಮೈಸೂರು ಮಹಾರಾಜರ ನಂತರ ಮತ್ತೆ ವ್ಯವಸ್ಥಿತವಾಗಿ ಬೆಳವಣಿಗೆ ಹೊಂದಲು ಇದು ಕಾರಣವಾಗಲಿದೆ. ಆಸ್ತಿ ತೆರಿಗೆ ಏಕರೂಪವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮುಖಂಡರಾದ ಎನ್.ಡಿ.ಮಮತಾ, ಕೆ.ಎ.ಎಸ್.ಸಿದ್ದಲಿಂಗಪ್ಪ ಇತರರು ಇದ್ದರು.