ಕಲಾ ವಿಭಾಗಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ:ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎನ್.ಮಹಾಲಿಂಗಯ್ಯ ವಿಷಾದ

ಮೈಸೂರು ವಿಭಾಗದ ಇತಿಹಾಸ ಮೌಲ್ಯಮಾಪನ ಕೇಂದ್ರದಲ್ಲಿ ಆಯೋಜಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಎನ್.ಮಹಾಲಿಂಗಯ್ಯ ಉದ್ಘಾಟಿಸಿದರು. ಎಂ.ಪಿ.ನಾಗಮ್ಮ, ತಮ್ಮೇಗೌಡ, ಎಚ್.ಬಿ.ವಾಸು, ಸುದೀಪ್, ಅಶೋಕ್‌ಕುಮಾರ್, ಎಚ್.ಜೆ.ನಾಗರಾಜ್, ಎನ್.ಎಂ.ಶಿವಪ್ರಕಾಶ್ ಇದ್ದರು.
ಮೈಸೂರು ವಿಭಾಗದ ಇತಿಹಾಸ ಮೌಲ್ಯಮಾಪನ ಕೇಂದ್ರದಲ್ಲಿ ಆಯೋಜಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಎನ್.ಮಹಾಲಿಂಗಯ್ಯ ಉದ್ಘಾಟಿಸಿದರು. ಎಂ.ಪಿ.ನಾಗಮ್ಮ, ತಮ್ಮೇಗೌಡ, ಎಚ್.ಬಿ.ವಾಸು, ಸುದೀಪ್, ಅಶೋಕ್‌ಕುಮಾರ್, ಎಚ್.ಜೆ.ನಾಗರಾಜ್, ಎನ್.ಎಂ.ಶಿವಪ್ರಕಾಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಾ ವಿಷಯದ ಮಹತ್ವವನ್ನು ಸಮಾಜಕ್ಕೆ ಸಾರುವ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿನ ಕಡೆಗೆ ಸೆಳೆಯಬೇಕಾಗಿದೆ
  • ವಿದ್ಯಾರ್ಥಿಗಳು ತಂತ್ರಜ್ಞಾನ, ವಿಜ್ಞಾನ ವಿಷಯ ಕಲಿಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ
ಮೈಸೂರು:ಇತ್ತೀಚೆಗೆ ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಭವಿಷ್ಯದಲ್ಲಿ ಕಲಾ ವಿಷಯಗಳನ್ನು ಓದುವ ವಿದ್ಯಾರ್ಥಿಗಳೇ ಕಣ್ಮರೆಯಾಗುವ ಪರಿಸ್ಥಿತಿ ಬರಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎನ್.ಮಹಾಲಿಂಗಯ್ಯ ವಿಷಾದಿಸಿದರು.
ಮೈಸೂರು ವಿಭಾಗದ ಇತಿಹಾಸ ಮೌಲ್ಯಮಾಪನ ಕೇಂದ್ರದಲ್ಲಿ ನಿವೃತ್ತ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಗೌರವ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಎಲ್ಲ ವಿದ್ಯಾರ್ಥಿಗಳು ತಂತ್ರಜ್ಞಾನ, ವಿಜ್ಞಾನ ವಿಷಯ ಕಲಿಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಲಾ ವಿಷಯವನ್ನು ಕಲಿಯುವವರ ಸಂಖ್ಯೆ ಇಳಿಮುಖವಾಗಬಹುದು. ಆದ್ದರಿಂದ ಉಪನ್ಯಾಸಕರು ಕಲಾ ವಿಷಯದ ಬೋಧನೆಯನ್ನು ಆಸಕ್ತಿಕರವಾಗಿಸಿ ಕಲಾ ವಿಷಯದ ಮಹತ್ವವನ್ನು ಸಮಾಜಕ್ಕೆ ಸಾರುವ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿನ ಕಡೆಗೆ ಸೆಳೆಯಬೇಕಾಗಿದೆ ಎಂದು ಸಲಹೆ ನೀಡಿದರು.
ಸರ್ಕಾರಿ ಕಾಲೇಜುಗಳಿಗೆ ಖಾಸಗಿ ಕಾಲೇಜುಗಳ ಎದುರು ಉಳಿವಿನ ಪ್ರಶ್ನೆ ಎದುರಾಗಿದ್ದು, ಸರ್ಕಾರಿ ಕಾಲೇಜುಗಳ ಮಹತ್ವವನ್ನು ಸಾರುವಂತಹ ಸಾರ್ಥಕ ಕೆಲಸ ಉಪನ್ಯಾಸಕರು ಮಾಡಬೇಕಿದೆ. ಮೌಲ್ಯಮಾಪನದಲ್ಲಿ ಸದಾ ಎಚ್ಚರಿಕೆಯಿಂದ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದರ ಜತೆಗೆ ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ಜಾಗೃತರಾಗಿ ಇರಬೇಕು ಎಂದು ತಿಳಿ ಹೇಳಿದರು.
ಮೈಸೂರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ಅವರು ನಿವೃತ್ತ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಸನ್ಮಾನಿಸಿದರು.
ಮುಖ್ಯ ಪರೀಕ್ಷಕರಾದ ತಮ್ಮೇಗೌಡ, ಮೌಲ್ಯಮಾಪನ ಶಿಬಿರದ ವೀಕ್ಷಕ ಸುದೀಪ್, ಮೈಸೂರು ಜಿಲ್ಲಾ ಇತಿಹಾಸ ವೇದಿಕೆ ಅಧ್ಯಕ್ಷ ಎಚ್.ಬಿ.ವಾಸು, ಶಿಬಿರಾಧಿಕಾರಿ ಅಶೋಕ್ ಕುಮಾರ್, ಕೊಡಗಿನ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಜೆ.ನಾಗರಾಜ್, ಚಾಮರಾಜನಗರ ಜಿಲ್ಲೆಯ ಕುದೇರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ.ಶಿವಪ್ರಕಾಶ್, ಹಾಸನ ಜಿಲ್ಲೆಯ ಉಪನ್ಯಾಸಕ ಕುಮಾರ್, ಸಂಘಟಕರಾದ ಎಲ್.ಉಮೇಶ್, ಅಂಕೇಗೌಡ, ಮಾಣಿಕ್ಯಂ,ನಾಗೇಂದ್ರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net