ಕಲಿಕೆಯ ಪ್ರತಿಯೊಂದು ಹಂತವನ್ನೂ ಗೌರವಿಸಿ

* ರಾಮಕೃಷ್ಣ ಆಶ್ರಮ ಅಧ್ಯಕ್ಷ ಸ್ವಾಮಿ ಯುಕ್ತೇಶಾನಂದಜೀ ಸಲಹೆ * ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನೂತನ ಕಟ್ಟಡ ಉದ್ಘಾಟನೆ
The new buildings of the city's Seshadripuram Educational Institute were inaugurated by Shri Nirmalanandanath Swamiji. Swami Yukteshanandaji, Swami Nirbhayanandaji, Shri Someshwaranath Swamiji, Dr. Wooday P. Krishna and others were present.
ನಗರದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡಗಳನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಸ್ವಾಮಿ ಯುಕ್ತೇಶಾನಂದಜೀ, ಸ್ವಾಮಿ ನಿರ್ಭಯಾನಂದಜೀ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಡಾ.ವೂಡೇ ಪಿ.ಕೃಷ್ಣ ಇತರರು ಹಾಜರಿದ್ದರು.
Published on: 

ಶಿಕ್ಷಣವೆಂದರೆ ಕೇವಲ ಅಂಕ, ಪದವಿ ಪಡೆಯುವುದಲ್ಲ. ಕಲಿಕೆಯ ಪ್ರತಿಯೊಂದು ಹಂತವನ್ನೂ ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಯುಕ್ತೇಶಾನಂದಜೀ ಹೇಳಿದರು.

ನಗರದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿಜ್ಞಾನ, ವಾಣಿಜ್ಯ, ಕಲೆ ಸೇರಿದಂತೆ ಎಲ್ಲ ಜ್ಞಾನಶಾಖೆಗಳೂ ಪವಿತ್ರವಾದವು ಎಂದರು.

ವಿದ್ಯಾರ್ಥಿಗಳು ನೆಲದ ಮೇಲೆ ಪುಸ್ತಕ, ಪೆನ್ನು ಅಥವಾ ಕಾಗದ ಬಿದ್ದಿರುವುದನ್ನು ಕಂಡರೆ ಕಾಲಿನಿಂದ ತುಳಿಯಬಾರದು. ಅವುಗಳನ್ನು ಗೌರವದಿಂದ ಎತ್ತಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅವು ವಿದ್ಯೆ ಮತ್ತು ಸರಸ್ವತಿಯ ಸಂಕೇತ. ಬೋಧಿಸುವ ಗುರುಗಳು, ಶಿಕ್ಷಣ ನೀಡುವ ಸಂಸ್ಥೆ ಹಾಗೂ ಕಲಿಕೆಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನಲ್ಲೂ ದೈವ ಸನ್ನಿಧಿ ಇರುತ್ತದೆ ಎಂಬ ಭಾವನೆ ಇರಬೇಕೆಂದರು.

ವಿನಯವಂತಿಕೆ ರೂಢಿಸಿಕೊಳ್ಳಿ:

‘ವಿದ್ಯಾ ದದಾತಿ ವಿನಯಂ’ ಎಂಬಂತೆ ನಿಜವಾದ ವಿದ್ಯೆ ಹೊಂದಿರುವ ವ್ಯಕ್ತಿಯಲ್ಲಿ ವಿನಯ ಸಂಪನ್ನನಾಗಿರುತ್ತಾನೆ. ವಿನಯವಿರುವ ಮನದಲ್ಲಿ ಇನ್ನಷ್ಟು ಉನ್ನತ ಜ್ಞಾನ ಸಂಗ್ರಹವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯೊಂದಿಗೆ ವಿನಯವಂತಿಕೆಯನ್ನೂ ರೂಢಿಸಿಕೊಳ್ಳಬೇಕು ಎಂದು ಯುಕ್ತೇಶಾನಂದರು ಸಲಹೆ ನೀಡಿದರು.

* ಅವಲೋಕನ ಅಗತ್ಯ:

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕುರಿತು ಶಿಕ್ಷಕರು, ಪಾಲಕರು ಮತ್ತು ಆಡಳಿತ ವ್ಯವಸ್ಥೆಯಲ್ಲಿರುವವರಿಗೂ ಆತಂಕವಿದೆ. ಯುವಜನರು ಯಾವ ರೀತಿ ಶಿಕ್ಷಣ ಪಡೆಯುತ್ತಿದ್ದಾರೆ, ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆಯೇ ಅಥವಾ ಅಂಕ ಗಳಿಕೆಯನ್ನೇ ಅಂತಿಮ ಗುರಿಯಾಗಿಸಿಕೊಂಡಿದ್ದಾರೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಯುಕ್ತೇಶಾನಂದರು ಹೇಳಿದರು.

ಬಡವರಿಗೆ ಮಾತ್ರವಲ್ಲ, ಶ್ರೀಮಂತರಿಗೂ ಜ್ಞಾನದ ಬೆಳಕು ಅಗತ್ಯವಿದೆ ಎಂದು ಸ್ವಾಮಿ ವಿವೇಕಾನಂದರು ನೀಡಿದ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಪ್ರಸ್ತುತ ಶಿಕ್ಷಣದಲ್ಲಿ ತೋರಿಕೆ ಮತ್ತು ಪ್ರತಿಷ್ಠೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಕಳವಳಕಾರಿ ಸಂಗತಿ. ಶಿಕ್ಷಣವು ಉತ್ತಮ ವ್ಯಕ್ತಿತ್ವ ರೂಪಿಸುವುದರೊಂದಿಗೆ ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರನ್ನು ಸೃಷ್ಟಿಸಬೇಕು ಎಂದು ಅವರು ಪ್ರತಿಪಾದಿಸಿದರು.

ನೂತನ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಗದಗಿನ ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದಜೀ, ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ, ಉಪಾಧ್ಯಕ್ಷ ಟಿ.ಎಸ್. ಹೆಂಜಾರಪ್ಪ, ಕೋಶಾಧಿಕಾರಿ ಬಿ.ಎಂ.ಪಾರ್ಥಸಾರಥಿ, ಸಹ ಕಾರ್ಯದರ್ಶಿ ಎಸ್.ಶೇಷನಾರಾಯಣ, ಸಹಾಯಕ ಕಾರ್ಯದರ್ಶಿ ಎಂ.ಎಸ್.ನಟರಾಜ್ ಇದ್ದರು.