ಶ್ರೀ ಸುತ್ತೂರು ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಕಾರ್ಯಕ್ರಮವನ್ನು ಡಿಸಿಪಿ(ಕಾನೂನು-ಸುವ್ಯವಸ್ಥೆ) ಡಾ.ಹರ್ಷಾ ಪ್ರಿಯಂವದ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಎಂ.ಕೆ.ಸವಿತಾ ಇದ್ದರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಿಸಿಪಿ ಡಾ.ಹರ್ಷಾ ಪ್ರಿಯಂವದ ಅಭಿಪ್ರಾಯ
ವಚನ ಕಾರ್ಯಕ್ರಮ
ಮೈಸೂರು:
ದುಶ್ಚಟಗಳನ್ನು ಬಿಟ್ಟು ಅಧ್ಯಾತ್ಮಕ ಕಡೆ ಸಾಗುವ ಮಾರ್ಗವನ್ನು ಶ್ರಾವಣ ಮಾಸ ಪ್ರತಿಯೊಬ್ಬರಿಗೂ ಕರುಣಿಸಲಿದೆ ಎಂದು ಡಿಸಿಪಿ(ಕಾನೂನು-ಸುವ್ಯವಸ್ಥೆ) ಡಾ.ಹರ್ಷಾ ಪ್ರಿಯಂವದ ಹೇಳಿದರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನು ಮೂಲತಃ ಜಾರ್ಖಂಡ್ ರಾಜ್ಯದವಳು. ಆದರೂ ನನಗೆ ಶ್ರಾವಣ ಮಾಸದ ಆಚರಣೆ ಹೊಸದಲ್ಲ. ನಮ್ಮ ರಾಜ್ಯದಲ್ಲೂ ಇದು ಸಡಗರದಿಂದ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಶಿಸ್ತಿನ ಜೀವನದ ಕಡೆಗೆ ಸಾಗಲು ದೇಶದ ಪ್ರತಿ ರಾಜ್ಯಗಳಲ್ಲೂ ಆಚರಿಸುತ್ತಾರೆ ಎಂದರು.
ದುಶ್ಚಟಗಳನ್ನು ಬಿಟ್ಟು ಅಧ್ಯಾತ್ಮದ ಕಡೆ ಸಾಗುವ ಮಾರ್ಗವಾದ ಶ್ರಾವಣ ಮಾಸ ಪ್ರತಿಯೊಬ್ಬರಿಗೂ ಸುಖ ಶಾಂತಿ ತಂದುಕೊಡಲಿದೆ. ಮುಂದಿನ ಒಂದು ತಿಂಗಳು ಮನೋಬಲ ವೃದ್ಧಿಗಾಗಿ ಸುತ್ತೂರು ಮಠದಲ್ಲಿ ಸಾಂಸ್ಕೃತಿಕವಾಗಿ ಪ್ರವಚನ ನಡೆಯಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಮಾತನಾಡಿ, ಒತ್ತಡದ ಜೀವನದಲ್ಲಿ ಸತ್ಸಂಗ, ಧ್ಯಾನ ಹಾಗೂ ಗುರುಗಳ ಆಶೀರ್ವಾದದಿಂದ ಮಾನಸಿಕಬಲ, ನೈತಿಕ ಶಕ್ತಿ ದೊರೆಯುತ್ತದೆ. ಇದರಿಂದ ಸವಾಲುಗಳು, ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.
ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡದಲ್ಲಿ ಸಿಲುಕಿಕೊಂಡಿದ್ದಾರೆ. ಕೆಲ ನಿಮಿಷಗಳ ಕಾಲವಾದರೂ ಆಧ್ಯಾತ್ಮಿಕ ವಾತಾವರಣದಲ್ಲಿ ಕಳೆದರೆ ಮಾನಸಿಕ ಒತ್ತಡ ನಿವಾರಣೆಯಾಗಲಿದೆ. ಮತ್ತೆ ಉತ್ಸಾಹದಿಂದ ಕರ್ತವ್ಯಕ್ಕೆ ಮರಳಲು ಸಾಧ್ಯವಾಗುತ್ತದೆ ಎಂದರು.
ಮಹಿಳೆಯರಿಗೆ ಜವಾಬ್ದಾರಿ ನಿರ್ವಹಿಸುವಾಗ ಅನೇಕ ಆತಂಕ, ಸವಾಲುಗಳು ಎದುರಾಗುತ್ತವೆ. ಆದರೆ, ಸತ್ಸಂಗ ಮತ್ತು ಧ್ಯಾನದ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ಪ್ರತಿ ಕೆಲಸವನ್ನೂ ಯೋಜನಾಬದ್ಧವಾಗಿ ನಿರ್ವಹಿಸಿದರೆ ಒತ್ತಡ ಕಡಿಮೆಯಾಗುತ್ತದೆ ಎಂದರು.
ಲಕ್ಕಣ್ಣ ದಂಡೇಶ ವಿರಚಿತ ‘ಶಿವತತ್ವ ಚಿಂತಾಮಣಿ’ ಕುರಿತು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಪ್ರವಚನ ನೀಡಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಇದ್ದರು