ಗಿರಿಜನರ ಮರಣಶಾಸನ ಕಸ್ತೂರಿ ರಂಗನ್ ವರದಿ

ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿದರು. ಕೊಳವಿಗೆ ಜಯಪ್ಪ, ವಿಠಲ್ ನಾಣಾಚ್ಚಿ, ಜಯಪ್ಪ, ಡಾ.ಎಸ್.ಶ್ರೀಕಾಂತ್ ಇತರರಿದ್ದರು.
ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಮಾತನಾಡಿದರು. ಕೊಳವಿಗೆ ಜಯಪ್ಪ, ವಿಠಲ್ ನಾಣಾಚ್ಚಿ, ಜಯಪ್ಪ, ಡಾ.ಎಸ್.ಶ್ರೀಕಾಂತ್ ಇತರರಿದ್ದರು.
Published on
ಹುಣಸೂರು : ಪಶ್ಚಿಮ ಘಟ್ಟಗಳ ರಕ್ಷಣೆಯ ಹೆಸರಲ್ಲಿ ಆದಿವಾಸಿಗಳ ಪರಂಪರೆಯ ಹಕ್ಕಿಗೆ ಮುಳ್ಳಾಗಲಿರುವ ಕಸ್ತೂರಿ ರಂಗನ್ ವರದಿ ಆದಿವಾಸಿಗಳ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಆತಂಕ ವ್ಯಕ್ತಪಡಿಸಿದರು.
ನಗರದ ಡೀಡ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಆದಿವಾಸಿ ಮುಖಂಡರು ಮತ್ತು ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ವರದಿ ಕೈಬಿಡುವಂತೆ ಕಳೆದ 5-6 ವರ್ಷಗಳಿಂದಲೂ ಆಗ್ರಹಿಸುತ್ತಲೇ ಬಂದಿದ್ದರೂ ಆಳುವ ಸರ್ಕಾರಗಳು ಗಮನಿಸುತ್ತಿಲ್ಲ. ಈಗಾಗಲೇ ವನ್ಯಜೀವಿ ರಕ್ಷಣೆ ಹೆಸರಲ್ಲಿ ಜಾರಿಗೊಂಡ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದ ಆದಿವಾಸಿಗಳನ್ನು ಅರಣ್ಯಗಳಿಂದ ಒಕ್ಕಲೆಬ್ಬಿಸಿ ಕೂಲಿಕರರನ್ನಾಗಿ ಮಾಡಲಾಗಿದೆ. ಆದಿವಾಸಿಗಳ ಸ್ವಾಭಿಮಾನದ ಬದುಕನ್ನು ಹರಣ ಮಾಡಲಾಗಿದೆ. ಆದಿವಾಸಿ ಅರಣ್ಯ ಹಕ್ಕು ಕಾಯ್ದೆ 2006, ಆದಿವಾಸಿ ಪಂಚಾಯತ್ ಕಾಯ್ದೆ- ಪೆಸಾ 1996, ಕರ್ನಾಟಕ ಹೈ ಕೋರ್ಟ್ ಆದೇಶ 2009, ಪ್ರೊ.ಮುಜಾಫರ್ ಅಸ್ಸಾದಿ ವರದಿ 2006 ಮತ್ತು 2014 ಅದಿವಾಸಿಗಳಿಗೆ ಭರವಸೆ ಮೂಡಿಸಿರುವ ಹೊತ್ತಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದ ಆದಿವಾಸಿಗಳು, ರೈತರಿಗೆ ಮರಣ ಶಾಸನವಾಗಿದೆ ಎಂದರು.
ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಒತ್ತಡ ಹೇರಿ ವರದಿ ಜಾರಿ ಆಗದಂತೆ ತಡೆದು,ಆದಿವಾಸಿ ಪ್ರದೇಶಗಳ ಕಾಡುಗಳನ್ನು 5ನೇ ಅನುಸೂಚಿತ ಪ್ರದೇಶ ಎಂದು ಘೋಷಿಸಿ ಅರಣ್ಯಹಕ್ಕು ಕಾಯ್ದೆ, ಪೆಸಾ ಕಾಯ್ದೆ, ಹೈ ಕೋರ್ಟ್ ಆದೇಶ, ಅಸ್ಸಾದಿ ವರದಿ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಆದಿವಾಸಿಗಳಿಗೆ ನಿಜವಾದ ಸ್ವಾತಂತ್ರ್ಯ ದೊರಕಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಪರಿಶಿಷ್ಟ ಪಂಗಡದ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಹಾಗೂ ಕಂದಾಯ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಆದಿವಾಸಿ ಅಭಿವೃದ್ಧಿ ಮಂಡಳಿ ರಚಿಸಬೇಕೆಂದು ಒತ್ತಾಯಿಸಿದರು.
ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಮಾತನಾಡಿದರು.
ಸಭೆಯಲ್ಲಿ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಜೆ.ಡಿ.ಜಯಪ್ಪ, ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ, ಗಿಡಮೂಲಿಕೆ ತಜ್ಞೆ ಮಾಸ್ತಮ್ಮ, ಬೆಟ್ಟಕುರುಬ ಪಾರಂಪರಿಕ ಸಂಘದ ಎಚ್.ಡಿ.ಕೋಟೆ ವಿಠಲ್ ನಾಣಾಚ್ಚಿ, ಹಾಡಿ, ಅರಣ್ಯ ಹಕ್ಕು ಸಮಿತಿಗಳ ಒಕ್ಕೂಟದ ಅಧ್ಯಕ್ಷ ಶಿವಣ್ಣ, ವಿಜಯಗಿರಿ ಭೂಮಿ ದಾರರ ಅಧ್ಯಕ್ಷ ಬಸವರಾಜ್, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net