ನಗರೀಕರಣ ಪ್ರಭಾವ ಜಾನಪದಕ್ಕೆ ಅಪಾಯ : ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ವಿಷಾದ
ಕರ್ನಾಟಕ ಜಾನಪದ ಅಕಾಡೆಮಿಯಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಪಿ.ಕೆ.ರಾಜಶೇಖರ ಚಾಲನೆ ನೀಡಿದರು. ಡಾ.ಗೊಲ್ಲಹಳ್ಳಿ ಶಿವಪ್ರಸಾದ್, ಎನ್‌ನಮೃತಾ, ಮುನಿರಾಜು, ಮೈಸೂರು ಉಮೇಶ್, ದೇವಾನಂದ ವರಪ್ರಸಾದ್, ಮೈಸೂರು ಜಿ.ಗುರುರಾಜ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಮ್ಮ ಜೀವನದ ಪ್ರತಿಯೊಂದರಲ್ಲೂ ಜಾನಪದವಿದ್ದು ಅದನ್ನು ಕಾಪಾಡಬೇಕಿದೆ
ಇತ್ತೀಚಿನ ದಿನಗಳಲ್ಲಿ ಗ್ರಾಮಗಳು ನಗರಗಳಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಜಾನಪದ ಅಪಾಯ ಎದುರಿಸುತ್ತದೆ
ಜಾನಪದವನ್ನು ಉಳಿಸಲು ಶಾಸ್ತ್ರೀಯವಾಗಿ ಸಂಗ್ರಹಿಸಬೇಕಿದೆ
ಮೈಸೂರು: ಜಾನಪದ ವಿಷಯವಾಗಿ ಕ್ಷೇತ್ರಕಾರ್ಯ ಮಾಡಿ ಸಂಪಾದಿಸಿದ ಕೃತಿಗಳನ್ನು ಮುದ್ರಣ ಮಾಡಲು ಸರ್ಕಾರ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿಯಿಂದ ನಗರದ ಕಲಾಮಂದಿರದ ಕಿರುರಂಗಮಂದಿರಲ್ಲಿ ಆಯೋಜಿಸಿದ್ದ ಶರಣೆಂದೆ ಭೂಮಿ ತಾಯಿಗೆ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲೇ ಸಾಂಸ್ಕೃತಿಕವಾಗಿ ಶ್ರೀಮಂತವಾಗಿ ರಾಜ ಎನಿಸಿಕೊಂಡಿರುವುದು ಜನಪದ ಕಲೆ. ಇಂತಹ ಜಾನಪದವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ನಮ್ಮ ಬದಕಿನಲ್ಲಿ ಗಾದೆ, ಒಗಟು, ಕಥೆಗಳು, ಐತಿಹ್ಯಗಳು, ಪುರಾಣಗಳು, ಅಡುಗೆಗಳು, ಉಡುಗೆಗಳು, ವ್ಯವಸ್ಯಾಯ ಸೇರಿದಂತೆ ಪ್ರತಿಯೊಂದರಲ್ಲೂ ಜಾನಪದವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮಗಳು ನಗರಗಳಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಜಾನಪದ ಅಪಾಯ ಎದುರಿಸುತ್ತದೆ ಎಂದು ವಿಷಾದಿಸಿದರು.
ನಮ್ಮಲ್ಲಿ 18 ಕುಲಕಬುಗಳಿದ್ದು, ಅವೆಲ್ಲವೂ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಇದನ್ನೆಲ್ಲ ಶಾಸ್ತ್ರೀಯವಾಗಿ ಸಂಗ್ರಹಿಸಬೇಕಿದೆ. ಅದಕ್ಕಾಗಿ ಸಂಪಾದನೆ ಕಾರ್ಯ ಮಾಡಬೇಕಿದ್ದು, ಅದಕ್ಕಾಗಿ ಕ್ಷೇತ್ರ ಕಾರ್ಯ ಕೈಗೊಳ್ಳುವ ಕೆಲಸ ಆಗಬೇಕು. ಹಿಂದೆ ಇದ್ದ ಅನೇಕ ಹೆಸರಾಂತ ಜಾನಪದ ವಿದ್ವಾಂಸರು ಕ್ಷೇತ್ರ ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈಗ ಕ್ಷೇತ್ರ ಕಾರ್ಯ ಮಾಡಿದರೂ ಅದನ್ನು ಪ್ರೋತ್ಸಾಹಿಸುವವರು ಇಲ್ಲವಾಗಿದೆ. ಸಂಪಾದಿಸಿ ತಂದ ಕೃತಿಗಳನ್ನು ಮುದ್ರಣಗೊಳಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಕ್ಷೇತ್ರ ಕಾರ್ಯವೇ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಅಕಾಡೆಮಿ ಸಂಪಾದಿಸಿ ತಂದ ಕೃತಿಗಳನ್ನು ಮುದ್ರಣಗೊಳಿಸಬೇಕು. ಅದಕ್ಕಾಗಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಇದರಿಂದ ನಮ್ಮ ಜಾನಪದ ಶಾಸ್ತ್ರೀಯವಾಗಿ ಸಂಗ್ರಹಿಸಿ ಉಳಿಸಲು ಸಾಧ್ಯ. ಜಾನಪದ ಕ್ಷೇತ್ರದಲ್ಲಿ ಬೇಕಾದಷ್ಟು ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಅಕಾಡೆಮಿಗೆ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಒದಗಿಸದಿರುವ ಕಾರಣದಿಂದ ಹಾಗೂ ಯಾರೇ ಹಣ ಸಂಗ್ರಹಿಸಿದರೂ ಮತ್ತು ಜಾನಪದದಲ್ಲಿ ಯಾವುದೇ ಪ್ರಕಾರವನ್ನು ಸಂಗ್ರಹಿಸಲಿ ಅದನ್ನು ನಾನು ಪ್ರಕಟಿಸುತ್ತೀನಿ ಎನ್ನುವ ಧೈರ್ಯ ಅಕಾಡೆಮಿಗೆ ಬರಬೇಕು. ಇಲ್ಲದಿದ್ದರೆ ಅಕಾಡೆಮಿ ಇದ್ದೂ ನಿಷ್ಪ್ರಯೋಜಕವಾಗುತ್ತದೆ ಎಂದರು.
ಕನ್ನಡದಲ್ಲಿ ಇಂದು ಹತ್ತಕ್ಕೂ ಹೆಚ್ಚು ಜನಪದ ಮಹಾಕಾವ್ಯಗಳಿವೆ ಎಂಬದುನ್ನು ವಿವಿಧ ಸ್ಥಳಗಳಲ್ಲಿರುವ ಜಾನಪದ ವಿದ್ವಾಂಸರು ಪ್ರಕಟಿಸಿದ್ದಾರೆ. ನಮ್ಮಲ್ಲೂ ಮಂಟೆಸ್ವಾಮಿ, ಮಹದೇಶ್ವರ, ಮಹಾಭಾರತ, ರಾಮಾಯಣ, ಜುಂಜಪ್ಪ, ಯಲ್ಲಮ್ಮ ದೇವಿ ಸೇರಿದಂತೆ ಹಲವು ಮಹಾಕಾವ್ಯಗಳು ಪ್ರಕಟವಾಗಿದೆ ಎಂಬ ಹೆಮ್ಮೆ ನಮ್ಮದು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್, ಅಕಾಡೆಮಿಯ ಕುಲಸಚಿವೆ ಎನ್.ನಮೃತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮುನಿರಾಜು, ಅಕಾಡೆಮಿ ಸದಸ್ಯರಾದ ಮೈಸೂರು ಉಮೇಶ್, ದೇವನಂದ ವರಪ್ರಸಾದ್, ಸಂಚಾಲಕ ಮೈಸೂರು ಜಿ.ಗುರುರಾಜ್ ಇದ್ದರು.