‘ಗ್ರಂಥ ಕಥಾ’ ಅನಿಮೇಷನ್ ಸದುಪಯೋಗವಾಗಲಿ

ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎನ್.ಲೋಕನಾಥ್ ಸಲಹೆ
The Granth Katha animation film and the book Veerabhadra Vijaya Champu were released at a function organized by the Institute of Oriental Studies at the Infosys auditorium in the city.
ನಗರದ ಇನ್ಫೋಸಿಸ್ ಸಭಾಂಗಣದಲ್ಲಿ ಪ್ರಾಚ್ಯ ವಿದ್ಯಾ ಸಂಶೋಧನಾಲಯ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗ್ರಂಥ ಕಥಾ ಅನಿಮೇಷನ್ ಫಿಲಂ ಮತ್ತು ವೀರಭದ್ರ ವಿಜಯ ಚಂಪೂ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎನ್.ಲೋಕನಾಥ್, ಒಆರ್‌ಐ ನಿರ್ದೇಶಕ ಡಾ.ಡಿ.ಪಿ.ಮಧುಸೂದನ ಆಚಾರ್ಯ, ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ ಸತೀಶ ಬಿ.ನಂಜಪ್ಪ, ಆಯುಕ್ತ ಎ. ದೇವರಾಜು, ಡಾ.ಪಾರ್ವತಿ, ಪ್ರೊ.ಎನ್.ನಾಗರಾಜ್ ಇದ್ದರು.
Published on: 

ಅಪರೂಪದ ಹಸ್ತಪ್ರತಿಗಳು, ತಾಳೆಗರಿ ಮತ್ತು ಸಾಹಿತ್ಯ ಕೃತಿಗಳ ಸಂಗ್ರಹ ಹೊಂದಿರುವ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯ (ಒಆರ್‌ಐ)ವು ಜಾಗತಿಕ ಮಟ್ಟದಲ್ಲಿ ಪ್ರಾಚೀನ ಜ್ಞಾನ ಪರಂಪರೆಯ ಅರಿವು ಮೂಡಿಸುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎನ್.ಲೋಕನಾಥ್ ಹೇಳಿದರು.

ನಗರದ ಇನ್ಫೋಸಿಸ್ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗ್ರಂಥ ಕಥಾ ಅನಿಮೇಷನ್ ಫಿಲಂ ಮತ್ತು ವೀರಭದ್ರ ವಿಜಯ ಚಂಪೂ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವರ್ಗದ ನಾಗರಿಕರಿಗೂ ಆಪ್ತವಾಗುವಂತೆ ನಿರ್ಮಾಣ ಮಾಡಿರುವ ಅನಿಮೇಷನ್ ಕಿರುಚಿತ್ರವು ಹಸ್ತಪ್ರತಿಗಳ ಬಗೆಗಿನ ಪರಿಚಯ, ಜಾಗೃತಿ ಮತ್ತು ಅರಿವು ಮೂಡಿಸಲಿದೆ. ಕನ್ನಡ ಮತ್ತು ಇಂಗ್ಲಿಷ್ ಅವತರಣಿಕೆಗಳು ಶೀಘ್ರದಲ್ಲಿಯೇ ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದ್ದು, ಸಮಗ್ರ ವಿಶ್ವದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.

ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ ಮತ್ತು ಮೈಸೂರು ಕ್ಯಾಂಪಸ್ ಮುಖ್ಯಸ್ಥ ಸತೀಶ ಬಿ.ನಂಜಪ್ಪ ಮಾತನಾಡಿ, ಪ್ರಾಚೀನ ಹಸ್ತಪ್ರತಿಗಳ ಅರಿವು ಇಲ್ಲದಿದ್ದರೆ ಪೂರ್ವಜರ ಜ್ಞಾನ ಸಂಪತ್ತು ನಮಗೆ ಲಭಿಸುವುದಿಲ್ಲ. ಹೊಸ ಜ್ಞಾನದ ಅನ್ವೇಷಣೆ ಜತೆಗೆ ಹಳೆಯ ಜ್ಞಾನ ಭಂಡಾರದ ರಕ್ಷಣೆಯೂ ಆಗಬೇಕು. ಈ ನಿಟ್ಟಿನಲ್ಲಿ ತಾಳೆಗರಿಗಳ ಡಿಜಿಟಲೀಕರಣ ಅಗತ್ಯವಾಗಿದೆ. ಸಂಸ್ಕೃತಿ ಮತ್ತು ತಂತ್ರಜ್ಞಾನದ ಸಮ್ಮಿಲನವು ಯುವಜನರ ಕಣ್ಣು ತೆರೆಸಬೇಕು. ಈ ನಿಟ್ಟಿನಲ್ಲಿ ಒಆರ್‌ಐ ಮಹತ್ವದ ಸಾಧನೆ ಮಾಡುತ್ತಿದೆ ಎಂದರು.

ಪುರಾತತ್ತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಮಾತನಾಡಿ, ಇಂದಿನ ಕಾಲಕ್ಕೆ ಅಗತ್ಯವಿರುವ ಅನಿಮೇಷನ್ ಕಿರುಚಿತ್ರವು ಲೋಕದ ಯಾವುದೇ ಭಾಗದವರಿಗೂ ಅರ್ಥವಾಗುವ ನಿಟ್ಟಿನಲ್ಲಿ ಮೂಡಿ ಬಂದಿದೆ. ಭಾರತದಲ್ಲಿ ಇದು ಪ್ರಥಮ ಯತ್ನವಾಗಿರುವುದು ವಿಶೇಷ. ಒಆರ್‌ಐ ಈ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ ಎಂದರು.

ಒಆರ್‌ಐ ನಿರ್ದೇಶಕ ಡಾ.ಡಿ.ಪಿ.ಮಧುಸೂದನ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಂಥ ಕಥಾ ಅನಿಮೇಷನ್ ಫಿಲಂ ನಿರ್ಮಾಣಕ್ಕೆ ಇನ್ಫೋಸಿಸ್ ಫೌಂಡೇಷನ್ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಗಳು ಮಹತ್ವದ ನೆರವು ನೀಡಿವೆ ಎಂದರು. ದೇಶದಲ್ಲೇ ಮೊದಲ ಬಾರಿಗೆ ಹಸ್ತಪ್ರತಿಗಳ ಬಗ್ಗೆ ಅರಿವು ಮೂಡಿಸುವ ಫಿಲಂ ನಿರ್ಮಾಣಕ್ಕೆ ನಿರ್ದೇಶಕ ಅವನೀಶ ಪಾಠಕ್, ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಮುಖ್ಯಸ್ಥ ಸಂತೋಷ ಅನಂತಪುರ, ಡಿಸಿಎಚ್‌ಆರ್ ಕೆ. ರಾಘವೇಂದ್ರ, ಟೆಕ್ನಾಲಜಿ ಲೀಡ್ ಕೀರ್ತಿರಾಜ್ ಅವರ ಸಹಕಾರ ಅನನ್ಯವಾಗಿದೆ ಎಂದು ಸ್ಮರಿಸಿದರು.

ಸಾಧಕರಿಗೆ ಸನ್ಮಾನ:

ಇದೇ ವೇಳೆ ಗ್ರಂಥ ಕಥಾ ನಿರ್ದೇಶಕ ಅವನೀಶ ಪಾಠಕ್, ನಿರ್ಮಾಣ ಸಹಾಯಕ ಡಿ.ವಿ.ಸಾಗರ್, ಚಿತ್ರಕಥೆ ರಚಿಸಿದ ಡಾ.ದಿದ್ದಿಗಿ ವಂಶಿಕೃಷ್ಣ, ಡಾ.ಕೃಷ್ಣ ನಾಗಸಂಪಿಗೆ, ಪರಿಕಲ್ಪನೆ ನೀಡಿದ ವಿದ್ವಾನ್ ವೆಂಕಟೇಶ ಕುಲಕರ್ಣಿ, ಹಿನ್ನೆಲೆ ಧ್ವನಿ ನೀಡಿದ ಕಲಾವಿದರಾದ ಶ್ರೀನಿವಾಸ ಕಾರಂತ, ಪವನ್ ಆರ್.ರಾವ್, ಪ್ರಮೋದ ಹೆಬ್ಬಣಿ, ಬಾಲ ಪ್ರತಿಭೆ ಹರಿ ಪಿ.ರಾವ್ ಅವರನ್ನು ಗೌರವಿಸಲಾಯಿತು.

ಒಆರ್‌ಐ ಉಪ ನಿರ್ದೇಶಕಿ ಡಾ.ಪಾರ್ವತಿ, ವಿವಿ ಪರೀಕ್ಷಾಂಗ ಕುಲ ಸಚಿವ ಪ್ರೊ.ಎನ್.ನಾಗರಾಜ್, ಗ್ರಂಥ ಸಂಶೋಧಕರಾದ ಡಾ.ಎಸ್.ಸಿ.ಶೋಭಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net