ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಶಿಕ್ಷಕರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿ.ಸೋಮಶೇಖರ್, ಡಾ.ಟಿ.ಪದ್ಮಶ್ರೀ, ಜಿ.ಮಾರಹಳ್ಳಿ ರಂಗಸ್ವಾಮಿ, ಡಾ.ನಾ.ಗಂಗಾಧರಪ್ಪ, ಪ್ರಭಾಶಾಸ್ತ್ರಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾಜಿ ಶಿಕ್ಷಣ ಸಚಿವ ಬಿ.ಸೋಮಶೇಖರ್ ಆರೋಪ
ಮೈಸೂರು: ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವಳಿಯಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಸೊರಗುತ್ತಿವೆ. ಇದಕ್ಕೆ ಸರ್ಕಾರವೇ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ನನ್ನವ್ವ ಸಾಂಸ್ಕೃತಿಕ ಕಲಾತಂಡದಿಂದ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸರ್ಕಾರಿ ಕನ್ನಡ ಶಾಲೆ ಉಳಿಸಿ’ ವಿಚಾರ ಸಂಕಿರಣ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಬಿಎಸ್‌ಇ, ಐಸಿಎಸ್‌ಸಿ ಪಠ್ಯಕ್ರಮದ ಖಾಸಗಿ ಶಾಲೆಗಳನ್ನು ತೆರೆಯಲು ಸರ್ಕಾರವೇ ಅನುಮತಿ ಕೊಡುತ್ತಿದೆ. ಇದರಿಂದ ಇವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಪಾಲಕರೂ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗೆ ಸೇರಿಸಲು ಒಲವು ತೋರುತ್ತಿದ್ದಾರೆ. ಇದರ ನೇರ ಪರಿಣಾಮ ಸರ್ಕಾರಿ ಕನ್ನಡ ಶಾಲೆಗಳ ಮೇಲೆ ಆಗುತ್ತಿದೆ ಎಂದರು.
ಸರ್ಕಾರಿ ಕನ್ನಡ ಶಾಲೆಗಳು ನಿಧಾನಗತಿಯಲ್ಲಿ ಮುಚ್ಚುತ್ತಿವೆ. ಇಲ್ಲವೇ ಅವುಗಳ ಸಂಖ್ಯೆಯನ್ನು ಕಡಿತಗೊಳಿಸಿ, ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಇದು ಸಹ ಶಾಲೆಯನ್ನು ಬಂದ್ ಮಾಡುವ ಪರೋಕ್ಷ ಕ್ರಮವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಮಾಧ್ಯಮ ಶಾಲೆಗಳು ಬಹಳ ಮುಖ್ಯ. ಇವುಗಳನ್ನು ತೆರೆಯುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಆಸಕ್ತಿ ವಹಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳು ಓದಲು ಅನುಕೂಲ ಕಲ್ಪಿಸಿಕೊಡಬೇಕು. ಈಗಿರುವ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು.
ನಾನು ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿದ್ದೆ. ಹೀಗೆ ಅನುತ್ತೀರ್ಣವಾಗುವ ಮಕ್ಕಳು ದಡ್ಡರಲ್ಲ. ಹೀಗಾಗಿ, ಅವರಿಗೆ ಪೂರಕ ಪರೀಕ್ಷೆ ವ್ಯವಸ್ಥೆ ಅಗತ್ಯ. ಈ ಹಿನ್ನೆಲೆಯಲ್ಲಿ ನಾನು ಶಿಕ್ಷಣ ಸಚಿವರಾಗಿದ್ದಾಗ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಪೂರಕ ಪರೀಕ್ಷೆಯನ್ನು ಪ್ರಥಮ ಬಾರಿಗೆ ಪರಿಚಯಿಸಲಾಯಿತು. ಮೊದಲ ವರ್ಷದಲ್ಲಿ ಸಚಿವರೊಬ್ಬ ಪುತ್ರ ಸೇರಿದಂತೆ ರಾಜ್ಯಾದ್ಯಂತ 25 ಸಾವಿರ ಮಕ್ಕಳು ಆ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಇದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಈಗಲೂ ಅನುಕೂಲವಾಗುತ್ತಿದೆ ಎಂದರು.
ಸದ್ವಿದ್ಯಾ ಶಾಲೆಯ ಮುಖ್ಯ ಶಿಕ್ಷಕಿ ಸುಮಾ, ಗುಂಡ್ಲುಪೇಟೆಯ ಓಂಕಾರ್ ಅರಣ್ಯ ಅಂಚಿನಲ್ಲಿರುವ ಶ್ರೀಕಂಠಪುರದ ಶಾಲೆಯ ಮುಖ್ಯ ಶಿಕ್ಷಕ ಶಾಂತಪ್ಪ ಅವರಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕ ರತ್ನ ಪ್ರಶಸ್ತಿ ಹಾಗೂ ಪರಿಸರ ಪ್ರಿಯಾ ಶ್ರೀಕಂಠೇಶ್, ಪ್ರತಿಮಾ ರಮೇಶ್, ಕೋಮಲಾಕ್ಷಿ ನಾಗರಾಜು ಅವರಿಗೆ ನನ್ನವ್ವ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪನ್ಯಾಸಕಿ ಡಾ.ಟಿ.ಪದ್ಮಶ್ರೀ, ಸುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಮಾರಹಳ್ಳಿ ರಂಗಸ್ವಾಮಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ನಾ.ಗಂಗಾಧರಪ್ಪ, ಶಿಕ್ಷಕಿ ಪ್ರಭಾಶಾಸ್ತ್ರಿ, ಸಂಸ್ಥೆಯ ಅಧ್ಯಕ್ಷ ಯಾಚೇನಹಳ್ಳಿ ಮಹದೇವ್ ಪಾಲ್ಗೊಂಡಿದ್ದರು.