ಸ್ವಚ್ಛತೆಗೆ ಪೌರಕಾರ್ಮಿಕರ ಶ್ರಮ ಅಪಾರ

ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಸ್ವಚ್ಛತಾಗಾರರ ದಿನಾಚರಣೆಯನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಜೆರಾಲ್ಡ್ ರಾಜೇಶ್, ಪ್ರಕಾಶ್,ಚೆಲುವರಾಜು, ಮಹದೇವ ನಾಯಕ, ಗಾಯತ್ರಿ ಮೋಹನ್ ಇತರರು ಇದ್ದರು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಸ್ವಚ್ಛತಾಗಾರರ ದಿನಾಚರಣೆಯನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಜೆರಾಲ್ಡ್ ರಾಜೇಶ್, ಪ್ರಕಾಶ್,ಚೆಲುವರಾಜು, ಮಹದೇವ ನಾಯಕ, ಗಾಯತ್ರಿ ಮೋಹನ್ ಇತರರು ಇದ್ದರು.
Published on
ನಂಜನಗೂಡು: ಗ್ರಾಮಗಳ ಸ್ವಚ್ಛತೆಗೆ ಗ್ರಾಮ ಪಂಚಾಯತಿಯ ಸ್ವಚ್ಛತಾಗಾರರ ಶ್ರಮ ಶ್ಲಾಘನೀಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ನಂಜನಗೂಡು ತಾಲೂಕು ಪಂಚಾಯಿತಿ ಯಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಸ್ವಚ್ಛತಾಗಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಚ್ಛತಾಗಾರರಿಗೆ ನಿವೇಶನ ಕಲ್ಪಿಸಲು ಈಗಾಗಲೇ ಸೂಚಿಸಲಾಗಿದೆ. ಪೌರಕಾರ್ಮಿಕರಿಗೆ ಮೊದಲ ಆದ್ಯತೆ ನೀಡಿ ತದನಂತರ ಉಳಿದವರಿಗೆ ನೀಡಬೇಕು ಎಂಬುದು ನನ್ನ ಆಶಯವಾಗಿದೆ. ಈಗಾಗಲೇ ದೇವರಮ್ಮನ ಹಳ್ಳಿ , ಕಸುವಿನಹಳ್ಳಿ, ಹುಲ್ಲಹಳ್ಳಿ ಗ್ರಾಮದಲ್ಲಿ ನಿವೇಶನಗಳನ್ನ ಮಂಜೂರು ಮಾಡಲಾಗಿದೆ. ಸಾಧ್ಯವಾದಷ್ಟು ಗುಂಪು ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಜತೆಗೆ ಆರೋಗ್ಯ ವಿಮೆ, ಗುರುತಿನ ಚೀಟಿ ಸೌಲಭ್ಯಕ್ಕಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರದ ಜತೆ ಮಾತನಾಡಿ ಬಗೆಹರಿಸುವ ಪ್ರಯತ್ನವನ್ನು ಮಾಡುತ್ತೇನೆ. ಸ್ವಚ್ಛತಾಗಾರರು ಆರೋಗ್ಯದ ಕಡೆ ಗಮನ ಹರಿಸುವ ಜತೆಗೆ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ನಗರ ಹಾಗೂ ಗ್ರಾಮಾಂತರ ಪ್ರದೇಶದ ಪೌರಕಾರ್ಮಿಕರು ಬೇರೆ ಅಲ್ಲ. ಎಲ್ಲರೂ ಒಂದೇ. ಎಲ್ಲರೂ ಒಟ್ಟಿಗೆ ಸೇರಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಬೇಕಾಗಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಮಾತನಾಡಿ, ಸ್ವಚ್ಛತಾಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಅವರಿಗೆ ಪ್ರತಿಭ ಪುರಸ್ಕಾರವನ್ನು ನೀಡುತ್ತಿದ್ದೇವೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದ ಸ್ವಚ್ಛತಾಗಾರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಸ್ವಚ್ಛತಾಗಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ವಚ್ಛತಾಗಾರರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಮಾಜಿ ಪುರಸಭಾ ಅಧ್ಯಕ್ಷ ಚೆಲುವರಾಜು, ಪಿಡಿಒ ಸಂಘಗಳ ಅಧ್ಯಕ್ಷ ಪ್ರಕಾಶ್, ಮಹದೇವ ನಾಯಕ, ನಂಜುಂಡ, ಮುರುಗೇಶ್ ಯಧುಗಿರೀಶ್, ನಂಜಪ್ಪ, ಗಾಯತ್ರಿ ಮೋಹನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net