

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ದಸರಾ ಕವಿಗೋಷ್ಠಿ ಪ್ರಚಾರ ತೇರಿಗೆ ಸೋಮವಾರ ಚಾಲನೆ ನೀಡಲಾಯಿತು.
ಮಾನಸಗಂಗೋತ್ರಿಯ ರಾಷ್ಟ್ರಕವಿ ಕುವೆಂಪು ಪ್ರತಿಮೆ ಆವರಣದಲ್ಲಿ ಹಿರಿಯ ವಿದ್ವಾಂಸರಾದ ಡಾ.ಸಿ.ಪಿ.ಕೃಷ್ಣಕುಮಾರ್ ಹಾಗೂ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರು ಪ್ರಚಾರ ತೇರಿಗೆ ಚಾಲನೆ ನೀಡಿದರು.
ಪ್ರಚಾರ ತೇರು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಲಿದ್ದು, ದಸರಾ ಕವಿಗೋಷ್ಠಿಯ ಬಗ್ಗೆ ಪ್ರಚಾರ ಮಾಡಲಿದೆ. ಕನ್ನಡ ಧ್ವಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಹಿರಿಯ ವಿದ್ವಾಂಸರು ಹಾಗೂ ಸಾಹಿತಿಗಳ ಭಾವಚಿತ್ರಗಳೊಂದಿಗೆ ದಸರಾ ಕವಿಗೋಷ್ಠಿಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಬಹುರೂಪದ ಆಶಯದಲ್ಲಿ ರೂಪುಗೊಂಡಿರುವ ಕವಿಗೋಷ್ಠಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರನ್ನು ಆಹ್ವಾನಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕನ್ನಡ ತೇರು ಸಿದ್ಧಪಡಿಸಲಾಗಿದೆ. ತೇರು ವಿವಿಧ ಕಾಲೇಜುಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕವಿಗೋಷ್ಠಿಯ ಕುರಿತು ಮಾಹಿತಿ ನೀಡಲಿದೆ.
ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಕನ್ನಡದ ತೇರು ದಸರಾ ಕವಿಗೋಷ್ಠಿಯ ನೆಪದಲ್ಲಿ ಮೈಸೂರಿನಾದ್ಯಂತ ಸಂಚರಿಸಲಿದೆ. ಈ ತೇರು ಕೇವಲ ರಸ್ತೆಯಲ್ಲಿ ಮಾತ್ರವಲ್ಲ, ಎಲ್ಲ ಕನ್ನಡಿಗರ ಮನಸ್ಸಿನಲ್ಲೂ ಸಂಚರಿಸಬೇಕು. ಆಗ ಕನ್ನಡ ಇನ್ನಷ್ಟು ಬೆಳೆಯುತ್ತದೆ. ಕನ್ನಡದ ತೇರಿನ ಸಂಚಾರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಮಾತನಾಡಿ, ನನ್ನ ಗುರುಗಳಾದ ಮಹಾಕವಿ ಕುವೆಂಪು ಅವರ ಸಾನ್ನಿಧ್ಯದಲ್ಲಿ ಕನ್ನಡದ ತೇರಿಗೆ ಚಾಲನೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಬಿ.ಎಂ.ಶ್ರೀ ಅವರು ಕನ್ನಡ ನವೋದಯದ ಕಾರಣ ಪುರುಷರು. ಕನ್ನಡದ ಬಾವುಟವನ್ನು ಹಾಗೂ ಕನ್ನಡಿಗರ ಒಡಲಿನ ತಾಯಿಭುವನೇಶ್ವರಿಯ ರಥವನ್ನು ಅಭಿಮಾನದಿಂದ ಲೋಕಕ್ಕೆ ಸಾರಿದವರು. ಕನ್ನಡ ಕಟ್ಟುವ ಕಾರ್ಯದಲ್ಲಿ ಅವರ ಕೊಡುಗೆ ಸ್ಮರಣೀಯ ಎಂದರು.
ಕನ್ನಡ ಸ್ನಾತಕೋತ್ತರ ವಿಭಾಗ ಆರಂಭಕ್ಕೆ ಪ್ರಮುಖ ಕಾರಣಕರ್ತರಾಗಿ ಬಿ.ಎಂ.ಶ್ರೀ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ಇದೀಗ ಆ ವಿಭಾಗವು ಶತಮಾನೋತ್ಸವದ ಸಂಭ್ರಮಾಚರಣೆಗೆ ಸಾಕ್ಷಿಯಾಗುತ್ತಿರುವ ಸಂದರ್ಭದಲ್ಲಿ ದಸರಾ ಕವಿಗೋಷ್ಠಿ ನಡೆಯುತ್ತಿರುವುದು ಸುವರ್ಣಾವಕಾಶ ಎಂದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ.ಶಿವರಾಜು ಮಾತನಾಡಿ, ದಸರಾ ನಮ್ಮ ಅಸ್ಮಿತೆ. ಕನ್ನಡ ನಮ್ಮ ಅಮೃತ ಭಾಷೆ. ಮೈಸೂರು ಸ್ವರ್ಗ. ಮೈಸೂರಿನ ವಾತಾವರಣ ಕನ್ನಡ ಮನಸ್ಸುಗಳನ್ನು ಅರಳಿಸುವಂತಿದೆ. ಈ ಬಾರಿ ಕವಿಗೋಷ್ಠಿಯನ್ನು ಬಹುರೂಪದಲ್ಲಿ ಆಯೋಜಿಸಲಾಗಿದ್ದು, ಯುವಜನತೆ ದಸರಾವನ್ನು ಸಂಭ್ರಮಿಸಿದಂತೆ ಕವಿತೆಗಳನ್ನು ಆಸ್ವಾದಿಸಬೇಕು ಎಂದು ಹೇಳಿದರು.
ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ.ಎನ್. ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ, ಸಮನ್ವಯಾಧಿಕಾರಿ ಪ್ರೊ. ತ್ರಿವೇಣಿ, ಡಾ.ಉಮೇಶ್ ಬೇವಿನಹಳ್ಳಿ ಇದ್ದರು.