ಮತ್ತೆ ಪ್ರತಿಧ್ವನಿಸಿದ ದಲಿತ ಸಿಎಂ ಕೂಗು

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ  ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಎನ್.ಭಾಸ್ಕರ್, ತಿಮ್ಮಯ್ಯ, ಭರತ್ ರಾಮಸ್ವಾಮಿ ಇತರರು ಇದ್ದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಎನ್.ಭಾಸ್ಕರ್, ತಿಮ್ಮಯ್ಯ, ಭರತ್ ರಾಮಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟ ರೂಪಿಸಲು ಸಂವಿಧಾನ ಸಂರಕ್ಷಣಾ ಸಮಿತಿ ನಿರ್ಣಯ
ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹೆಚ್ಚಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ದಲಿತ ಮುಖ್ಯಮಂತ್ರಿ ಕೂಗು ಹುಟ್ಟಿಕೊಂಡಿದ್ದು, ದಲಿತ ಮುಖ್ಯಮಂತ್ರಿಗಾಗಿ ಹೋರಾಟ ರೂಪಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ದಲಿತ ಮುಖ್ಯಮಂತ್ರಿ ವಿಚಾರವಾಗಿ ಸಭೆ ನಡೆಯಿತು. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಿರಿಯ ದಲಿತ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ದಲಿತ ಸಿಎಂ ಕೂಗಿಗೆ ಬಲತುಂಬಿದರು.
ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳುವ ದಲಿತ ನಾಯಕರಿಗೆ ಬೆಂಬಲ ನೀಡುವುದಾಗಿ ನಿರ್ಣಯಿಸಲಾಯಿತು. ದಲಿತ ಮುಖ್ಯಮಂತ್ರಿಗಾಗಿ ಫೆ. 15-16ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ ಆಯೋಜಿಸಲಾಗುವುದು. ಕಾಂಗ್ರೆಸ್ ವರಿಷ್ಠರನ್ನು ಆಹ್ವಾನಿಸಲಾಗುವುದು. ಅಲ್ಲದೇ ಸಮುದಾಯದ ಜನಪ್ರತಿನಿಧಿಗಳಿಗೆ ದಲಿತ ಸಿಎಂಗೆ ಬೆಂಬಲ ನೀಡುವಂತೆ ಕೋರುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 135 ಸೀಟು ತಂದುಕೊಡಲು ದಲಿತ ಸಮುದಾಯ ಎದೆಗೆ ಎದೆ ಕೊಟ್ಟು ಹೋರಾಟ ಮಾಡಿದೆ. ಆ ಜನರ ಹಿತ ಕಾಯದಿದ್ದರೆ ಅದು ಸಂವಿಧಾನ ವಿರೋಧಿಯಾಗುತ್ತದೆ ಎಂದರು.
ಆರು ತಿಂಗಳ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಅವರಿಗೆ ದಲಿತರಿಗೆ ಸಿಎಂ ಸ್ಥಾನ ಕೊಡದಿದ್ದರೆ ಪಕ್ಷಕ್ಕೆ ಆಗುವ ಪರಿಣಾಮದ ಬಗ್ಗೆ ತಿಳಿಸಿದ್ದೇನೆ. ಉಳ್ಳವರಿಗೆ ಅಧಿಕಾರ ಸಿಗುವುದಾದರೆ ಅದ್ಯಾವ ಪ್ರಜಾಪ್ರಭುತ್ವ ವ್ಯವಸ್ಥೆ. ದಲಿತ ಸಿಎಂ ಮಾಡಬೇಕೆಂಬುದು ನಮ್ಮ ಹಕ್ಕೊತ್ತಾಯ ಎಂದು ತಿಳಿಸಿದರು.
ಬಿ.ಬಸವಲಿಂಗಪ್ಪ, ಬಿ.ರಾಚಯ್ಯ, ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿತು. ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಿಕಿಹೊಳಿ ಇವರ‌್ಯಾರೂ ನಾಯಕರಲ್ಲವೇ? ಎಂಬುದನ್ನು ಪಕ್ಷದ ಹೈಕಮಾಂಡ್ ತಿಳಿಸಬೇಕು. ದಲಿತ ನಾಯಕರಲ್ಲಿ ಯಾರಿಗಾದರೂ ಅವಕಾಶ ನೀಡಬೇಕು. ರಾಜ್ಯಾದ್ಯಂತ ದಲಿತ ಸಿಎಂಗಾಗಿ ಹಕ್ಕೊತ್ತಾಯ ಮಾಡುತ್ತೇವೆ ಎಂದು ಹೇಳಿದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.
ಮುಖಂಡ ತಿಮ್ಮಯ್ಯ ಮಾತನಾಡಿ, ದಲಿತರಿಗೆ ಸಿಎಂ ನೀಡಬೇಕೆಂದು ರಾಹುಲ್ ಗಾಂಧಿ, ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆಯುತ್ತೇವೆ. ಬರೀ ಮತ ಹಾಕುವುದಕ್ಕೆ ದಲಿತರು ಸೀಮಿತವೇ? ಎಂದು ಪ್ರಶ್ನಿಸಿದರು.
ಸಮಾನತೆ ಪ್ರಕಾಶನದ ಭರತ್ ರಾಮಸ್ವಾಮಿ ಮಾತನಾಡಿ, ದಲಿತ ಸಿಎಂಗಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಆಗಬೇಕು. ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಬೇಕು. ಬೇಡುವ ದಯನೀಯ ಪರಿಸ್ಥಿತಿ ಬರಬಾರದು. ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಸಮಾಜವೇ ತಲೆತಗ್ಗಿಸುವುದಾಗಿದೆ ಎಂದರು. ಮುಖಂಡರಾದ ಮಹೇಶ್, ಚಂದ್ರಶೇಖರ್, ಗಂಗಾಧರ್, ಕುಮಾರ್, ವಿಷ್ಣುವರ್ಧನ್, ಪುಟ್ಟಸ್ವಾಮಿ, ದ್ಯಾವಪ್ಪ ನಾಯಕ, ಗೋವಿಂದ್ ರಾಜ್, ಮನೋನ್ಮಣಿ, ಸಂತೋಷ್, ಜೆ.ಪ್ರಭು, ಗಾಂಧಿನಗರ ಮಂಜುನಾಥ, ಜಿ.ಮಹದೇವ, ಮಂಜುಳಾ, ಕೆ.ಗಂಗಾಧರ್, ಸೂರ್ಯಕಾಂತ್, ಮಧುಸೂದನ್, ಅಶೋಕಪುರಂ ರೇವಣ್ಣಸ್ವಾಮಿ, ಮಲ್ಲಿಕಾರ್ಜುನ, ಬಾಬುರಾವ, ನಿವೃತ್ತ ಅಧಿಕಾರಿ ಬಾಬುರಾಜ್ ಇತರರು ಇದ್ದರು.
"

ಅಹಿಂದದ ಬೇರುಗಳು ದಲಿತರು. ಅಹಿಂದದಲ್ಲಿ ಅ ಮತ್ತು ದ ಪಾತ್ರ ಏನು? ಎಂಬುದನ್ನು ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡುವುದಾಗಿ ಘೋಷಿಸಿದವರು ಉತ್ತರಿಸಬೇಕು. ದಲಿತರು ಕಾಂಗ್ರೆಸ್‌ನ ಜೀತ ಮಾಡಲಿಕ್ಕೆ ಇಲ್ಲ. ಅಲ್ಲದೆ ಕಾಂಗ್ರೆಸ್ ಅನ್ನು ದತ್ತು ತೆಗೆದುಕೊಂಡಿಲ್ಲ. ಈಗ ದಲಿತ ಮುಖ್ಯಮಂತ್ರಿ ಮಾಡದಿದ್ದರೆ ನಮ್ಮ ನಡೆಯನ್ನು ತೀರ್ಮಾನ ಮಾಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net