ಮೈದುಂಬಿದ ತ್ರಿವೇಣಿ ಸಂಗಮ

ಮುಂಗಾರು ಕೃಪೆ ತೋರಿದ್ದರಿಂದ ವಿಳಂಬವಾಗಿಯಾದರೂ ಕಬಿನಿ ಜಲಾಶಯ
ಮುಂಗಾರು ಕೃಪೆ ತೋರಿದ್ದರಿಂದ ವಿಳಂಬವಾಗಿಯಾದರೂ ಕಬಿನಿ ಜಲಾಶಯ
Published on

ತಿ.ನರಸೀಪುರ:

ಮುಂಗಾರು ಕೃಪೆ ತೋರಿದ್ದರಿಂದ ವಿಳಂಬವಾಗಿಯಾದರೂ ಕಬಿನಿ ಜಲಾಶಯ ಭರ್ತಿಯಾಗಿದ್ದು, ಅಣೆಕಟ್ಟೆಯಿಂದ ಅಧಿಕ ನೀರನ್ನು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಕಪಿಲ ನದಿ ಮೈದುಂಬಿ ಹರಿಯುತ್ತಿದೆ.

ವಯನಾಡು, ಪೂರ್ವ ಘಟ್ಟಗಳಲ್ಲಿ ತಡವಾಗಿ ಮುಂಗಾರು ಚುರುಕಾಗುತ್ತಿರುವುದರಿಂದ ಕಬಿನಿ ಅಣೆಕಟ್ಟೆ ತುಂಬಿದ್ದು, ಭಾನುವಾರದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ತ್ರಿವೇಣಿ ಸಂಗಮ ಪುಣ್ಯಕ್ಷೇತ್ರ ಕಳೆಗಟ್ಟಿದೆ.
ಕಬಿನಿ ಜಲಾಶಯ ಭರ್ತಿಯಿಂದ ಈ ಭಾಗದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿಗೆ 25 ಸಾವಿರ ಕ್ಯೂಸೆಕ್ ನೀರು ಜತೆಗೆ ಜನ, ಜಾನುವಾರುಗಳ ಕುಡಿಯುವ ನೀರು ಪೂರೈಕೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸರ್ಕಾರದ ಸೂಚನೆಯಂತೆ ಕಬಿನಿ ಬಲ ದಂಡೆ ನಾಲೆಗಳಿಗೂ 2 ಸಾವಿರ ಕ್ಯೂಸೆಕ್ ನೀರನ್ನು ಭಾನುವಾರದಿಂದಲೇ ಬಿಟ್ಟಿದ್ದಾರೆ. ಈ ನೀರನ್ನು ಕೆರೆ ಕಟ್ಟೆಗಳಿಗೆ ತುಂಬಿಸಿಕೊಳ್ಳಲು ಮೊದಲ ಆದ್ಯತೆಯನ್ನು ನೀಡಲಾಗಿದೆ.

ಕಬಿನಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರ ಬಿಟ್ಟದ್ದರಿಂದ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಕೊಪ್ಪರಿಕೆಗಳ ವಿಹಾರಕ್ಕೆ ನಿಬರ್ಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಸೋಪಾನಕಟ್ಟೆಗಳ ಬಳಿ ಕೊಪ್ಪರಿಗೆಗಳನ್ನು ಕಟ್ಟಿ ಹಾಕಲಾಗಿದೆ. ಪ್ರವಾಹದ ಮುನ್ನೆಚ್ಚರಿಕೆಯ ಬಗ್ಗೆ ಈಗಾಗಲೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕಪಿಲಾ ನದಿ ಮೈದುಂಬಿ ಹರಿಯುತ್ತಿದ್ದರೂ ತಾಲೂಕಿನ ಯಾವುದೇ ಗ್ರಾಮದಲ್ಲಿ ಪ್ರವಾಹ ಸಮಸ್ಯೆ ಕಂಡು ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net