ದಸರಾ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ ಮಕ್ಕಳಿಗೆ ಮಜ್ಜಿಗೆ ವಿತರಿಸಲಾಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿವಿಧೆಡೆಯಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ, ಬಗೆಬಗೆಯ ಪ್ರಾಣಿ ಮತ್ತು ಪಕ್ಷಿಗಳನ್ನು ವೀಕ್ಷಿಸಿದರು
ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಶುಕ್ರವಾರ ಚಿಣ್ಣರ ಚಿಲಿಪಿಲಿ ಮೇಳೈಸಿತ್ತು. ಶಾಲಾ ಚೌಕಟ್ಟಿನಿಂದ ಹೊರಬಂದ ಮಕ್ಕಳು ಕುಣಿದು ನಲಿದರು, ಸಂಭ್ರಮಿಸಿದರು
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನಕ್ಕೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಶುಕ್ರವಾರ ಚಿಣ್ಣರ ಚಿಲಿಪಿಲಿ ಮೇಳೈಸಿತ್ತು. ಶಾಲಾ ಚೌಕಟ್ಟಿನಿಂದ ಹೊರಬಂದ ಮಕ್ಕಳು ಕುಣಿದು ನಲಿದರು, ಸಂಭ್ರಮಿಸಿದರು.
ಇಂತಹ ಸಂತಸವನ್ನು ಉಣಬಡಿಸಿದ್ದು ‘ಮಕ್ಕಳ ದಿನಾಚರಣೆ’. ಈ ವಿಶೇಷ ದಿನದ ಅಂಗವಾಗಿ ವಿವಿಧ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟ ಸಹಸ್ರಾರು ಮಕ್ಕಳು ಇಲ್ಲಿ ಸೌಂದರ್ಯವನ್ನು ಕಂಡು ಹರ್ಷೋಲ್ಲಾಸದಲ್ಲಿ ಮಿಂದೆದ್ದರು.
ಮಕ್ಕಳ ದಿನಾಚರಣೆ ದಿನವಾದ ಶುಕ್ರವಾರ ಶಾಲಾ ಮಕ್ಕಳು ಮೃಗಾಲಯ, ದಸರಾ ವಸ್ತುಪ್ರದರ್ಶನ, ಅರಮನೆಗೆ ಭೇಟಿ ನೀಡಿ ಸಂಭ್ರಮಿಸಿದರು. ಮೈಸೂರು ನಗರ ಮಾತ್ರವಲ್ಲದೆ, ಜಿಲ್ಲೆಯ ವಿವಿಧೆಡೆಯಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪ್ರವಾಸಿ ತಾಣಗಳಿಗೆ ತಂಡೋಪತಂಡವಾಗಿ ಆಗಮಿಸಿ, ಒಂದು ದಿನದ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮೃಗಾಲಯಕ್ಕೆ ಭೇಟಿ: ವಿವಿಧೆಡೆಯಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ, ಬಗೆಬಗೆಯ ಪ್ರಾಣಿ ಮತ್ತು ಪಕ್ಷಿಗಳನ್ನು ವೀಕ್ಷಿಸಿದರು. ಬೆಳಗ್ಗೆ 8.30ರಿಂದ ಮಧ್ಯಾಹ್ನ 12 ಗಂಟೆವರೆಗೆ 12 ವರ್ಷದೊಳಗಿನ ಮಕ್ಕಳಿಗೆ ಮೃಗಾಲಯಕ್ಕೆ ಉಚಿತ ಪ್ರವೇಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಿಂದ ತಂಡೋಪತಂಡವಾಗಿ ಆಗಮಿಸಿದ್ದ ಮಕ್ಕಳು ಮೃಗಾಲಯ ವೀಕ್ಷಿಸಿ ಸಂಭ್ರಮಿಸಿದರು. ಸಮವಸ್ತ್ರ ಹಾಗೂ ಗುರುತಿನ ಚೀಟಿ ಪರಿಶೀಲಿಸಿ ಮೃಗಾಲಯ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸಿದ್ದರಿಂದ ಮೃಗಾಲಯದ ಒಳಗೆ ಪ್ರಾಣಿಗಳ ಬೋನಿನ ಬಳಿ ನುಸುಳದಂತೆ ಕಟ್ಟೆಚ್ಚರ ವಹಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.
ವಸ್ತುಪ್ರದರ್ಶನ
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನಕ್ಕೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಬಂದ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಮಕ್ಕಳ ಜಾತ್ರೆ ನಡೆದಂತೆ ಕಂಡು ಬಂದಿತು. ವಿವಿಧ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಸಂಗೀತಕ್ಕೆ ಕುಣಿತು ಕುಪ್ಪಳಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಮಕ್ಕಳಿಗೆ ಸಿಹಿ, ಗುಲಾಬಿ ಹೂ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಮಕ್ಕಳಿಗೆ ಉಚಿತವಾಗಿ ಬಾಳೆಹಣ್ಣು, ಕಿತ್ತಲೆಹಣ್ಣು, ಕಡಲೇಕಾಯಿ, ಐಸ್‌ಕ್ರೀಮ್ ವಿತರಿಸಲಾಯಿತು. ಮಧ್ಯಾಹ್ನದ ನಂತರ ಮಕ್ಕಳಿಗೆ ರೈಸ್‌ಬಾತ್, ಮೊಸರನ್ನ ನೀಡಲಾಯಿತು.
ವಸ್ತುಪ್ರದರ್ಶನ ಆವರಣದಲ್ಲಿನ ಕಾಳಿಂಗರಾವ್ ರಂಗಮಂಟಪದಲ್ಲಿ ಪ್ರಾಧಿಕಾರದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡ ಕೊಡವ ವಾಲಗ ನೃತ್ಯ ಸೇರಿದಂತೆ ವಿವಿಧ ನೃತ್ಯ ಪ್ರದರ್ಶಿಸಿ ಮಕ್ಕಳನ್ನು ರಂಜಿಸಿದರು. ಗಾಯನ ಕಾರ್ಯಕ್ರಮ ಮಕ್ಕಳನ್ನು ಮಂತ್ರಮುಗ್ಧರನ್ನಾಗಿಸಿತು. ಇದೇ ವೇಳೆ ಮಕ್ಕಳು ಸಂಗೀತಕ್ಕೆ ಸಾಮೂಹಿಕವಾಗಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.
ರಂಗಕರ್ಮಿ ಪ್ರಸನ್ನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಮೈಮ್ ರಮೇಶ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಇತರರು ಉಪಸ್ಥಿತರಿದ್ದರು.