ವರ್ಜಿನಿಯ ತಂಬಾಕು ಬೆಳೆಗಾರರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಸಭೆ
ಪಿರಿಯಾಪಟ್ಟಣ: ರಾಜ್ಯದಲ್ಲಿ ತಂಬಾಕಿನ ದರ ಏಕಾಏಕಿ ಕುಸಿತಗೊಂಡ ಪರಿಣಾಮ ತಂಬಾಕು ಬೆಳೆಗಾರರು ಹರಾಜು ಮಾರುಕಟ್ಟೆ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ವರ್ಜಿನಿಯ ತಂಬಾಕು ಬೆಳೆಗಾರರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದು, ತಂಬಾಕು ಬೆಳೆಗಾರರ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಕೊಲ್ಲಿ ರಾಷ್ಟ್ರಗಳ ಸಿಗರೇಟು ತಯಾರಿಕಾ ಕಂಪನಿಗಳಿಗೆ ಭಾರತದಿಂದ ರಫ್ತು ಆಗಬೇಕಿದ್ದ ತಂಬಾಕು ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಸ್ಥಗಿತಗೊಂಡಿರುವ ಕಾರಣ ತಂಬಾಕು ಖರೀದಿದಾರ ಕಂಪನಿಗಳು ಏಕಾಏಕಿ ದರ ಇಳಿಸಿದ್ದು, ರಾಜ್ಯದ ತಂಬಾಕು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಮಾರುಕಟ್ಟೆ ಬಂದ್ ಮಾಡುವ ಮೂಲಕ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರಿಹಾರ ಸೂಚಿಸಬೇಕು ಎಂದು ವರ್ಜಿನಿಯ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಜಿ.ಪರಮೇಶ್ ತಿಳಿಸಿದರು.
ಈಗಾಗಲೇ ಐಟಿಸಿ ಕಂಪನಿಯ ಚೇರ್ಮನ್ ಮತ್ತು ಸಿಇಒ, ಖರೀದಿದಾರ ಕಂಪನಿಗಳ ಮುಖ್ಯಸ್ಥರು, ತಂಬಾಕು ಮಂಡಳಿಯ ಇಡಿ ಮತ್ತು ಹರಾಜು ನಿರ್ದೇಶಕರೊಂದಿಗೆ ದೂರವಾಣಿಯ ಮೂಲಕ ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಇನ್ನುಳಿದಿರುವ 30 ಮಿಲಿಯನ್ ನಷ್ಟು ತಂಬಾಕನ್ನು ಉತ್ತಮ ದರ ನೀಡಿ ಖರೀದಿಸಬೇಕೆಂದು ಮನವಿ ಮಾಡಲಾಗಿದೆ ಎಂದು ವಿಜಯವಾಣಿಗೆ ತಿಳಿಸಿದರು.
ಸಭೆಯಲ್ಲಿ ವರ್ಜಿನಿಯ ತಂಬಾಕು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಆರ್.ಟಿ.ಸತೀಶ್, ಕುಮಾರ್‌ವಿಜಿ, ಶಿವಣ್ಣ, ವಿಶ್ವನಾಥ್, ಪ್ರಭಾಕರ್, ಈರೇಗೌಡ, ನೇತ್ರಪಾಲ್, ಚಂದ್ರೇಗೌಡ, ರಾಜಶೇಖರ್, ಮುತ್ತುರಾಜ್, ಹೊಲದಪ್ಪ ಮತ್ತಿತರರಿದ್ದರು.