ವಸತಿಗೃಹಕ್ಕೆ ಮಾರಕಾಸ್ತ್ರಗಳ ಪಾರ್ಸಲ್

* ಬಿಜೆಪಿ ಮೈಸೂರು ನಗರ ಎಸ್‌ಸಿ ಮೋರ್ಚಾ ಪ್ರತಿಭಟನೆ
The BJP Mysore City SC Morcha held a protest in front of the statue of the architect of the Constitution, Dr. B.R. Ambedkar, located in the city's Town Hall premises on Sunday.
ಬಿಜೆಪಿ ಮೈಸೂರು ನಗರ ಎಸ್‌ಸಿ ಮೋರ್ಚಾ ವತಿಯಿಂದ ಭಾನುವಾರ ನಗರದ ಟೌನ್‌ಹಾಲ್ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಲ್.ನಾಗೇಂದ್ರ, ಕುಂಬರಹಳ್ಳಿ ಸುಬ್ಬಣ್ಣ ಇತರರಿದ್ದರು.
Published on: 

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಸತಿಗೃಹದ ವಿಳಾಸಕ್ಕೆ ಆನ್‌ಲೈನ್ ಆ್ಯಪ್‌ಗಳ ಮೂಲಕ ಚಾಕು, ಚೂರಿ ಸೇರಿದಂತೆ ಮಾರಕಾಸ್ತ್ರಗಳನ್ನು ಆರ್ಡರ್ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಮೈಸೂರು ನಗರ ಎಸ್‌ಸಿ ಮೋರ್ಚಾ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್‌ಹಾಲ್ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಹಲವು ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ರಾಜಕೀಯ ವಿರೋಧವನ್ನು ರಾಜಕೀಯವಾಗಿ ಎದುರಿಸಬೇಕೇ ಹೊರತು, ಬೆದರಿಕೆ ಹಾಗೂ ಹಿಂಸಾತ್ಮಕ ಕೃತ್ಯಗಳ ಮೂಲಕ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವ್ಯವಸ್ಥೆಯಲ್ಲಿ ಆಡಳಿತ ನಡೆಸಬೇಕು. ಅದೇ ರೀತಿ ವರ್ತಿಸಬೇಕು. ತಮ್ಮನ್ನು ಟೀಕೆ ಮಾಡಿದರೆ ಸಹಿಸಲ್ಲವೆಂದು ಗೂಂಡಾ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಬ್ಬ ಪ್ರತಿಪಕ್ಷದ ನಾಯಕರ ಮನೆಗೆ ಈ ರೀತಿ ಪಾರ್ಸೆಲ್ ಕಳುಹಿಸಿದರೆ ಜನಸಾಮಾನ್ಯರ ಗತಿಯೇನು? ಇಂತಹ ಕೃತ್ಯ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಅವರ ವಸತಿಗೃಹಕ್ಕೆ ಕಾಂಗ್ರೆಸ್ ಪಕ್ಷದ ಕೆಲವು ಗೂಂಡಾಗಳು ಚಾಕು, ಚೂರಿಗಳಂತಹ ಮಾರಕಾಸ್ತ್ರಗಳನ್ನು ಆನ್‌ಲೈನ್ ಆಪ್ ಮೂಲಕ ಡೆಲಿವರಿ ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಗೂಂಡಾ ಸಂಸ್ಕೃತಿ ಹೊಂದಿರುವ ವ್ಯಕ್ತಿಗಳನ್ನು ಬಂಧಿಸಬೇಕು. ಛಲವಾದಿ ನಾರಾಯಣಸ್ವಾಮಿ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ ಇನ್‌ಫ್ಲೂಯೆನ್ಸರ್ ವೀರಮಣಿ ವಿಚಾರದಲ್ಲಿ ನಡೆದ ಕಾನ್ಸೆಪ್ಟ್ ರಾಜ್ಯ ಕಾಂಗ್ರೆಸ್‌ನವರು ಕಾಪಿ ಮಾಡುತ್ತಿದ್ದಾರೆ. ಚಾಕು, ಚೂರಿಯನ್ನು ಬುಕ್ ಮಾಡಿ ನಿಮ್ಮ ವಿದ್ಯಾರ್ಥಿ ಕಾಂಗ್ರೆಸ್ ಹುಡುಗರು ಮನೆ ತೋರಿಸಲು ಹೋಗುತ್ತಾರೆ. ಡಿಕೆ ಮತ್ತು ಬಿಕೆ ನೀವು ಯಾರ ಶಿಷ್ಯಂದಿರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಒಬ್ಬರು ಸಿಎಂ ಆಗಿದ್ದೀರ ಮತ್ತೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಿದ್ದೀರ. ಆದರೂ ನಿಮ್ಮ ಹಳೆ ಬುದ್ಧಿ ಬಿಡದೆ ನಾರಾಯಣಸ್ವಾಮಿಗೆ ಹೆದರಿಸಲು ಕಳುಹಿಸುತ್ತಿರಾ ಎಂದು ಕಿಡಿಕಾರಿದರು.

ಮಾಜಿ ಉಪ ಮೇಯರ್ ವಿ.ಶೈಲೇಂದ್ರ ಮಾತನಾಡಿ, ಇದು ಅತ್ಯಂತ ಗಂಭೀರ ಹಾಗೂ ಖಂಡನೀಯ. ಇದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ವಿರೋಧವನ್ನು ರಾಜಕೀಯವಾಗಿಯೇ ಎದುರಿಸಬೇಕು. ಆದರೆ ವಿರೋಧ ಪಕ್ಷದ ನಾಯಕರಿಗೆ ಮಾರಣಾಂತಿಕ ಶಸ್ತ್ರಗಳನ್ನು ಪಾರ್ಸಲ್ ಕಳುಹಿಸಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿರುವುದು ಯಾವ ರೀತಿಯ ರಾಜಕೀಯ ಸಂಸ್ಕೃತಿ ಎಂದು ಪ್ರಶ್ನಿಸಿದರು.

ಬಿಜೆಪಿ ಮೈಸೂರು ನಗರ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಮೇಯರ್‌ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ಮೈಸೂರು ನಗರ ಎಸ್‌ಸಿ ಮೋರ್ಚಾ ಅಧ್ಯಕ್ಷ ಕಾರ್ತಿಕ್ ಮರಿಯಪ್ಪ, ನಗರ ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್, ರುದ್ರಮೂರ್ತಿ, ಪರೀಕ್ಷಿತ್ ರಾಜ್ ಅರಸ್, ಮುಖಂಡರಾದ ಮಹದೇವಯ್ಯ, ಹೇಮಂತ್ ಕುಮಾರ್ ಗೌಡ ಇದ್ದರು.