ಪಠ್ಯಾಧಾರಿತ ರಂಗರೂಪ ಪ್ರದರ್ಶನ ಹಾಗೂ ಗಣ್ಯ ಸಾಧಕರಿಗೆ ಅಭಿನಂದನ ಸಮಾರಂಭ

ಮೈಸೂರಿನ ಅದಮ್ಯ ರಂಗಶಾಲೆಯ ವತಿಯಿಂದ ನಗರದ ಹೂಟಗಳ್ಳಿಯ ದಕ್ಷ ಕಾಲೇಜಿನಲ್ಲಿ ನಡೆದ ಪಠ್ಯಾಧರಿತ ರಂಗರೂಪ ಪ್ರದರ್ಶನದಲ್ಲಿ ಸಾಧಕ ಗಣ್ಯರಾದ ಡಾ.ಕೆ.ಬಿ. ಲಿಂಗರಾಜು, ಟಿ. ಸತೀಶ್ ಜವರೇಗೌಡ, ಡಾ.ಪಿ. ಜಯಚಂದ್ರರಾಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಡಾ. ಮೀರಾ ಶಿವಲಿಂಗಯ್ಯ, ಪ್ರೊ. ನಂಜಯ್ಯ ಹೊಂಗನೂರು,  ಚಂದ್ರು ಮಂಡ್ಯ, ಅಭಿಷೇಕ್ ಚಿತ್ರದಲ್ಲಿದ್ದಾರೆ.
ಮೈಸೂರಿನ ಅದಮ್ಯ ರಂಗಶಾಲೆಯ ವತಿಯಿಂದ ನಗರದ ಹೂಟಗಳ್ಳಿಯ ದಕ್ಷ ಕಾಲೇಜಿನಲ್ಲಿ ನಡೆದ ಪಠ್ಯಾಧರಿತ ರಂಗರೂಪ ಪ್ರದರ್ಶನದಲ್ಲಿ ಸಾಧಕ ಗಣ್ಯರಾದ ಡಾ.ಕೆ.ಬಿ. ಲಿಂಗರಾಜು, ಟಿ. ಸತೀಶ್ ಜವರೇಗೌಡ, ಡಾ.ಪಿ. ಜಯಚಂದ್ರರಾಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಡಾ. ಮೀರಾ ಶಿವಲಿಂಗಯ್ಯ, ಪ್ರೊ. ನಂಜಯ್ಯ ಹೊಂಗನೂರು, ಚಂದ್ರು ಮಂಡ್ಯ, ಅಭಿಷೇಕ್ ಚಿತ್ರದಲ್ಲಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಾಧಕ ಗಣ್ಯರಾದ ಡಾ.ಕೆ.ಬಿ. ಲಿಂಗರಾಜು, ಟಿ. ಸತೀಶ್ ಜವರೇಗೌಡ, ಡಾ.ಪಿ. ಜಯಚಂದ್ರರಾಜು ಅವರನ್ನು ಸನ್ಮಾನ
ಪ್ರತಿಯೊಬ್ಬ ವ್ಯಕ್ತಿಗೂ ಪ್ರಕೃತಿ, ಸಂಸ್ಕೃತಿ, ಸೃಜನಶೀಲತೆ ಬಹಳ ಮುಖ್ಯ. ಈ ಮೂರು ಸಂಗತಿಗಳನ್ನು ಮೈಗೂಡಿಸಿಕೊಂಡವರು ಜೀವನದಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಪ್ರೊ. ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.
ಅದಮ್ಯ ರಂಗಶಾಲೆಯ ವತಿಯಿಂದ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನ ಸಭಾಂಗಣದಲ್ಲಿ ನಡೆದ 'ಪಠ್ಯಾಧಾರಿತ ರಂಗರೂಪ ಪ್ರದರ್ಶನ ಹಾಗೂ ಗಣ್ಯ ಸಾಧಕರಿಗೆ ಅಭಿನಂದನ ಸಮಾರಂಭ'ದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸೃಜನಶೀಲತೆ ಇದ್ದವರು ಸಾಧಕರಾಗುತ್ತಾರೆ ಎಂಬುದಕ್ಕೆ ಕುವೆಂಪು, ದೇಜಗೌ, ಹಾಮಾನಾ ನಮಗೆ ಶ್ರೇಷ್ಠ ಮಾದರಿ ಎಂದರು.
ಯಾವುದೇ ವ್ಯಕ್ತಿಗೆ ಸೃಜನಶೀಲತೆಯ ಗುಣ ತುಂಬ ಮುಖ್ಯವಾಗಿರಬೇಕು. ಸೃಜನಶೀಲತೆ ಇದ್ದಾಗ ಮಾತ್ರ ವ್ಯಕ್ತಿಯೊಬ್ಬ ಉತ್ತಮ ವಿದ್ಯಾರ್ಥಿ, ಶಿಕ್ಷಕ, ಕವಿ, ಕಲಾವಿದ, ಇಂಜಿನಿಯರ್ ಎನಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅವನು ಸಮಾಜಮುಖಿಯಾಗಿ ಬದುಕಲು ನೆರವಾಗುತ್ತದೆ ಎಂದರು.
ಪ್ರಸ್ತುತ ನಮಗೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಅನಿವಾರ್ಯವಾಗಿ ಬೇಕು. ನಾಗರಿಕತೆಯ ಆದಿಯಿಂದ ಜ್ಞಾನವಿದೆ. ಮನುಷ್ಯ ಮುಂದುವರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಸಮಾಜ ಪ್ರಗತಿ ಹೊಂದಲು ಸಹಕಾರಿಯಾದವು. ಆದರೆ, ವಿಜ್ಞಾನ ಮತ್ತು ತಂತ್ರಜ್ಞಾನದ ಅಡಿಯಳಾಗಿ ನಮ್ಮ ಮೂಲ ಗ್ರಾಮೀಣ ಸಂಸ್ಕೃತಿಯ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ತಂತ್ರಜ್ಞಾನದ ದಾಸರಾಗಿರುವ ಇಂದಿನ ಮಕ್ಕಳು, ಯುವಜನರು ಗ್ರಾಮೀಣ ಸಂಸ್ಕೃತಿ ಮತ್ತು ಜನರಿಂದ ದೂರವಾಗುತ್ತಿದ್ದಾರೆ. ಅವರಿಗೆ ಹಳ್ಳಿಯ ಅಜ್ಜ-ಅಜ್ಜಿಯರ ಸಂಪರ್ಕ ಮತ್ತು ಸಂಬಂಧವಿಲ್ಲ. ಇದರಿಂದಾಗಿ ಅವರಲ್ಲಿ ಪ್ರಜ್ಞಾವಂತಿಕೆ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಮಾತನಾಡಿ, ಶಿಕ್ಷಣವು ಕೇವಲ ಮಾಹಿತಿಯನ್ನು ಮಾತ್ರ ಧಾರೆಯೆರೆಯುವುದಿಲ್ಲ. ಅದು ದೈಹಿಕ ಮತ್ತು ಬೌದ್ಧಿಕ ಶಕ್ತಿಯ ಹೆಚ್ಚಿಸುವ ಜೊತೆಗೆ, ಅಂತಃರಂಗದ ಸಂಸ್ಕಾರವನ್ನು ಬೆಳಗುಸುತ್ತದೆ. ಇದಕ್ಕೆ ಪೂರಕವಾಗಿ ಪಠ್ಯದ ರಂಗರೂಪದ ಪ್ರದರ್ಶನ ವ್ಯಕ್ತಿಯಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವ ಬೆಳೆಸುತ್ತದೆ ಎಂದರು.
ಕನ್ನಡ ಭಾಷೆಗೊಂದು ಜೀವಶಕ್ತಿಯಿದೆ. ಅದು ನಮ್ಮನ್ನು ಸದಾ ಒಟ್ಟಿಗೆ ಬೆಸೆಯುತ್ತದೆ. ಒಂದು ಅನುಭವವನ್ನು ಮನಸ್ಸಿಗೆ ಪರಿಣಾಮಕಾರಿಯಾಗಿ ಮುಟ್ಟುವಂತೆ ಮಾಡುತ್ತದೆ. ಸಾಹಿತ್ಯದಲ್ಲಿ ಮಾನವೀಯ ಗುಣಗಳಿವೆ. ಈ ಗುಣಗಳನ್ನು ಭಾಷಾ ಪಠ್ಯವಸ್ತು ಬಿಂಬಿಸುತ್ತದೆ. ಅದನ್ನು ರಂಗರೂಪಕ್ಕೆ ಇಳಿಸಿದರೆ ಮತ್ತಷ್ಟು ಮನದಟ್ಟಾಗುತ್ತದೆ. ಚಲನಚಿತ್ರಗಳಿಗಿಂತ ರಂಗರೂಪಕಗಳಲ್ಲಿ ಅಪಾರ ಜೀವಂತಿಕೆಯಿರುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯ ಸಾಧಕರಾದ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಗ್ಲೋಬಲ್ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷ ಡಾ.ಪಿ. ಜಯಚಂದ್ರರಾಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಡಾ.ಕೆ.ಬಿ. ಲಿಂಗರಾಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ 'ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ' ಪುರಸ್ಕೃತ ಸಾಹಿತಿ ಟಿ. ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ದಕ್ಷ ಪಿಯು ಕಾಲೇಜಿನ ಪ್ರಾಂಶುಪಾಲ ಅಭಿಷೇಕ್, ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ಪದಾಧಿಕಾರಿಗಳಾದ ಸಿ.ಎಸ್. ರಾಘವೇಂದ್ರ, ನಾಗೇಶ್ ಕಾವ್ಯಪ್ರಿಯ, ಜಿ. ರವೀಂದ್ರ ಕುಮಾರ್, ಕವಯತ್ರಿ ಸುಪ್ರಿಯಾ ಶಿವಣ್ಣ ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕನ್ನಡ ಭಾಷಾ ಪಠ್ಯಾಧಾರಿತ ರಂಗರೂಪ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net